ಸಿದ್ದಾಪುರ, ಡಿ. ೩೧: ಪೊನ್ನಂಪೇಟೆ ತಾಲೂಕು ಕೆ. ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರಿ ಭೂಮಿಯಲ್ಲಿ ನಿವೇಶನ ರಹಿತ ಆದಿವಾಸಿಗಳು ಗುಡಿಸಲುಗಳನ್ನು ಹಾಕಿದ ಸಂದರ್ಭ ಯಾವುದೇ ಮಾಹಿತಿ ನೀಡದೆ ಅಧಿಕಾರಿಗಳು ತೆರವುಗೊಳಿಸಿದ ಕ್ರಮ ಖಂಡನೀಯ. ಇದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಮೇಲೆ ನಡೆಸಿದ ದೌರ್ಜನ್ಯವಾಗಿರುವುದರಿಂದ ಇಂತಹ ಅಧಿಕಾರಿಗಳ ವಿರುದ್ಧ ದೌರ್ಜನ್ಯ ವಿರೋಧಿ ಕಾಯಿದೆ ಅನುಸಾರ ಮೊಕದ್ದಮೆ ದಾಖಲಿಸಬೇಕು ಎಂದು ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಸುನಿಲ್ ಒತ್ತಾಯಿಸಿದರು. ಭಾರತ ಕಮ್ಯೂನಿಸ್ಟ್ ಪಕ್ಷದ ೯೮ನೇ ಸಂಸ್ಥಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಧಿಕಾರಿಗಳ ದರ್ಪ ತಾರಕಕ್ಕೇರಿದ್ದು, ಜನಸಾಮಾನ್ಯರು ತನ್ನ ಹಕ್ಕುಗಳನ್ನು ಕೇಳುವುದೇ ಮಹಾಪಾಪ ಎಂಬAತೆ ಭಯದಲ್ಲಿ ಜೀವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಮೇಶ್ ಮಾಯಮುಡಿ ಮಾತನಾಡಿ, ಕಾರ್ಮಿಕ ದಲಿತ ಸಮುದಾಯದ ಹಕ್ಕುಗಳು, ಸೌಲಭ್ಯಗಳು ಉಳ್ಳವರ ಪಾಲಾಗುತ್ತಿದ್ದು ಸಮಸ್ಯೆಗಳನ್ನು ಕೈಗೆತ್ತಿಕೊಂಡು ಇಡೀ ದೇಶವೇ ಭ್ರಮಾನಿರಸನದಲ್ಲಿ ಬದುಕುತ್ತಿದೆ ಎಂದರು.

ಈ ಸಂದರ್ಭ ಪೊನ್ನಂಪೇಟೆ ತಾಲೂಕು ಕಾರ್ಯದರ್ಶಿ ಶಾಂತಿ, ಸಿಪಿಐ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಗಣೇಶ್, ಬೇಬಿ, ಜೆ.ಕೆ. ತಿಮ್ಮ, ಆಶೋಕ, ಬಿಂದು, ಮಮತ ಮೊದಲಾದವರು ಉಪಸ್ಥಿತರಿದ್ದರು.