ಕಣಿವೆ, ಜ. ೧: ಮಕ್ಕಳನ್ನು ವಿದ್ಯೆಯ ಜೊತೆಗೆ ಸಾಂಸ್ಕೃತಿಕವಾಗಿ ಸನ್ನದ್ದಗೊಳಿಸುವ ಮೂಲಕ ಅವರಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಬೇಕಾದ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ. ಶಶಿಧರ್ ಹೇಳಿದರು.
ಕುಶಾಲನಗರದ ನಾದಾಂತ ನಾಟ್ಯ ಮಯೂರಿ ನೃತ್ಯಾಲಯದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜರ ಕಾಲದಲ್ಲಿ ಕಲೆ, ಶಿಲ್ಪಕಲೆ, ನಾಟಕ ಮೊದಲಾದ ಕಲೆಗಳಿಗೆ ರಾಜಾಶ್ರಯವಿತ್ತು. ಆದರೆ ಇಂದು ಮಕ್ಕಳನ್ನು ಕೇವಲ ಪುಸ್ತಕದ ಹುಳುಗಳಾಗಿಸುವ ಕೆಲಸವಾಗುತ್ತಿದೆ ಎಂದು ವಿಷಾದಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಸಾಂಸ್ಕೃತಿಕ ನಗರವಾಗಿ ಬೆಳೆಯುತ್ತಿರುವ ಕುಶಾಲನಗರ ತನ್ನೊಳಗೆ ಹಲವು ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿರುವುದರಿAದ ಇಲ್ಲಿ ಕಲೆ, ಸಂಗೀತ, ಸಾಹಿತ್ಯ ಹಾಗೂ ನೃತ್ಯಗಳಂತಹ ಪ್ರಾಕಾರಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.
ಮಡಿಕೇರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ ಇಲಾಖೆಯ ವತಿಯಿಂದ ನಡೆಯುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು. ಹಿರಿಯ ಕಲಾವಿದ ಬಿ.ಸಿ. ಶಂಕರಯ್ಯ ಹಾಗೂ ನಾದಾಂತ ನಾಟ್ಯಮಯೂರಿ ನೃತ್ಯ ಶಾಲೆಯ ಸ್ಥಾಪಕಿ ವಿದೂಷಿ ಮಂಜು ಭಾರ್ಗವಿ ಮಾತನಾಡಿದರು.
ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಉಪಾಧ್ಯಕ್ಷ ಹೆಬ್ಬಾಲೆ ರಘು, ವೆಂಕಟೇಶ್ವರ ಬಡಾವಣೆಯ ಹಿತರಕ್ಷಣಾ ಸಮಿತಿ ಅಧ್ಯಕ್ಷ ರಮೇಶ್, ನೃತ್ಯ ಶಾಲೆಯ ವ್ಯವಸ್ಥಾಪಕ ಶಶಿಕುಮಾರ್, ವಿಶಾಲಾಕ್ಷಿ ಇದ್ದರು.
ಇಂದುಶ್ರೀ ನಿರೂಪಿಸಿದರು. ರೇಖಾ ಸುಬ್ರಮಣ್ಯ ಸ್ವಾಗತಿಸಿದರು. ಶ್ರೇಣಿ ವಂದಿಸಿದರು. ಬಳಿಕ ನೃತ್ಯಾಲಯದ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು.