ಅಧ್ಯಕ್ಷ ಶೇಖರ್ ಭಂಡಾರಿ

ಸೋಮವಾರಪೇಟೆ, ಡಿ. ೩೧: ಜಿಲ್ಲಾ ತುಳು ಜಾನಪದ ಕೂಟವು ಇದೀಗ ಸಹಕಾರ ಬ್ಯಾಂಕನ್ನು ಸ್ಥಾಪಿಸಿದ್ದು, ಸೋಮವಾರಪೇಟೆ ತಾಲೂಕು ಕೇಂದ್ರದಲ್ಲಿಯೂ ಶಾಖೆಯನ್ನು ತೆರೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ತುಳುವೆರ ಸಹಕಾರ ಬ್ಯಾಂಕ್ ಅಧ್ಯಕ್ಷ ಶೇಖರ್ ಭಂಡಾರಿ ಹೇಳಿದರು.

ಪಟ್ಟಣದ ಸಫಾಲಿ ಹಾಲ್‌ನಲ್ಲಿ ಕೂಟದ ತಾಲೂಕು ಅಧ್ಯಕ್ಷ ಬಿ.ಜಿ. ಪ್ರಶಾಂತ್ ಅವರ ಅಧ್ಯಕ್ಷತೆಯಲ್ಲಿ ನಡೆದ ನಗರ ತುಳು ಕೂಟದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ತುಳುವೆರ ಜಾನಪದ ಕೂಟದ ಸದಸ್ಯರುಗಳಿಗೆ ಆರ್ಥಿಕವಾಗಿ ಸಹಕಾರ ನೀಡುವ ಉದ್ದೇಶದಿಂದ ಜಿಲ್ಲಾ ಮಟ್ಟದಲ್ಲಿ ಸಹಕಾರ ಬ್ಯಾಂಕನ್ನು ಸ್ಥಾಪಿಸಲಾಗಿದೆ. ಸ್ಥಳೀಯ ಸದಸ್ಯರುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೋಮವಾರಪೇಟೆ ತಾಲೂಕು ಕೇಂದ್ರದಲ್ಲಿ ಶಾಖೆಯನ್ನು ತೆರೆಯಲು ವ್ಯವಸ್ಥೆ ಮಾಡಲಾಗಿದೆ. ಕೂಟದ ಸದಸ್ಯರುಗಳು ಬ್ಯಾಂಕ್‌ನಲ್ಲಿಯೂ ಸದಸ್ಯರಾಗುವ ಮೂಲಕ ಏಳಿಗೆಗಾಗಿ ಸಹಕರಿಸಬೇಕು ಎಂದರು.

ಕೊಡಗು ಜಿಲ್ಲಾ ತುಳು ಜಾನಪದ ಕೂಟದ ಅಧ್ಯಕ್ಷ ಬಿ.ಬಿ. ಐತಪ್ಪ ರೈ ಮಾತನಾಡಿ, ಜಿಲ್ಲೆಯಲ್ಲಿ ತುಳು ಮಾತನಾಡುವವರು ಸುಮಾರು ೨ ಲಕ್ಷಕ್ಕೂ ಅಧಿಕ ಮಂದಿ ಇದ್ದು, ಅವರೆಲ್ಲರನ್ನು ಕೂಟಕ್ಕೆ ಸದಸ್ಯರನ್ನಾಗಿಸುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸದಸ್ಯತ್ವ ಪಡೆದಿರುವವರು ನೂತನ ಸದಸ್ಯರನ್ನು ಮಾಡಿಸುವ ಮೂಲಕ ಸಹಕರಿಸಿ ಎಂದು ಮನವಿ ಮಾಡಿದರು.

ಕೂಟದ ಜಿಲ್ಲಾ ಉಪಾಧ್ಯಕ್ಷ ರಘು ಆನಂದ್ ಮಾತನಾಡಿ, ಕಲೆ, ಜಾನಪದ, ಆಚಾರ-ವಿಚಾರಗಳನ್ನು ಹೊಂದಿರುವ ತುಳು ಭಾಷೆಯು ತನ್ನದೇ ಆದ ಗೌರವ ಸ್ಥಾನ ಪಡೆದಿದೆ. ಈ ಎಲ್ಲಾ ಆಚಾರ-ವಿಚಾರಗಳನ್ನು ಉಳಿಸಿ, ಬೆಳೆಸುವ ಮೂಲಕ ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವ ಕಾರ್ಯಗಳು ನಮ್ಮ ಕೂಟದಿಂದ ಆಗಬೇಕಾಗಿದೆ ಎಂದರು. ಸಭೆಯಲ್ಲಿ ಕೂಟದ ಸೋಮವಾರಪೇಟೆ ನಗರ ಸಮಿತಿಗೆ ನೂತನ ಅಧ್ಯಕ್ಷರನ್ನಾಗಿ ಬಾಲಕೃಷ್ಣ ಪೂಜಾರಿ ಹಾಗೂ ಕಾರ್ಯದರ್ಶಿಯಾಗಿ ನಂದಿನಿ ಸತೀಶ್ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಜಿಲ್ಲಾ ಖಜಾಂಚಿ ಪ್ರಭು ರೈ, ಸಂಘಟನಾ ಕಾರ್ಯದರ್ಶಿ ರಾಜೀವ್ ಲೋಚನ್, ತಾಲೂಕು ಕಾರ್ಯದರ್ಶಿ ಇಂದಿರಾ ಮೋಣಪ್ಪ, ಸಂಚಾಲಕ ಬಿ.ಎಂ. ದಾಮೋಧರ್, ಜಯಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಸಿ.ಬಿ. ಸುರೇಶ್ ಶೆಟ್ಟಿ, ಪ.ಪಂ. ಅಧ್ಯಕ್ಷ ಪಿ.ಕೆ. ಚಂದ್ರು, ಪೌರ ಕಾರ್ಮಿಕ ಸಂಘದ ಅಧ್ಯಕ್ಷ ಬಿ.ಜೆ. ಮಂಜುನಾಥ್ ಹಾಗೂ ಇನ್ನಿತರರು ಹಾಜರಿದ್ದರು.