ಮಡಿಕೇರಿ, ಡಿ. ೩೧: ಇದೇನಪ್ಪಾ... ಕಳೆದ ವರ್ಷ ಹೊಸ ಸಂವತ್ಸರವನ್ನು ಬರಮಾಡಿಕೊಂಡ ನೆನಪೇ ಇನ್ನೂ ಮರೆಯಾಗಿಲ್ಲ... ಅಷ್ಟರಲ್ಲೇ ಮತ್ತೊಂದು ನೂತನ ವರ್ಷ ಎದುರಾಗಿಬಿಟ್ಟಿದೆ ಎಂಬ ಮೆಲುಕುಗಳ ನಡುವೆ ೨೦೨೨ ಇತಿಹಾಸದ ಪುಟವನ್ನು ಸೇರಿದೆ. ಹೊಸ ಹೊಸ ಕಲ್ಪನೆಗಳು- ಆಶೋತ್ತರಗಳು- ಭರವಸೆಗಳು ಈ ರೀತಿಯ ಕನಸನ್ನು ಹೊತ್ತು ನೂತನ ವರ್ಷ ೨೦೨೩ನ್ನು ಜನತೆ ಬರಮಾಡಿಕೊಂಡಿದ್ದಾರೆ. ಜಗತ್ತಿನಾದ್ಯಂತ ಕ್ಯಾಲೆಂಡರ್‌ನ ಪ್ರಕಾರ ಹೊಸ ವರುಷದ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಅವರವರ ಪದ್ಧತಿ - ಪರಂಪರೆಯAತೆ ಹಲವರಿಗೆ ಬೇರೆ ಬೇರೆ ದಿನಗಳ ಪ್ರಾರಂಭ ಹೊಸ ವರ್ಷ ಎಂಬುದು ರೂಢಿಯಲ್ಲಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಸಾರ್ವತ್ರಿಕವಾದ ರೀತಿಯಲ್ಲಿ ಭಾರೀ ಸಂಭ್ರಮ - ಸಡಗರಗಳಿಂದ ಆಚರಿಸಲ್ಪಡುತ್ತಿರುವುದು ಕ್ಯಾಲೆಂಡರ್ ವರ್ಷದ ಪ್ರಾರಂಭಿಕ ದಿನವನ್ನು... ಈ ವಿಜೃಂಭಣೆಯಲ್ಲಿ ಕೊಡಗು ಜಿಲ್ಲೆಯೂ ಹೊರತಾಗಿರಲಿಲ್ಲ... ಹತ್ತಾರು ರೀತಿಯ ಕಾರ್ಯಕ್ರಮಗಳ ನಡುವೆ ಪ್ರಕೃತಿಯ ಐಸಿರಿಯ ಕೊಡಗಿನಲ್ಲಿ ಸ್ಥಳೀಯ ಜನರೊಂದಿಗೆ ಅಪಾರ ಸಂಖ್ಯೆಯಲ್ಲಿ ತುಂಬಿ ತುಳುಕುತ್ತಿದ್ದ ಪ್ರವಾಸಿಗರು ೨೦೨೩ನ್ನು ಬರಮಾಡಿಕೊಂಡರು.

ಕೋವಿಡ್‌ನAತಹ ಆತಂಕ ಎದುರಾಗುತ್ತಿರುವ ಸನ್ನಿವೇಶವನ್ನೂ ಮರೆತಂತಿದ್ದ ಜನರು, ತಮ್ಮದೇ ಲೋಕದಲ್ಲಿ... ಹೊಸ ಗುಂಗಿನಲ್ಲಿ ಕಂಡುಬAದರು. ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳು, ಹೊಟೇಲ್, ಲಾಡ್ಜ್, ಹೋಂ ಸ್ಟೇ, ರೆಸಾರ್ಟ್ಗಳು ಭರ್ತಿಯಾಗಿದ್ದವು. ಅಲ್ಲಲ್ಲಿ ಕೆಲವಾರು ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿತ್ತು. ಹಾಡು- ನೃತ್ಯ, ಕ್ಯಾಂಪ್ ಫಯರ್, ಸಂಗೀತದ ಅಬ್ಬರ, ಪಟಾಕಿ- ಸಿಡಿಮದ್ದಿನ ಆಕರ್ಷಣೆಗಳು ಕೊಡಗಿನ ವಿಶೇಷ ಖಾದ್ಯಗಳ ಸವಿ... ಕೇಕ್ ಕತ್ತರಿಸುವುದು ಜೊತೆಗೆ ಪ್ರಸ್ತುತದ ಚಳಿಗೆ ಒಂದಷ್ಟು ಮೈ ಬಿಸಿಯೇರಿಸುವ ‘ಔಷಧಿ’ಯ ಕಿಕ್ ಈ ರೀತಿಯಾಗಿ ಸಂಭ್ರಮೋಲ್ಲಾಸದೊAದಿಗೆ ಎಲ್ಲರೂ... ಎಲ್ಲೆಲ್ಲೂ ‘‘ಹ್ಯಾಪಿ ನ್ಯೂ ಇಯರ್’’ನ ಸಂದೇಶಗಳ ವಿನಿಮಯದೊಂದಿಗೆ ತಡರಾತ್ರಿಯ ತನಕವೂ ಸಂಭ್ರಮದಲ್ಲಿ ನಿರತರಾಗಿದ್ದರು. ಕೊಡಗಿನಲ್ಲೇ ಇರುವ ಸ್ಥಳೀಯರಿಗಿಂತ ಹೊಸ ವರ್ಷಾಚರಣೆಗೆಂದೇ ಜಿಲ್ಲೆಯತ್ತ ಮುಖಮಾಡಿದ್ದ ಯುವ ಸಮೂಹದಲ್ಲಿ ಹೆಚ್ಚಿನ ಉತ್ಸಾಹ - ಉನ್ಮಾದ ಕಂಡುಬAದಿತ್ತು.

ಅAತೂ... ಇಂತು... ೨೦೨೨ರ ವರ್ಷ ನೇಪಥ್ಯಕ್ಕೆ ಸರಿದಿದೆ. ಹಲವಷ್ಟು ಕಹಿ ಘಟನೆಗಳೂ ಇದರೊಂದಿಗೆ ಮರೆಯಾಗಲಿ... ನೂತನ ಕ್ಯಾಲೆಂಡರ್ ವರ್ಷದಲ್ಲಿ ಎಲ್ಲವೂ ಸಿಹಿ ತರಲಿ ಎಂಬುದು ಜನತೆಯ ಸದಾಶಯವಾಗಿದೆ.

ಹ್ಯಾಪಿ ನ್ಯೂ ಇಯರ್-೨೦೨೩.

-ಶಶಿ ಸೋಮಯ್ಯ