ಕಣಿವೆ, ಡಿ. ೩೧: ಸ್ವಂತ ಜಾಗ ಹೊಂದಿಲ್ಲದ ವಯೋವೃದ್ಧೆ ಮಹಿಳೆಯೊಬ್ಬರ ಶವಸಂಸ್ಕಾರ ಮಾಡಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರಿಂದ ಪಂಚಾಯಿತಿ ಆಡಳಿತ ಮಂಡಳಿ ಸಾಮೂಹಿಕ ವಾಗಿ ನಿಲ್ಲುವ ಮೂಲಕ ಪೊಲೀಸರ ಭದ್ರತೆಯಲ್ಲಿ ಶವಸಂಸ್ಕಾರ ಮಾಡಿದ ಪ್ರಸಂಗ ಗುಡ್ಡೆಹೊಸೂರು ಬಳಿಯ ಸುಣ್ಣದಕೆರೆ ಬಳಿ ಇಂದು ಎದುರಾಯಿತು.

ಗುಡ್ಡೆಹೊಸೂರು ಗ್ರಾಮದಲ್ಲಿ ವಾಸವಿದ್ದ ಗಾಣಿಗ ಸಮುದಾಯದ ೮೫ರ ಪ್ರಾಯದ ವಯೋವೃದ್ಧೆ ಗೋವಿಂದಮ್ಮ ಎಂಬವರು ಶುಕ್ರವಾರ ಸಾವನ್ನಪ್ಪಿದರು.

ಇವರ ಶವಸಂಸ್ಕಾರಕ್ಕಾಗಿ ಗುಡ್ಡೆಹೊಸೂರು ವ್ಯಾಪ್ತಿಯ ಎರಡು ಕಿಮೀ ಅಂತರದಲ್ಲಿನ ಸುಣ್ಣದಕೆರೆ ಎಂಬ ಗ್ರಾಮದ ಸರ್ವೆ ನಂಬರ್ ೧ / ಠಿ೩ ರಲ್ಲಿ ಇದ್ದಂತಹ ೭೦ ಸೆಂಟು ಜಾಗದ ಪೈಕಿ ೪೦ ಸೆಂಟು ಜಾಗ ಗುಡ್ಡೆಹೊಸೂರು ಸಾರ್ವಜನಿಕ ಸ್ಮಶಾನವಾಗಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದ ಜಾಗದಲ್ಲಿ ಶವಸಂಸ್ಕಾರ ನಡೆಸಲು ಮುಂದಾದ ಸಂದರ್ಭ ಸ್ಥಳೀಯ ರಿಂದ ವಿರೋಧ ವ್ಯಕ್ತವಾಗಿತ್ತು.

ಈ ಮಧ್ಯೆ ಶನಿವಾರ ನಿಗದಿ ಯಾಗಿದ್ದ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿದ್ದ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರಾದಿಯಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಹಿತ ಸ್ಥಳಕ್ಕೆ ಆಗಮಿಸಿದರು.

ಪಂಚಾಯಿತಿ ಆಡಳಿತ ಮಂಡಳಿಯ ಮನವಿಗೂ ಸ್ಥಳೀಯರು ಮಣಿಯದಿದ್ದಾಗ ಕುಶಾಲನಗರ ಗ್ರಾಮಾಂತರ ಠಾಣೆಯಿಂದ ಪೊಲೀಸರನ್ನು ಬರಮಾಡಿಕೊಳ್ಳ ಲಾಯಿತು. ಸ್ಮಶಾನದಲ್ಲಿ ಶವ ಸಂಸ್ಕಾರಕ್ಕೆ ಗುಂಡಿಯನ್ನು ತೆಗೆಯಲು ಯಾರೂ ಬಾರದಿದ್ದಾಗ ಕೊನೆಗೆ ಪಂಚಾಯಿತಿ ಪಿಡಿಒ ಶ್ಯಾಂ ಅವರು ತಮ್ಮ ನಾಲ್ವರು ಪೌರ ಕಾರ್ಮಿಕರನ್ನು ಕರೆಸಿಕೊಂಡು ಗುಂಡಿಯನ್ನು ತೆಗೆಸುವ ಮೂಲಕ ಮೃತ ವೃದ್ಧೆಯ ಅಂತಿಮ ಸಂಸ್ಕಾರಕ್ಕೆ ಮುಂದಾದರು.

ಈ ಸಂದರ್ಭ ಸ್ಥಳಕ್ಕೆ ತೆರಳಿದ್ದ "ಶಕ್ತಿ" ಯೊಂದಿಗೆ ಪ್ರತಿಕ್ರಿಯಿಸಿದ ಪಂಚಾಯಿತಿ ಅಧ್ಯಕ್ಷೆ ಎಸ್.ಎಸ್. ನಂದಿನಿ, ಉಪಾಧ್ಯಕ್ಷೆ ಯಶೋಧ ಹಾಗೂ ೧೬ ಮಂದಿ ಸದಸ್ಯರುಗಳು, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಸೂಕ್ತ ಸ್ಥಳಾವಕಾಶ ಇಲ್ಲದ ಕಾರಣ ಸುಣ್ಣದಕೆರೆ ಬಳಿ ಜಿಲ್ಲಾಧಿಕಾರಿಗಳ ಆದೇಶದನ್ವಯ ೦. ೪೦ ಎಕರೆ ಜಾಗವನ್ನು ಗುರುತಿಸಿ ಕಳೆದ ಆರು ತಿಂಗಳ ಹಿಂದೆ ಬೇಲಿ ಅಳವಡಿಸಲಾಗಿತ್ತು.

ಆದರೆ ಸ್ಥಳೀಯ ಕೆಲವು ನಿವಾಸಿಗಳು ಗ್ರಾಮದಲ್ಲಿ ಬೇರೆ ಗ್ರಾಮದವರಿಗೆ ಸ್ಮಶಾನ ನಿರ್ಮಿಸಲು ಬಿಡುವುದಿಲ್ಲ ಎಂದು ಬೇಲಿ ಅಳವಡಿಸುವಾಗಲೂ ತಗಾದೆ ತೆಗೆದಿದ್ದರು.

ಸೂಕ್ತ ಜಾಗವಿಲ್ಲದ ನಿರ್ಗತಿಕ ವಯೋವೃದ್ದೆ ಯೊಬ್ಬರು ಸಾವನ್ನಪ್ಪಿದಾಗ ಅಂತ್ಯಕ್ರಿಯೆಗೆ ಅಡ್ಡಿಪಡಿಸಿದ್ದರ ಹಿನ್ನೆಲೆಯಲ್ಲಿ ಪೊಲೀಸರ ಭದ್ರತೆ ಪಡೆಯ ಬೇಕಾಯಿತು ಎಂದರು.

ಗ್ರಾಮಸ್ಥರ ವಾದವೇನು ? :

ಸುಣ್ಣದಕೆರೆ ಗ್ರಾಮದಲ್ಲಿ ೪೦ಕ್ಕೂ ಹೆಚ್ಚು ಪರಿಶಿಷ್ಟರ ಮನೆಗಳಿವೆ. ಇಲ್ಲಿಯ ಜನವಸತಿಯ ಸಮೀಪದಲ್ಲಿಯೇ ರಾಹು, ಗುಳಿಗ ಹಾಗೂ ಮುನೇಶ್ವರ ಸ್ವಾಮಿಯ ಸನ್ನಿಧಿ ಇವೆ.

ಪೂರ್ವಜರ ಕಾಲದಿಂದಲೂ ಪೂಜಿಸಿಕೊಂಡು ಬರುತ್ತಿರುವ ದೈವ ಸನ್ನಿಧಿ ಇರುವುದರಿಂದ ಅಲ್ಲಿ ಸ್ಮಶಾನ ನಿರ್ಮಿಸಲು ನಾವು ವಿರೋಧ ವ್ಯಕ್ತಪಡಿಸುತ್ತಿದ್ದೇವೆ.

ಜೊತೆಗೆ ಪರಿಶಿಷ್ಟರಾದ ನಮಗೆ ತೋಟಗಾರಿಕೆ ಇಲಾಖೆಯಿಂದ ನೀಡಿದ ಜಾಗವಿದು. ಇಲ್ಲಿ ಸೀಬೆ, ಮಾವು ಮೊದಲಾದ ತೋಟಗಾರಿಕಾ ಗಿಡ ಮರಗಳನ್ನು ಬೆಳೆಯಲಾಗಿದೆ. ಆದರೆ ಗುಡ್ಡೆಹೊಸೂರು ಪಂಚಾಯಿತಿ ಯವರು ಬೇರೆ ಕಡೆ ಜಾಗವಿದ್ದರೂ ಕೂಡ ನಮ್ಮೂರ ದೈವ ಸನ್ಮಿಧಿ ಯಲ್ಲಿಯೇ ಸ್ಮಶಾನ ಮಾಡಹೊರಟಿ ರುವುದನ್ನು ನಾವು ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದೇವೆ ಎಂದು ಗ್ರಾಮದ ನಿವಾಸಿಗಳಾದ ಪಂಚಾಯಿತಿ ಮಾಜಿ ಸದಸ್ಯೆ ಕವಿತ, ಮಮತ, ರೆಜಿತ್ ಕುಮಾರ್, ಸ್ವರ್ಣಲತಾ ಮೊದಲಾದವರು ಹೇಳಿಕೊಂಡರು.

ಅAತ್ಯಕ್ರಿಯೆ : ಮೃತ ವೃದ್ಧೆಯ ಶವವನ್ನು ವಿವಾದಿತ ಜಾಗದಲ್ಲಿಯೇ ಪಂಚಾಯಿತಿ ಆಡಳಿತ ಅಂತ್ಯಕ್ರಿಯೆ ನೆರವೇರಿಸಿತ್ತು.

ಈ ಸಂದರ್ಭ ಪ್ರತಿಕ್ರಿಯಿಸಿದ ಪಂಚಾಯಿತಿ ಪಿಡಿಓ ಶ್ಯಾಂ, ಗುಡ್ಡೆಹೊಸೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಂತ ಭೂಮಿ ಹೊಂದಿರದ ಅನೇಕ ಕುಟುಂಬಗಳಿದ್ದು ಮೃತಪಟ್ಟ ಸಂದರ್ಭ ಅಂತ್ಯಕ್ರಿಯೆಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಕಳೆದ ಕೆಲವು ತಿಂಗಳ ಹಿಂದೆ ವ್ಯಕ್ತಿಯೋರ್ವರು ಮೃತಪಟ್ಟಾಗ ಸೂಕ್ತ ಜಾಗವಿಲ್ಲದೆ ತಾವು ವಾಸವಿದ್ದ ಮನೆಯ ಹಿಂಬದಿಯೇ ಅಂತ್ಯಕ್ರಿಯೆ ನಡೆಸಲಾಗಿತ್ತು. ಆಗ ಆ ಕುಟುಂಬ ಪಂಚಾಯಿತಿ ಮೇಲೆ ಅದೆಷ್ಟು ಹಿಡಿಶಾಪ ಹಾಕಿತ್ತೋ ಗೊತ್ತಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ನಾವು ಸುಣ್ಣದಕೆರೆ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಜಾಗವನ್ನು ಸಿದ್ಧಗೊಳಿಸಿದ್ದೇವೆ ಅಷ್ಟೆ. ಯಾರಿಗೂ ತೊಂದರೆ ಕೊಡುವ ಉದ್ದೇಶವಲ್ಲ ಎಂದರು.

(ವರದಿ : ಕೆ.ಎಸ್. ಮೂರ್ತಿ)