ವೀರಾಜಪೇಟೆ, ಡಿ. ೩೦: ವೀರಾಜಪೇಟೆ ತಾಲೂಕು ಕಣ್ಣಂಗಾಲ ಗ್ರಾಮ ಪಂಚಾಯಿತಿಯ ಗ್ರಾಮಸಭೆ ಒಂಟಿಯAಗಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಕಣ್ಣಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ವಿ. ಗಣೇಶ್ ಮತ್ತು ನೋಡಲ್ ಅಧಿಕಾರಿಗಳಾದ ಶಿಕ್ಷಣ ಇಲಾಖೆಯ ಸುಶಾ ಅವರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಗ್ರಾಮಸ್ಥರಾದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ನಿತೀನ್ ಅವರು ಎಡೂರು ಗ್ರಾಮದಲ್ಲಿರುವ ಕೊರಗಜ್ಜ ದೇಗುಲಕ್ಕೆ ತೆರಳುವ ರಸ್ತೆಯ ಬದಿಯಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಅಳವಡಿಸಿದ್ದ ದೇಗುಲದ ಭಂಡಾರ ಡಬ್ಬಿಯನ್ನು ಪಂಚಾಯಿತಿಯು ಏಕಾಏಕಿಯಾಗಿ ತೆರವುಗೊಳಿಸಿ ಸಾರ್ವಜನಿಕ ರಸ್ತೆಗೆ ಆಡ್ಡಲಾಗಿ ಗೇಟ್ ನಿರ್ಮಾಣ ಮಾಡಿರುವುದನ್ನು ಆಕ್ಷೇಪಿಸಿದರು. ಇದಕ್ಕೆ ಉತ್ತರಿಸಿದ ಗ್ರಾಮ ಪಂಚಾಯಿತಿ ಪಿ.ಡಿ.ಓ. ಮಾನಸ ಅವರು, ಎಡೂರು ಗ್ರಾಮದ ವ್ಯಕ್ತಿಯೊಬ್ಬರು ಗ್ರಾಮ ಪಂಚಾಯಿತಿಗೆ ಭಂಡಾರ ಡಬ್ಬಿ ತೆರವುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು. ಆರ್ಜಿದಾರರ ಮನವಿಯಂತೆ ಭಂಡಾರ ಡಬ್ಬಿ ತೆರವುಗೊಳಿಸಲಾಗಿದೆ. ಅಲ್ಲದೆ ರಸ್ತೆಗೆ ಅಡ್ಡಲಾಗಿ ಗೇಟ್ ನಿರ್ಮಾಣ ಮಾಡಿರುವುದು ತಿಳಿದು ಬಂದಿರುವುದಿಲ್ಲ ಎಂದು ಹೇಳಿದರು. ಗ್ರಾಮಸ್ಥರಾದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೇರೆರ ರಂಜಿ ಮಹೇಂದ್ರ ಮತ್ತು ಬೊಪ್ಪಂಡ ಜಗ ಬೆಳ್ಯಪ್ಪ ಅವರು ಸಭೆಯಲ್ಲಿ ಇದು ಭಕ್ತರ ಮನೋಧರ್ಮಕ್ಕೆ ವಿರುದ್ಧವಾದ ನಡೆಯಾಗಿದ್ದು, ಸಾರ್ವಜನಿಕವಾಗಿ ಯಾವುದೇ ದೂರುಗಳು ಬಾರದಿರುವುದರಿಂದ ಭಂಡಾರ ಪೆಟ್ಟಿಗೆಯನ್ನು ಮತ್ತೆ ಅಳವಡಿಸಬೇಕು ಎಂದು ಪಟ್ಟುಹಿಡಿದರು. ಗ್ರಾಮಸ್ಥರ ಒಮ್ಮತದ ಅಭಿಪ್ರಾಯದಂತೆ ಭಂಡಾರ ಪೆಟ್ಟಿಗೆ ಅದೇ ಸ್ಥಳದಲ್ಲಿ ಅಳವಡಿಸುವಂತೆ ನಿರ್ಣಯವಾಯಿತು.
ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಖಾಯಂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇಲ್ಲದಿರುವುದರಿಂದ ಯಾವುದೇ ಗ್ರಾಮದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ. ಖಾಯಂ ಅಧಿಕಾರಿಗಳಿಗಾಗಿ ಬೇಡಿಕೆ ಸಲ್ಲಿಸಿ ಅಲ್ಲದೆ ಗ್ರಾಮದಲ್ಲಿ ಬಹುತೇಕ ರಸ್ತೆಗಳು ಹಾನಿಯಾಗಿದ್ದು, ರಸ್ತೆ ಸಂಚಾರಕ್ಕೆ ಯೋಗ್ಯವಲ್ಲದಾಗಿದೆ ಎಂದು ಚಾಮುಂಡಿ ಪೈಸಾರಿ ಗ್ರಾಮಸ್ಥರಾದ ಬಿ. ರಘು ಅವರು ಆಗ್ರಹಪಡಿಸಿದರು.
ಪ್ರಶ್ನೆಗೆ ಉತ್ತರಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಈಗಾಗಲೇ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಕಾರ್ಯಾಲಯಕ್ಕೆ ಮನವಿ ಪತ್ರವನ್ನು ನೀಡಲಾಗಿದೆ. ಅತೀ ಶೀಘ್ರದಲ್ಲಿ ಖಾಯಂ ಅಧಿಕಾರಿಗಳು ನಿಯುಕ್ತಿಗೊಳ್ಳಲಿದ್ದಾರೆ. ಪ್ರಸ್ತುತ ಪಿ.ಡಿ.ಓ. ಅಮ್ಮತ್ತಿ-ಕಾರ್ಮಾಡು ಪಂಚಾಯಿತಿ ಮತ್ತು ಕಣ್ಣಂಗಾಲ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಾರದಲ್ಲಿ ಮೂರು ದಿನಗಳು ಪಂಚಾಯಿತಿ ಕಚೇರಿಯಲ್ಲಿ ಹಾಜರಿರುತ್ತಾರೆ ಎಂದು ಹೇಳಿದರು.
ಶೀಘ್ರವೇ ಕಸ ವಿಲೇವಾರಿ ಮಾಡಲು ಸ್ಥಳ ಗುರುತಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಕಂದಾಯ ಇಲಾಖೆಯು ಪೈಸಾರಿ ಸ್ಥಳಗಳನ್ನು ಗುರುತಿಸುವ ಕಾರ್ಯ ಮುಂದುವರೆದಿದೆ. ಶೀಘ್ರದಲ್ಲಿ ಸ್ಥಳ ನಿಗದಿಗೊಳಿಸಲಾಗುತ್ತದೆ ಎಂದು ಹೇಳಿದರು. ಗ್ರಾಮಸ್ಥರು ಮತ್ತು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಸ್. ಗೋಪಾಲ ಕೃಷ್ಣ ಮಾತನಾಡಿ, ಕಂದಾಯ ಇಲಾಖೆಗೆ ಪೈಸಾರಿ ಸ್ಥಳದ ಬಗ್ಗೆ ತಿಳಿದುಬಂದಿಲ್ಲ ಗ್ರಾಮದ ೨೧೧/೨ ಸರ್ವೆ ಸಂಖ್ಯೆಯಲ್ಲಿ ಸ್ಥಳವಿದೆ ಕಂದಾಯ ಇಲಾಖೆಯು ಶೀಘ್ರದಲ್ಲಿ ಸರ್ವೆ ಕಾರ್ಯ ಮುಂದುವರಿಸಿ ಸ್ಥಳ ನಿಗದಿಗೊಳಿಸಬೇಕು ಎಂದು ಹೇಳಿದರು.
ಚಾಮುಂಡಿ ಪೈಸಾರಿಯಲ್ಲಿ ವ್ಯಕ್ತಿಯೊಬ್ಬರ ಮನೆಯ ಮುಂದೆ ಬೃಹತ್ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗಿದ್ದು, ಸುಮಾರು ೧೦ ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಟ್ಯಾಂಕ್ ಇಂದು ನಿರುಪಯುಕ್ತಗೊಂಡಿದೆ. ಬಳಕೆಯಾಗದಿರುವ ನೀರಿನ ಟ್ಯಾಂಕ್‌ನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು. ಇದಕ್ಕೆ ಗ್ರಾಮಸಭೆಯು ಸರ್ವರ ಇಚ್ಚೆಯಂತೆ ನಿರುಪಯುಕ್ತವಾಗಿರುವ ಟ್ಯಾಂಕ್ ತೆರವುಗೊಳಿಸುವ ನಿರ್ಧಾರ ತೆಗೆದುಕೊಂಡಿತು.
ಸಭೆಯಲ್ಲಿ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಕೃಷಿ ಇಲಾಖೆ, ವಿದ್ಯುತ್ ಇಲಾಖೆಯ ಅಧಿಕಾರಿಗಳು ಇಲಾಖೆಯ ವತಿಯಿಂದ ಗ್ರಾಮಸ್ಥರಿಗೆ ದೊರಕುವ ವಿವಿಧ ಸರ್ಕಾರಿ ಸೌಲಭ್ಯಗಳ ಬಗ್ಗೆ ವಿವರಗಳನ್ನು ನೀಡಿದರು. ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಸಭೆಗೆ ಗೈರುಹಾಜರಾಗಿದ್ದರು.
ಕಣ್ಣಂಗಾಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಮಾನಸ, ಕಾರ್ಯದರ್ಶಿಗಳಾದ ಧರಣಿ, ಉಪಾಧ್ಯಕ್ಷೆ ವಿ.ಆರ್. ಗ್ರೀಶ್ಮ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.