ಗೋಣಿಕೊಪ್ಪಲು, ಜ. ೧: ಹೊಸ ವರ್ಷದ ಸಂಭ್ರಮದ ನಡುವೆ ತಡ ರಾತ್ರಿ ನಗರದಲ್ಲಿ ಸರಣಿ ಅಪಘಾತ ಸಂಭವಿಸಿದೆ. ಹೊಸ ವರ್ಷದ ಮಧ್ಯರಾತ್ರಿ ೧೨-೩೦ ರ ವೇಳೆ ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಪರಿಮಳ ಮಂಗಳ ವಿಹಾರದ ಬಳಿ ಘಟನೆ ನಡೆದಿದೆ.

ಕೈಕೇರಿ ಭಾಗದಿಂದ ತನ್ನ ಮಗಳನ್ನು ಕರೆತರಲು ಗೋಣಿಕೊಪ್ಪ ನಗರಕ್ಕೆ ಬೈಕ್‌ನಲ್ಲಿ ಆಗಮಿಸುತ್ತಿದ್ದ ಆರ್ಮುಗಂ ಎಂಬವರು ಪರಿಮಳ ವಿಹಾರ ಬಳಿ ಆಗಮಿಸಿದ ವೇಳೆ ಗೋಣಿಕೊಪ್ಪ ಪಟ್ಟಣದಿಂದ ವೀರಾಜಪೇಟೆ ಕಡೆಗೆ ತೆರಳುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ. ಈ ವೇಳೆ ಬೈಕ್ ಸವಾರ ಆರ್ಮುಗಂ ಎಂಬವರ ತಲೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಆರಂಭದಲ್ಲಿ ಡಿಕ್ಕಿ ಪಡಿಸಿದ ಕಾರು ಮುಂದೆ ಸಾಗಿ ಚಾಲಕನ ಅಜಾಗರೂಕತೆಯಿಂದ ಮತ್ತೊಂದು ಕಾರಿಗೂ ಡಿಕ್ಕಿ ಆಗಿದೆ. ಆದರೆ ಯಾವುದೇ ಅಪಾಯ ಸಂಭವಿಸಿಲ್ಲ. ರಾತ್ರಿ ಗಸ್ತಿನಲ್ಲಿದ್ದ ಗೋಣಿಕೊಪ್ಪ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ದೀಕ್ಷಿತ್ ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳದಲ್ಲಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರಿನಲ್ಲಿದ್ದವರು ನಾಪತ್ತೆಯಾಗಿದ್ದಾರೆ. ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.