ಕೂಡಿಗೆ, ಜ. ೧: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮತ್ತು ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ರೈತರಿಗೆ ತರಬೇತಿ ಕಾರ್ಯಾಗಾರ ಕೃಷಿ ತರಬೇತಿ ಕೇಂದ್ರದ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್ ನೆರವೇರಿಸಿ ಮಾತನಾಡಿ, ರೈತರು ಆಧುನಿಕ ತಂತ್ರಜ್ಞಾನದ ವೈಜ್ಞಾನಿಕ ಪದ್ಧತಿಯನ್ನು ಕೃಷಿಯಲ್ಲಿ ಅಳವಡಿಕೆ ಮಾಡಿಕೊಂಡು ಉತ್ತಮವಾದ ಬೆಳೆಯನ್ನು ಬೆಳೆಯುವ ಮೂಲಕ ಆರ್ಥಿಕವಾಗಿ ಮುಂದುವರೆದು ತಮ್ಮ ಭವಿಷ್ಯವನ್ನು ವೃದ್ಧಿಸಿಕೊಳ್ಳಲು ಇಂತಹ ತರಬೇತಿಗಳು ಅನುಕೂಲವಾಗುತ್ತವೆ ಎಂದರು.

ತರಬೇತಿಯಲ್ಲಿ ಎರೆಹುಳು ಗೊಬ್ಬರ ಹಾಗೂ ಅಣಬೆ ಬೇಸಾಯದ ಬಗ್ಗೆ ಕೆ.ವಿ.ಕೆ. ಗೋಣಿಕೊಪ್ಪ ಕೃಷಿ ವಿಜ್ಞಾನಿ ಹರೀಶ್ ರೈತರಿಗೆ ಸಮರ್ಪಕವಾದ ಮಾಹಿತಿಯನ್ನು ನೀಡಿದರು. ಡಾ. ಸುಜಾ ರಮೇಶ್ ಅವರು ಅಣಬೆ ಬೇಸಾಯ ಮತ್ತು ಮಣ್ಣು ಪರೀಕ್ಷೆಯ ಬಗ್ಗೆ ವಿಶೇಷವಾದ ತರಬೇತಿ ನೀಡಿದರು.

ಈ ಸಂದರ್ಭ ಕೂಡಿಗೆ ಕೃಷಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರಾದ ಗೌರಿ, ಕೃಷಿ ಇಲಾಖೆಯ ಅಧಿಕಾರಿ ಸುವರ್ಣ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯೆ ಫಿಲೋಮಿನಾ ಸೇರಿದಂತೆ ಮೂರು ತಾಲೂಕುಗಳ ೪೫ ರೈತರು ತರಬೇತಿಯಲ್ಲಿ ಭಾಗವಹಿಸಿದ್ದರು.