ಕೂಡಿಗೆ, ಜ. ೧ : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ, ಹುದುಗೂರು, ಕಾಳಿದೇವನ ಹೊಸೂರು ವ್ಯಾಪ್ತಿಯ ಹಾರಂಗಿ ಅಚ್ಚುಕಟ್ಟು ಪ್ರದೇಶವಾಗಿದ್ದು, ಈ ವ್ಯಾಪ್ತಿಯಲ್ಲಿ ಹೆಚ್ಚು ಭತ್ತದ ಬೆಳೆಯನ್ನು ಬೆಳೆಯಲಾಗಿದೆ, ಬೆಳೆಯನ್ನು ಕಟಾವು ಮಾಡಿ ಈಗಾಗಲೇ ಜಮೀನಿನಿಂದ ತಮ್ಮ ಸಮೀಪದ ಮನೆಯ ಅಂಗಳಗಳಿಗೆ ಭತ್ತದ ಬೆಳೆಯನ್ನು ತಂದು ಗುಡ್ಡೆ ಹಾಕಲಾಗಿದೆ. ಆದರೆ ಕಾಡಾನೆಗಳು ಗದ್ದೆಗಳಲ್ಲಿ ಬೆಳೆ ಇಲ್ಲದೆ ಇರುವುದರಿಂದ ಸಮೀಪದ ಮನೆಗಳ ಅಂಗಳಕ್ಕೆ ದಾಳಿ ಮಾಡಿ ಬೆಳೆ ನಷ್ಟದ ಜೊತೆಗೆ ಸಮೀಪದಲ್ಲಿ ಬೆಳೆಸಲಾದ ಬಾಳೆ, ಮತ್ತು ಸಿಹಿಗೆಣಸುಗಳನ್ನು ನಷ್ಟ ಪಡಿಸಿವೆ. ಅಲ್ಲದೆ ರಾತ್ರಿಯ ಸಮಯದಲ್ಲಿ ರಸ್ತೆಯಲ್ಲಿ ತಿರುಗಾಡುವ ವಾಹನಗಳ ಮೇಲೆ ದಾಳಿ ಮಾಡಲು ಆರಂಭಮಾಡಿವೆ, ಇದರಿಂದಾಗಿ ರೈತರು, ಸಾರ್ವಜನಿಕರು ಭಯಭೀತರಾಗಿದ್ದಾರೆ.

ಬೆಂಡೆಬೆಟ್ಟದ ಮೀಸಲು ಅರಣ್ಯ ಪ್ರದೇಶ ಕಡೆಯಿಂದ ಬರುವ ಕಾಡಾನೆಗಳು ಬೆಂಡೆಬೆಟ್ಟದ ವ್ಯಾಪ್ತಿಯಲ್ಲಿ ಸೋಲಾರ್ ವ್ಯವಸ್ಥೆ ಮತ್ತು ಬೃಹತ್ ಕಂದಕವನ್ನು ತೋಡಿದರೂ ಸಹ ಹಾರಂಗಿ ನದಿಯ ಅಂಚಿನ ಪ್ರದೇಶದ ತೋಡಿನ ಮೂಲಕ ಇಳಿದು ನಂತರ ಹಾರಂಗಿ ನದಿಯನ್ನು ದಾಟಿ ಹುದುಗೂರು ಮದಲಾಪುರ ಕಾಳಿದೇವನ ಹೊಸೂರು, ಸೀಗೆಹೊಸೂರು, ಬ್ಯಾಡಗೊಟ್ಟ ಗ್ರಾಮದ ರೈತರ ಜಮೀನಿನ ಬೆಳೆಯ ಮೇಲೆ ದಾಳಿ ಮಾಡುತ್ತಿವೆ.

ಇದರ ಜೊತೆಯಲ್ಲಿ ಈಗಾಗಲೇ ಗದ್ದೆಗಳಲ್ಲಿ ಬೆಳೆಯು ಕಡಿಮೆಯಾದಂತೆಯೇ ಸಮೀಪದ ಮನೆಗಳ ಹತ್ತಿರ ಬರುತ್ತಿವೆ, ಇದರಿಂದಾಗಿ ಈ ವ್ಯಾಪ್ತಿಯ ರೈತರು, ಸಾರ್ವಜನಿಕ ತಿರುಗಾಡುವುದೇ ಕಷ್ಟವಾಗಿದೆ. ಹಾರಂಗಿ ನದಿಯನ್ನು ದಾಟಿ ಸಂಜೆ ೬ ಗಂಟೆಗೆ ಬಂದಿರುವ ಕಾಡಾನೆಗಳ ಹಿಂಡು ಎರಡು ಭಾಗಗಳಾಗಿ ಹುದುಗೂರು ಹಾರಂಗಿಗೆ ತೆರಳುವ ಸಾರ್ವಜನಿಕರನ್ನು ಬೇನ್ನಟ್ಟಿದ ಪ್ರಸಂಗ ನಡೆದಿದೆ. ಹುದುಗೂರು ಗ್ರಾಮದ ಕಾಳೇಗೌಡ, ಕಾಂಚನ, ರಾಜು, ಮಾದಣ್ಣ, ಎಂಬವರ ಬೆಳೆಗಳನ್ನು ಸಂಪೂರ್ಣವಾಗಿ ಹಾಳುಮಾಡಿವೆ. ಸಂಬAಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸಮರ್ಪಕವಾದ ಸೋಲಾರ್ ಅಳವಡಿಕೆ ಮಾಡಬೇಕೆಂದು ಈ ಭಾಗದ ರೈತರ ಒತ್ತಾಯಿಸಿದ್ದಾರೆ.