ಮಡಿಕೇರಿ, ಡಿ. ೩೧: ಜಿಲ್ಲಾ ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ) ವತಿಯಿಂದ ವರ್ಷಂಪ್ರತಿ ನೀಡುವ ದಲಿತ ರತ್ನ ಪ್ರಶಸ್ತಿಯನ್ನು ಈ ಬಾರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಲಾಗುವುದು ಎಂದು ದಸಂಸ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಪ್ರಕಟಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಸುಮಾರು ೧೦ ಸಾವಿರ ಮಂದಿ ಸೇರುವ ನಿರೀಕ್ಷೆ ಹೊಂದಲಾಗಿದೆ. ಕುಶಾಲನಗರದಲ್ಲಿ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಿ ೫೦ ಬೈಕ್ ಗಳ ಜಾಥಾದೊಂದಿಗೆ ಮಡಿಕೇರಿಗೆ ಕರೆ ತರಲಾಗುವುದು. ಆ ಬಳಿಕ ಫೀ.ಮಾ. ಕಾರ್ಯಪ್ಪ ವೃತ್ತದಿಂದ ೧೦೦ಕ್ಕೂ ಅಧಿಕ ವಾಹನ ಜಾಥಾ, ಕಳಸ ಮೆರವಣಿಗೆಯೊಂದಿಗೆ ಸಿದ್ದರಾಮಯ್ಯ ಅವರನ್ನು ವೈಭವದಿಂದ ಸ್ವಾಗತಿಸಲಾಗುವುದು. ಇವರೊಂದಿಗೆ ಮಾಜಿ ಸಚಿವರುಗಳಾದ ಹೆಚ್.ಸಿ. ಮಹದೇವಪ್ಪ, ಧ್ರುವನಾರಾಯಣ್, ಪ್ರಿಯಾಂಕ್ ಖರ್ಗೆ ಭಾಗವಹಿಸ ಲಿದ್ದಾರೆ ಎಂದು ವಿವರಿಸಿದರು.

ಸಿದ್ದರಾಮಯ್ಯ ದಲಿತ ವರ್ಗದ ಶ್ರೇಯೋಭಿವೃದ್ಧಿಗೆ ಅನೇಕ ಕೊಡುಗೆ ನೀಡಿದ್ದಾರೆ. ಅವರ ಸಂಪುಟದಲ್ಲಿ ದಲಿತ ವರ್ಗದ ೮ ಮಂದಿಗೆ ಅವಕಾಶ ನೀಡಿದ್ದಾರೆ. ಅವರ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತದೆ ಎಂದರು.

ಮಡಿಕೇರಿ ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ ಮಾತನಾಡಿ, ಶೈಕ್ಷಣಿಕವಾಗಿ ಸಾಧನೆಗೈದ ಎಸ್.ಎಸ್.ಎಲ್.ಸಿ. ಮೇಲ್ಪಟ್ಟು ಎಲ್ಲಾ ರೀತಿಯ ಶೈಕ್ಷಣಿಕ ವಿಷಯದಲ್ಲಿ ೬೦% ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುವುದು. ಅರ್ಹರು ತಮ್ಮ ಜಾತಿ ದೃಢೀಕರಣ ಪತ್ರ ಹಾಗೂ ಅಂಕಪಟ್ಟಿ ಸಹಿತ ಸ್ವವಿವರವನ್ನು ಮೊಬೈಲ್ ಸಂಖ್ಯೆ ೯೬೧೧೭೬೬೭೧೩, ೯೪೮೧೫೨೩೬೪೮ ಗೆ ಅಥವಾ ದಸಂಸ ಕಚೇರಿ, ಗಂಗೋತ್ರಿ ಕಟ್ಟಡ, ಕಾಲೇಜು ರಸ್ತೆ ಮಡಿಕೇರಿ ಇಲ್ಲಿಗೆ ಕಳುಹಿಸುವಂತೆ ಕೋರಿದರು.

ಗೋಷ್ಠಿಯಲ್ಲಿ ಸಂಘಟನಾ ಸಂಚಾಲಕ ಹೆಚ್.ಕೆ.ಗಣೇಶ್, ಸಂಚಾಲಕ ಜಯಂತ್ ಕುಮಾರ್, ನಗರ ಸಂಚಾಲಕ ಸಿ.ಪಿ. ಸಿದ್ದೇಶ್ವರ್, ಸದಸ್ಯ ಕೆ.ಪಿ. ರಂಜಿತ್ ಹಾಜರಿದ್ದರು.