ಮಡಿಕೇರಿ, ಜ. ೨: ಆರ್.ಟಿ.ಸಿ. ವಿತರಣೆ ಶುಲ್ಕವನ್ನು ದುಪ್ಪಟ್ಟು ಹೆಚ್ಚಿಸಿರುವ ಸರ್ಕಾರದ ಕ್ರಮ ಹಗಲು ದರೋಡೆಯಂತಾಗಿದೆ ಎಂದು ಕಾಂಗ್ರೆಸ್ ಕೊಡಗು ಜಿಲ್ಲಾ ವಕ್ತಾರ ಹಾಗೂ ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನ ಟೀಕಿಸಿದ್ದಾರೆ.
ದಿನಾಂಕ ೧೨.೧೦.೨೦೨೨ರ ಆದೇಶದ ಮೇರೆಗೆ ದಿನಾಂಕ ೨೬.೧೨.೨೦೨೨ ರಿಂದ ಹದಿನೈದು ರೂ. ಶುಲ್ಕ ಪಾವತಿ ಮಾಡಿ ಪಡೆಯುತ್ತಿದ್ದ ಆರ್‌ಟಿಸಿಗೆ ಹತ್ತು ರೂ. ಹೆಚ್ಚುವರಿಯಾಗಿ ೨೫ ರೂ. ಪಾವತಿಸಬೇಕಾಗಿದೆ. ಅಲ್ಲದೆ ನಾಲ್ಕು ಪುಟದ ನಂತರದ ಪ್ರತಿಗಳಿಗೆ ತಲಾ ಐದು ರೂ. ಶುಲ್ಕ ಕಟ್ಟಬೇಕಾಗಿದೆ. ರೈತರು ವಾರ್ಷಿಕವಾಗಿ ಹತ್ತಾರು ಬಾರಿ ಆರ್.ಟಿ.ಸಿ. ಪಡೆಯತ್ತಾರೆ. ಬೆಳೆ ಪರಿಹಾರ, ಖಾತೆ ವರ್ಗಾವಣೆ, ಜಮೀನು ಪರಭಾರೆ, ಬ್ಯಾಂಕ್ ಸಾಲ, ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಆದಾಯ ದೃಢೀಕರಣ, ನ್ಯಾಯಾಲಯದಲ್ಲಿ ಜಾಮೀನು ಪಡೆಯುವುದು, ಹೀಗೆ ಹಲವು ಕಾರಣಗಳಿಗೆ ಆರ್.ಟಿ.ಸಿ.ಯನ್ನು ಪಡೆಯುತ್ತಿದ್ದು ಸರ್ಕಾರ ಶುಲ್ಕ ಹೆಚ್ಚಳ ಮಾಡಿ ರೈತರು ಹಾಗೂ ಗ್ರಾಮೀಣ ಭಾಗದ ಜನರ ಶೋಷಣೆ ಮಾಡುತ್ತಿದೆ. ಕೊಡಗು ಜಿಲ್ಲೆಯಲ್ಲಿ ಗದ್ದೆ ಆರ್.ಟಿ.ಸಿ.ಯಲ್ಲಿ ಕುಟುಂಬದ ಎಲ್ಲಾ ಸದಸ್ಯರ ಹೆಸರು ನಮೂದಾಗಿರುವುದರಿಂದ ಕೆಲವು ಆರ್.ಟಿ.ಸಿ.ಗಳಲ್ಲಿ ಇಪ್ಪತ್ತಕ್ಕೂ ಅಧಿಕ ಹಾಳೆಗಳಿದ್ದು ಅದಕ್ಕೆ ಈಗ ನೂರು ರೂಗಳಿಗೂ ಅಧಿಕ ಪಾವತಿಸುವಂತಾಗಿದೆ.
ಈ ಹಿಂದೆ ಸರ್ಕಾರ ೧೨೦೦ ರೂ. ಇದ್ದ ಪೋಡಿ ಶುಲ್ಕವನ್ನು ೨೫೦೦ಕ್ಕೆ ಏರಿಸಿತ್ತು. ಈ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲ.ಸಹಾನುಭೂತಿ ಕೂಡ ಇಲ್ಲ ಎಂದು ತೆನ್ನಿರ ಮೈನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.