ಮಡಿಕೇರಿ, ಡಿ. ೩೦: ಜಿಲ್ಲೆಯಲ್ಲಿರುವ ಮೊಗೇರ ಸಮುದಾಯ ಸರಕಾರದ ಸೌಲಭ್ಯದಿಂದ ವಂಚಿತವಾಗಿರುವ ಜೊತೆಗೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ಬಹುವರ್ಷದ ಬೇಡಿಕೆಯಾಗಿರುವ ನಿವೇಶನ ಕಲ್ಪಿಸುವಲ್ಲಿ ಜನಪ್ರತಿನಿಧಿಗಳು, ಸರಕಾರ ವಿಫಲಗೊಂಡಿದ್ದು, ವಸತಿ ಸೇರಿದಂತೆ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ನಗರದಲ್ಲಿ ಮೊಗೇರ ಸೇವಾ ಸಮಾಜ ಹಾಗೂ ಮುದ್ದ ಕಳಲ ಯುವಕ ಸಂಘ ಬೃಹತ್ ಪ್ರತಿಭಟನೆ ನಡೆಸಿ ಆಡಳಿತಕ್ಕೆ ಬಿಸಿ ಮುಟ್ಟಿಸಿತು. ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿತು.

ಮೊದಲು ನಗರದ ಫೀ. ಮಾ. ಕಾರ್ಯಪ್ಪ ವೃತ್ತದಲ್ಲಿ ಜಮಾವಣೆಗೊಂಡ ಸಾವಿರಾರು ಮಂದಿ ಮೆರವಣಿಗೆ ಮೂಲಕ ಜನರಲ್ ತಿಮ್ಮಯ್ಯ ವೃತ್ತದಿಂದ ಗಾಂಧಿ ಮೈದಾನಕ್ಕೆ ತೆರಳಿ ರಸ್ತೆ ತಡೆ ನಡೆಸಿ ಜಿಲ್ಲಾಧಿಕಾರಿ ಸ್ಥಳಕ್ಕಾಗಮಿಸುವಂತೆ ಪ್ರತಿಭಟನಾನಿರತರು ಪಟ್ಟು ಹಿಡಿದರು. ಈ ಸಂದರ್ಭ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದವೂ ನಡೆಯಿತು.

ಪ್ರಮುಖ ಬೇಡಿಕೆಗಳು

ಜಿಲ್ಲೆಯಲ್ಲಿ ೨೫ ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಮೊಗೇರ ಸಮುದಾಯದವರಿದ್ದು, ಇಂದು ಕೂಡ ಶೋಷಣೆಗೆ ಒಳಗಾಗುತ್ತಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಬಹುತೇಕರು ಲೈನ್‌ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ೮೦೦ಕ್ಕೂ ಅಧಿಕ ಕುಟುಂಬಗಳು ಸ್ವಂತ ಸೂರಿಲ್ಲದೆ ಲೈನ್‌ಮನೆಗಳಲ್ಲಿ ನೆಲೆಸಿದ್ದಾರೆ. ಈ ಹಿನ್ನೆಲೆ ಗ್ರಾಮ ಮಟ್ಟದಲ್ಲಿ ಸ್ಥಳ ಗುರುತಿಸಿ ತಲಾ ೩.೪೫ ಸೆಂಟ್ ಜಾಗ ನೀಡಿ ವಸತಿ ಕಲ್ಪಿಸಬೇಕು, ಸ್ಮಶಾನ ಒದಗಿಸಬೇಕು. ಸಮುದಾಯ ಭವನ ನಿರ್ಮಾಣಕ್ಕೆ ಜಾಗ ನೀಡಬೇಕು, ಸರಕಾರಿ ಜಾಗವಿಲ್ಲದಿದ್ದಲ್ಲಿ ಕಬಳಿಕೆಯಾಗಿರುವ ಭೂಮಿಯನ್ನು ತೆರವುಗೊಳಿಸಿ ನಿವೇಶನ ರಹಿತರಿಗೆ ನೀಡಬೇಕು ಎಂದು ಆಗ್ರಹಿಸಿದರು.

ರಸ್ತೆ ತಡೆದು ಆಕ್ರೋಶ

ಮಂಗೇರಿರ ಮುತ್ತಣ್ಣ ವೃತ್ತದಲ್ಲಿ ರಸ್ತೆ ತಡೆ ನಡೆಸಲು ಮುಂದಾದ ಸಂದರ್ಭ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದರು. ಗಾಂಧಿ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಪಡೆದಿದ್ದು, ದಿಢೀರ್

(ಮೊದಲ ಪುಟದಿಂದ) ಆಗಿ ರಸ್ತೆ ತಡೆ ನಡೆಸಿದರೆ ಸಮಸ್ಯೆಯಾಗುತ್ತದೆ ಎಂದು ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಗಾಂಧಿ ಮೈದಾನಕ್ಕೆ ಕರೆತರುವ ಪ್ರಯತ್ನ ನಡೆಸಿದರು. ಇದಕ್ಕೆ ಒಪ್ಪಿ ಗಾಂಧಿ ಮೈದಾನಕ್ಕೆ ಬಂದ ಜನರು ರಾಜಾಸೀಟ್‌ಗೆ ಸಾಗುವ ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸಲು ಮುಂದಾದರು. ಈ ವೇಳೆ ಗೊಂದಲ ಏರ್ಪಟ್ಟಿತ್ತು. ಬಳಿಕ ರಸ್ತೆಯಲ್ಲಿ ಪ್ರತಿಭಟನೆ ನಡೆಸಲು ಪೊಲೀಸರು ಅವಕಾಶ ನೀಡಿದರು.

ಈ ವೇಳೆ ಸರಕಾರ ಹಾಗೂ ಅಧಿಕಾರಿಗಳ ವಿರುದ್ಧ ಪ್ರತಿಭಟನಾನಿರತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳು ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಿ ಸ್ಪಂದನ ನೀಡಬೇಕೆಂದು ಪಟ್ಟುಹಿಡಿದು ಸುಮಾರು ೨ ಗಂಟೆಗಳ ಕಾಲ ರಸ್ತೆಯಲ್ಲಿಯೇ ಕುಳಿತ್ತಿದ್ದರು. ಬಳಿಕ ಜಿಲ್ಲಾಡಳಿತ ಭವನ ಆವರಣದಲ್ಲಿ ಜಿಲ್ಲಾಧಿಕಾರಿ ಬಿ.ಸಿ. ಸತೀಶ ಅವರನ್ನು ಭೇಟಿಯಾದ ಪ್ರತಿಭಟನಾಕಾರರು ತಮ್ಮ ಬೇಡಿಕೆಯನ್ನು ಮುಂದಿಟ್ಟು ಮನವಿ ಪತ್ರ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದರು.

ಮೊಗೇರ ಸೇವಾ ಸಮಾಜದ ಅಧ್ಯಕ್ಷ ಗೌತಮ್ ಶಿವಪ್ಪ ಮಾತನಾಡಿ, ನಮ್ಮ ಬೇಡಿಕೆ ಸಂಬAಧ ಅನೇಕ ಬಾರಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನ ದೊರೆತ್ತಿಲ್ಲ. ಒತ್ತುವರಿಯಾಗಿರುವ ಜಾಗವನ್ನು ಗುತ್ತಿಗೆ ಆಧಾರದಲ್ಲಿ ಉಳ್ಳವರಿಗೆ ನೀಡಿ ಬಡವರ ಬದುಕನ್ನು ಸರಕಾರ ಕಿತ್ತುಕೊಂಡಿದೆ. ಸಾವಿರಾರು ಮಂದಿ ನಿವೇಶನ ರಹಿತರು ಜಿಲ್ಲೆಯಲ್ಲಿದ್ದಾರೆ. ಅಂತವರಿಗೆ ನಿವೇಶನ ಒದಗಿಸುವುದು ಸರಕಾರದ ಕರ್ತವ್ಯವಾಗಿದೆ. ಅಧಿವೇಶನದಲ್ಲಿಯೂ ನಮ್ಮ ಬೇಡಿಕೆಯ ಬಗ್ಗೆ ಪ್ರಸ್ತಾಪಿಸುವುದಿಲ್ಲ. ಸೂಕ್ತ ಕ್ರಮ ವಹಿಸದಿದ್ದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು.

ಸಮಾಜದ ಗೌರವಾಧ್ಯಕ್ಷ ಪಿ.ಎಂ. ರವಿ ಮಾತನಾಡಿ, ಪ್ರತಿಭಟನೆ ಮೂಲಕ ಸೌಲಭ್ಯವನ್ನು ಪಡೆಯಬೇಕಾದ ಅನಿವಾರ್ಯತೆ ತಲೆದೋರಿದೆ. ಸ್ವಾತಂತ್ರö್ಯ ಬಂದು ೭೫ ವರ್ಷ ಕಳೆದರು ಮೊಗೇರ ಸಮುದಾಯ ಕತ್ತಲಲ್ಲಿದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲರಾಗಲು ಇನ್ನೂ ಸಾಧ್ಯವಾಗಿಲ್ಲ. ಬಲಾಡ್ಯ ಸಮುದಾಯಗಳು ಒಳಮೀಸಲಾತಿ ಪಡೆಯುತ್ತಿವೆ. ನೈಜ ಶೋಷಿತ ವರ್ಗಕ್ಕೆ ಮಾತ್ರ ಯಾವುದೇ ಯೋಜನೆ ತಲುಪುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸೋಮವಾರಪೇಟೆ ಭಾಗದ ಮುಖಂಡ ಹರೀಶ್ ಮಾತನಾಡಿ, ಮೊಗೇರ ಸಮುದಾಯವರ ಸಮಸ್ಯೆಗಳ ಬಗ್ಗೆ ಶಾಸಕರುಗಳು ಮಾತನಾಡುವುದಿಲ್ಲ. ನಮ್ಮ ಬೇಡಿಕೆಯ ಬಗ್ಗೆ ಸರಕಾರದ ಗಮನ ಸೆಳೆದಿಲ್ಲ. ಜನಾಂಗದಲ್ಲಿ ನಾಯಕತ್ವದ ಕೊರತೆ ಇದೆ. ಮುಂದಾದರೂ ನಾವು ಎಚ್ಚೆತ್ತು ಮುನ್ನಡೆಯಬೇಕು ಎಂದು ಕರೆ ನೀಡಿದರು.

ಪ್ರತಿಭಟನೆ ಸಂದರ್ಭ ಸಮಾಜದ ಮಾಜಿ ರಾಜ್ಯಾಧ್ಯಕ್ಷ ಸುಂದರ್ ಮೇರ, ರಾಜ್ಯ ಸಮಿತಿ ಸದಸ್ಯರುಗಳಾದ ನಂದರಾಜ್ ಸಂಕೇಶ್, ಸೀತರಾಮ್ ಕುಂಚAಡಿ, ಜಿಲ್ಲಾ ಕಾರ್ಯದರ್ಶಿ ಸುರೇಶ್, ಖಜಾಂಜಿ ಮಂಜುನಾಥ್, ಮಡಿಕೇರಿ ತಾಲೂಕು ಅಧ್ಯಕ್ಷ ದಿನೇಶ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎ. ದಿನೇಶ್, ವೀರಾಜಪೇಟೆ ತಾಲೂಕು ಅಧ್ಯಕ್ಷ ರಾಮು, ಕುಶಾಲನಗರ ತಾಲೂಕು ಅಧ್ಯಕ್ಷ ಗಣೇಶ್, ಮುದ್ದ ಕಳಲ ಸಂಘದ ಅಧ್ಯಕ್ಷ ಜ್ಯೋತಿ ಕುಮಾರ್, ಉಪಾಧ್ಯಕ್ಷ ರಮೇಶ್ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.