ಗೋಣಿಕೊಪ್ಪ ವರದಿ, ಡಿ. ೩೧: ಹೆದ್ದಾರಿ ಅಭಿವೃದ್ದಿ ಯೋಜನೆಯಡಿ ೧೪.೫೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಬಿಳುಗುಂದ- ಆನಂದಪುರ ರಸ್ತೆ ಕಾಮಗಾರಿ ಕಳಪೆ ಎಂದು ಆರೋಪಿಸಿ ಅಮ್ಮತ್ತಿ ರೈತ ಸಂಘ ಮತ್ತು ಸ್ಥಳಿಯರು ಶನಿವಾರ ಪ್ರತಿಭಟನೆ ನಡೆಸಿದರು.
ಶುಕ್ರವಾರದವರೆಗೂ ನಡೆದ ಕಾಮಗಾರಿಯಲ್ಲಿ ಹೊತ್ತು ಕಳೆದಂತೆ ಕಿತ್ತು ಬರುತ್ತಿದೆ. ಮಣ್ಣಿನ ಮೇಲೆ ಡಾಂಬರು ಹಾಕಲಾಗುತ್ತಿದೆ. ಗುಣಮಟ್ಟದ ಡಾಂಬರು ಬಳಕೆ ಮಾಡುತ್ತಿಲ್ಲ ಎಂದು ಆರೋಪಿಸಿ ಕಾಮಗಾರಿಗೆ ಸ್ಥಳೀಯರು ತಡೆ ಮಾಡಿದರು. ಇದಕ್ಕೆ ಮಣಿದ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಗುಣಮಟ್ಟದ ಕಾಮಗಾರಿ ನಡೆಸುವುದಾಗಿ ಭರವಸೆ ನೀಡಿದ ಬೆನ್ನಲ್ಲೇ ಕಾಮಗಾರಿ ನಡೆಸಲು ಅನುವು ಮಾಡಿಕೊಡಲಾಯಿತು.
ರಸ್ತೆಗೆ ಹಾಕಿರುವ ಡಾಂಬರು ಗುಣಮಟ್ಟದಲ್ಲದ ಕಾರಣ ಈಗಾಗಲೇ ಇಬ್ಬರು ಸವಾರರು ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ಕಾಮಗಾರಿ ಕಳಪೆಯಾದರೆ ಮುಂದಿನ ವರ್ಷದವರೆಗೂ ಸ್ಥಳಿಯರಿಗೆ ಹೆಚ್ಚು ತೊಂದರೆಯಾಗುತ್ತದೆ. ಗುಣಮಟ್ಟ ಕಾಯ್ದುಕೊಳ್ಳಲು ಒತ್ತಾಯಿಸಲಾಯಿತು. ಸ್ಥಳೀಯರು ಮೊಕ್ಕಾಂ ಹೂಡಿ ಗುಣಮಟ್ಟದ ರಸ್ತೆ ಅನುಷ್ಠಾನಕ್ಕೆ ತೊಡಗಿಕೊಂಡರು. ಶುಕ್ರವಾರದವರೆಗೂ ನಡೆಸಿರುವ ಕಾಮಗಾರಿಯಲ್ಲಿ ಡಾಂಬರು ಹಾಕಲಾಗುವುದು ಎಂದು ವೀರಾಜಪೇಟೆ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ನಾಗರಾಜ ಪಾಟೀಲ್ ಭರವಸೆ ನೀಡಿದರು. ಬೆಳಿಗ್ಗೆ ೯ ಗಂಟೆಯಿAದ ಮಧ್ಯಾಹ್ನ ೧೨ ಗಂಟೆವರೆಗೂ ಪ್ರತಿಭಟನೆ ನಡೆಯಿತು. ಸುಮಾರು ೧೫೦ ಕ್ಕೂ ಹೆಚ್ಚು ಸಾರ್ವಜನಿಕರು ಪಾಲ್ಗೊಂಡು ಒತ್ತಾಯಿಸಿದರು. ಕಳಪೆ ಕಾಮಗಾರಿ ನಡೆಸಿದರೆ ಕಾಮಗಾರಿ ನಡೆಸಲು ತಡೆ ಮಾಡುವುದಾಗಿ ಎಚ್ಚರಿಸಿದರು. ಇಲಾಖೆಯ ಎಇ ರಾಮೇಗೌಡ, ಗುಣಮಟ್ಟ ನಿರ್ವಹಣೆ ವಿಭಾಗದ ಅಧಿಕಾರಿ ತಿಲಕ್ ಸ್ಥಳದಲ್ಲಿದ್ದರು.
ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕೇಚಂಡ ಪ್ರಸನ್ನ, ಗೌರವ ಅಧ್ಯಕ್ಷ ಕಾವಡಿಚಂಡ ಗಣಪತಿ, ಉಪಾಧÀ್ಯಕ್ಷ ಮಾಚಿಮಂಡ ಜಯ ಉತ್ತಪ್ಪ, ಜಂಟಿ ಕಾರ್ಯದರ್ಶಿ ಪಳೆಯತಂಡ ಹರಿ, ಕಾರ್ಮಾಡು ಗ್ರಾ. ಪಂ. ಅಧ್ಯಕ್ಷ ಕಾವಡಿಚಂಡ ನಾಚಪ್ಪ, ಪ್ರಮುಖರಾದ ಮಾಚಿಮಂಡ ಅಯ್ಯಪ್ಪ, ಐನಂಡ ಕಾರ್ಯಪ್ಪ ಇದ್ದರು.