ಸಿದ್ದಾಪುರ, ಜ. ೨: ಅಮ್ಮತ್ತಿ ಭಾಗದಲ್ಲಿ ಬೀಡು ಬಿಟ್ಟಿರುವ ಮತ್ತೊಂದು ಸಲಗವನ್ನು ಸೆರೆ ಹಿಡಿಯಲು ಅರಣ್ಯ ಇಲಾಖಾಧಿಕಾರಿಗಳು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಇತ್ತೀಚೆಗಷ್ಟೇ ಸಿದ್ದಾಪುರ ಭಾಗದ ಕರಡಿಗೋಡು ಗ್ರಾಮದ ಕಾಫಿ ತೋಟದ ಒಳಗೆ ಬೀಡು ಬಿಟ್ಟು ದಾಂಧಲೆ ನಡೆಸುತ್ತಿದ್ದ ಹಾಗೂ ಮಾನವನ ಮೇಲೆ ದಾಳಿ ನಡೆಸುತ್ತಿದ್ದ ಸಲಗವೊಂದನ್ನು ಸೆರೆ ಹಿಡಿದು ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರ ಮಾಡಲಾಗಿತ್ತು. ಇದೀಗ ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಅಮ್ಮತ್ತಿ ಭಾಗದ ಹೊಸೂರು-ಬೆಟ್ಟಗೇರಿ, ಇಂಜಿಲಗೆರೆ, ಕಳತ್ಮಾಡು ಭಾಗದ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಮತ್ತೊಂದು ಸಲಗವನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದರು. ಈಗಾಗಲೇ ಉಪಟಳ ನೀಡುತ್ತಿರುವ ಸಲಗದ ಗುರುತು ಪತ್ತೆಯಾಗಿದ್ದು, ಸಲಗವನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳು ಕಾಫಿ ತೋಟದೊಳಗೆ ಹುಡುಕಾಟ ನಡೆಸಿದರು. ಈಗಾಗಲೇ ಜಿಲ್ಲೆಯಲ್ಲಿ ೪ ಕಾಡಾನೆಗಳನ್ನು ಸೆರೆ ಹಿಡಿಯಲು ಆದೇಶ ಬಂದಿದ್ದು, ವೀರಾಜಪೇಟೆ ವಲಯದಲ್ಲಿ ೨ ಕಾಡಾನೆಗಳ ಪೈಕಿ ಒಂದನ್ನು ಈಗಾಗಲೇ ಸೆರೆ ಹಿಡಿದಿದ್ದು ಮುಂದಿನ ಕೆಲವು ದಿನಗಳಲ್ಲಿ ಮತ್ತೊಂದು ಸಲಗವನ್ನು ಸೆರೆ ಹಿಡಿಯಲು ಅರಣ್ಯ ಇಲಾಖಾಧಿಕಾರಿಗಳು ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಕಾರ್ಯಾಚರಣೆಗೆ ನೆರವು ನೀಡುತ್ತಿರುವ ಸಾಕಾನೆಗಳು ಹುಣಸೂರಿಗೆ ತೆರಳಿದ್ದು, ಅಲ್ಲಿ ಕಾಡಾನೆ ಸೆರೆ ಹಿಡಿದ ಬಳಿಕ ಇಲ್ಲಿಗೆ ಆಗಮಿಸಿ ಸಲಗವನ್ನು ಸೆರೆ ಹಿಡಿಯಲು ಮುಂದಾಗುವುದಾಗಿ ತಿಳಿದು ಬಂದಿದೆ. ಎ.ಸಿ.ಎಫ್ ನೆಹರೂ ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿ ದೇಯಂಡ ಸಂಜಿತ್ ಸೋಮಯ್ಯ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಕುಶಾಲನಗರ

ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಮೋದೂರು, ನಲ್ಲೂರು ಭಾಗದ ಕಾಫಿ ತೋಟದೊಳಗೆ ಬೀಡುಬಿಟ್ಟಿರುವ ಸಲಗವನ್ನು ಸೆರೆ ಹಿಡಿಯಲು ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಚೆಟ್ಟಳ್ಳಿ ಸಮೀಪದ ಮೋದೂರು ನಲ್ಲೂರು, ಅತ್ತೂರು ಗ್ರಾಮಗಳ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಾ ಮಾನವನ ಮೇಲೆ ದಾಳಿ ನಡೆಸುತ್ತಿರುವ ಸಲಗವೊಂದನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯು ಸಜ್ಜಾಗಿದೆ. ಈಗಾಗಲೇ ಉಪಟಳ ನೀಡುತ್ತಿರುವ ಸಲಗವನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ಅದರ ಚಲನ-ವಲನವನ್ನು ಕಂಡು ಹಿಡಿಯಲಾಗಿದ್ದು, ಆನೆಯನ್ನು ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಲಗದ ಸೆರೆಗೆ ಅರಣ್ಯ ಇಲಾಖೆಯು ಸೋಮವಾರದಿಂದ ಕಾರ್ಯಾಚರಣೆ ಯನ್ನು ಹಮ್ಮಿಕೊಂಡಿರುವುದಾಗಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ ಶಿವರಾಂ ತಿಳಿಸಿದ್ದಾರೆ. ಸೋಮವಾರದಂದು ಅರಣ್ಯ ಇಲಾಖೆಯ ಸಿಬ್ಬಂದಿಗಳು ಮೋದೂರು, ನಲ್ಲೂರು, ಅತ್ತೂರು, ಭಾಗದಲ್ಲಿ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಸಲಗದೊಂದಿಗೆ ಹೆಣ್ಣಾನೆಗಳು ಹಾಗೂ ಮರಿಯಾನೆಗಳು ಕಂಡು ಬಂದವು. ಸದ್ಯದಲ್ಲೇ ಸಲಗವನ್ನು ಸೆರೆ ಹಿಡಿಯುವ ವಿಶ್ವಾಸವನ್ನು ಅರಣ್ಯ ಇಲಾಖಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕಾಡಾನೆಗಳನ್ನು ಸೆರೆ ಹಿಡಿಯುವ ಆದೇಶ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್ ಮೂರ್ತಿ ಹಾಗೂ ಆನೆ ಕಾರ್ಯ ಪಡೆಯ ಮುಖ್ಯಸ್ಥರಾದ ಕೆ.ಟಿ ಪೂವಯ್ಯ ಮಾರ್ಗದರ್ಶನದಲ್ಲಿ ಎ.ಸಿ.ಎಫ್ ಗೋಪಾಲ್ ಹಾಗೂ ವಲಯ ಅರಣ್ಯಾಧಿಕಾರಿ ಕೆ.ಬಿ ಶಿವರಾಂ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.

-ವಾಸು