ಸೋಮವಾರಪೇಟೆ, ಡಿ. ೩೦: ತಾಲೂಕಿನ ಮಾದಾಪುರದಿಂದ ಗರ್ವಾಲೆ ಗ್ರಾಮ ಸಂಪರ್ಕಿಸುವ ಮುಖ್ಯರಸ್ತೆಯ ಎರಡೂ ಬದಿಯಲ್ಲಿ ಗಿಡಗಂಟಿಗಳು ಬೆಳೆದು ರಸ್ತೆಯನ್ನು ಆವರಿಸಿಕೊಂಡಿದ್ದು, ವಾಹನ ಸಂಚಾರ ದುಸ್ತರವಾಗಿದೆ ಎಂದು ಗ್ರಾಮಸ್ಥರು ಲೋಕೋಪಯೋಗಿ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಲೋಕೋಪಯೋಗಿ ಇಲಾಖೆಗೆ ವಾರ್ಷಿಕ ರಸ್ತೆ ನಿರ್ವಹಣೆಗಾಗಿ ಸರ್ಕಾರದಿಂದ ಲಕ್ಷಾಂತರ ಅನುದಾನ ಬಿಡುಗಡೆಯಾಗುತ್ತದೆಯೇ ಹೊರತು ರಸ್ತೆಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಮಾದಾಪುರದಿಂದ ಗರ್ವಾಲೆ ಮಾರ್ಗವಾಗಿ ಶಾಂತಳ್ಳಿ ಹಾಗೂ ಸೋಮವಾರಪೇಟೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಎರಡೂ ಬದಿಯಲ್ಲಿ ಗಿಡಗಂಟಿಗಳು ಬೆಳೆದು ರಸ್ತೆಗೆ ಬಾಗಿವೆ. ಒಂದು ವಾಹನ ಸಂಚರಿಸುವ ಸಂದರ್ಭ ಮತ್ತೊಂದು ವಾಹನಕ್ಕೆ ಸ್ಥಳಾವಕಾಶ ಇಲ್ಲವಾಗಿದೆ. ಈ ಬಗ್ಗೆ ಅನೇಕ ಬಾರಿ ಇಲಾಖೆಯ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮದ ಲೋಕೇಶ್, ಸುಭಾಷ್ ಸೇರಿದಂತೆ ಇತರರು ಆರೋಪಿಸಿದ್ದಾರೆ.
ಮಾದಾಪುರದಿಂದ ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣವಾದ ಮುಟ್ಲು ಬೆಟ್ಟಶ್ರೇಣಿ ಹಾಗೂ ದೇವಾಲಯಕ್ಕೆ ದಿನಂಪ್ರತಿ ವಾಹನಗಳಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ವಾರಾಂತ್ಯದ ದಿನಗಳಲ್ಲಿ ವಾಹನಗಳ ಓಡಾಟ ಅಧಿಕವಾಗಿದೆ. ತೀರಾ ಇಕ್ಕಟ್ಟಿನಂತಿರುವ ರಸ್ತೆಯಲ್ಲಿ ವಾಹನಗಳು ತೆರಳುವ ಸಂದರ್ಭ ಗ್ರಾಮಸ್ಥರು ನಡೆದುಕೊಂಡು ಹೋಗುವುದಕ್ಕೂ ಸಮಸ್ಯೆಯಾಗಿದೆ ಎಂದು ಗ್ರಾಮದ ಬಿದ್ದಪ್ಪ, ಕಾರ್ಯಪ್ಪ ಅವರುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದರೊಂದಿಗೆ ರಸ್ತೆಯ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿದೆ. ರಸ್ತೆ ದುರಸ್ತಿ ಕಾರ್ಯಕ್ಕೆ ಪಿಡಬ್ಲೂö್ಯಡಿ ಇಲಾಖೆ ಮುಂದಾಗಿಲ್ಲ. ಇತ್ತ ವಾರ್ಷಿಕ ನಿರ್ವಹಣೆ ಅನುದಾನದಡಿ ರಸ್ತೆ ಬದಿಯ ಕಾಡುಗಳನ್ನು ಕಡಿಯುತ್ತಿಲ್ಲ. ರಸ್ತೆಯ ನಿರ್ವಹಣೆ ಮಾಡದಿದ್ದರೆ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.