ಮಡಿಕೇರಿ, ಜ. ೧: ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ (ಎನ್.ಸಿ.ಎಸ್.ಟಿ.ಸಿ.), ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆ-ಸ್ಟೆಪ್ಸ್), ಜಿಲ್ಲಾಡಳಿತ, ಕೊಡಗು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ಜಿಲ್ಲಾ ಪಂಚಾಯ್ತಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಹಾಗೂ ಮಡಿಕೇರಿ ನಗರದ ಎ.ಎಲ್.ಜಿ. ಕ್ರೆಸೆಂಟ್ ಶಾಲೆಯ ಸಂಯುಕ್ತಾಶ್ರಯದಲ್ಲಿ ‘ಯೋಗಕ್ಷೇಮಕ್ಕಾಗಿ ಜೀವಿ ಪರಿಸರ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳೋಣ’ ಎಂಬ ಕೇಂದ್ರ ವಿಷಯದಡಿ ೩೦ನೇ ರಾಷ್ಟಿçÃಯ ಮಕ್ಕಳ ವಿಜ್ಞಾನ ಸಮಾವೇಶವನ್ನು ಮಡಿಕೇರಿ ನಗರದ ಎ.ಎಲ್.ಜಿ. ಕ್ರೆಸೆಂಟ್ ಶಾಲೆಯಲ್ಲಿ ತಾ. ೩ ರಂದು ಬೆಳಿಗ್ಗೆ ೧೦ ಗಂಟೆಗೆ ಏರ್ಪಡಿಸಲಾಗಿದೆ.

ಜಿಲ್ಲಾಧಿಕಾರಿ ಡಾ ಬಿ.ಸಿ. ಸತೀಶ್ ಸಮ್ಮೇಳನ ಉದ್ಘಾಟಿಸಲಿದ್ದು, ಎ.ಎಲ್.ಜಿ. ಕ್ರೆಸೆಂಟ್ ಶಾಲೆಯ ಕಾರ್ಯದರ್ಶಿ ಜಿ.ಎಚ್. ಮಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ಸಮಾವೇಶದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಡಿಡಿಪಿಐ ಸಿ. ರಂಗಧಾಮಯ್ಯ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ. ಬೇಬಿಮ್ಯಾಥ್ಯೂ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಅಪರಾಹ್ನ ೩ ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಜಿ.ಪಂ. ಸಿಇಓ ಡಾ ಎಸ್.ಆಕಾಶ್ ಕಿರಿಯ ವಿಜ್ಞಾನಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಿದ್ದಾರೆ. ಕೂಡಿಗೆ ಡಯಟ್ ಪ್ರಾಂಶುಪಾಲ ಬಿ.ವಿ. ಮಲ್ಲೇಶಪ್ಪ, ಜಿಲ್ಲಾ ಕ.ಸಾ.ಪ.ಅಧ್ಯಕ್ಷ ಎಂ.ಪಿ. ಕೇಶವಕಾಮತ್ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಜಿಲ್ಲಾಮಟ್ಟದ ಸಮಾವೇಶದಲ್ಲಿ ಉತ್ತಮವಾಗಿ ವೈಜ್ಞಾನಿಕ ಯೋಜನಾ ಪ್ರಬಂಧ ಮಂಡಿಸುವ ೧೦ ತಂಡಗಳು ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾಗಲಿವೆ ಎಂದು ಸಮಾವೇಶದ ಜಿಲ್ಲಾ ಸಂಯೋಜಕ ಜಿ. ಶ್ರೀಹರ್ಷ ತಿಳಿಸಿದ್ದಾರೆ.