ಸೋಮವಾರಪೇಟೆ, ಜ.೧ : ಹೊಸ ವರ್ಷಾಚರಣೆ ಹಿನ್ನೆಲೆ ಒಂದು ಕಡೆ ಮದ್ಯ-ಮಾಂಸದ ವಹಿವಾಟು ಜೋರಾಗಿ ನಡೆದಿದ್ದರೆ, ಪಟ್ಟಣದಲ್ಲಿ ಪೊಲೀಸ್ ಇಲಾಖೆ ಅಲರ್ಟ್ ಆಗಿ ಡ್ರಿಂಕ್ ಅಂಡ್ ಡ್ರೈವ್ ಗೆ ಕಡಿವಾಣ ಹಾಕುವ ಕಾರ್ಯವನ್ನು ತಡರಾತ್ರಿಯವರೆಗೂ ಕೈಗೊಂಡಿತ್ತು.

ಪೊಲೀಸ್ ಇನ್ಸ್ ಪೆಕ್ಟರ್ ರಾಮಚಂದ್ರ ನಾಯಕ್ ಅವರ ನೇತೃತ್ವದಲ್ಲಿ ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ವಾಹನಗಳ ತಪಾಸಣೆ ನಡೆಯಿತು. ಹೊಸ ವರ್ಷಾಚರಣೆಯ ಹಿನ್ನೆಲೆ ‘ಖುಷಿ’ಯಲ್ಲಿಯೇ ತೆರಳುತ್ತಿದ್ದ ಬಹುತೇಕ ಚಾಲಕರು ಪೊಲೀಸರನ್ನು ಕಂಡು 'ಅಯ್ಯೋ ಇವತ್ತೂ ಸಹ ಚೆಕ್ಕಿಂಗ್ ಆ' ಎಂದು ತಮ್ಮ ವಾಹನಗಳನ್ನು ವಾಪಸ್ ತಿರುಗಿಸಿಕೊಂಡು ಒಳದಾರಿಯನ್ನು ಹುಡುಕಿದರು. ಇನ್ನುಳಿದವರು ಪೊಲೀಸರಿಗೆ ಸಿಕ್ಕಿಬಿದ್ದು ಸ್ಥಳದಲ್ಲೇ ದಂಡ ಪಾವತಿಸಿ ಮನೆ ಕಡೆ ತೆರಳಿದರು. ಪ್ರವಾಸಿಗರ ವಾಹನಗಳಿಗಿಂತ ಸ್ಥಳೀಯರೇ ಹೆಚ್ಚಾಗಿ ಪೊಲೀಸರಿಗೆ ಸಿಕ್ಕಿಬಿದ್ದರು.

'ಸಾರ್..ಇವತ್ತೂ ಸಹ ಹಿಡಿತೀರಾ?' ಅಂತ ಕೆಲ ಚಾಲಕರು ಪೊಲೀಸರಿಗೆ ಪ್ರಶ್ನಿಸಿದರೆ, ಇನ್ನು ಕೆಲವರು 'ಹೊಸ ವರ್ಷ ಅಂತ ಹಾಕಿದ್ದೀವಿ. ಬಿಟ್ಬಿಡಿ ಸಾರ್' ಎಂದು ಮನವಿ ಮಾಡಿದರು. 'ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಮದ್ಯಪಾನ ಮಾಡಿ ವಾಹನ ಚಾಲಿಸಿದರೆ ನಿಮಗಷ್ಟೆ ಅಲ್ಲ; ಇತರರಿಗೂ ತೊಂದರೆ' ಎಂದು ತಿಳಿಹೇಳಿದ ಪೊಲೀಸರು ಮುಲಾಜಿಲ್ಲದೆ ದಂಡ ವಿಧಿಸಿ, ಜಾಗೃತಿ ಮೂಡಿಸಿದರು.