ಗುಜರಾತ್, ಡಿ. ೩೦ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿಯವರು ಶುಕ್ರವಾರ ತಮ್ಮ ೯೯ನೇ ವಯಸ್ಸಿನಲ್ಲಿ ಗುಜರಾತಿನ ಗಾಂಧಿನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹೀರಾಬೆನ್ ಅವರನ್ನು ಬುಧವಾರವಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಾ.೩೦ ರ ಮುಂಜಾನೆ ೩.೩೯ರ ಸುಮಾರಿಗೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಮೋದಿಯವರ ಸಹೋದರ ಪ್ರಹ್ಲಾದ್ ಮೋದಿಯವರ ಮನೆಯಿಂದ ಹೀರಾಬೆನ್ ಅವರ ಅಂತಿಮ ಯಾತ್ರೆ ಸಾಗಿತು. ಈ ವೇಳೆ ಪ್ರಧಾನಿ ಮೋದಿಯವರು ತಾಯಿಯ ಪಾರ್ಥಿವ ಶರೀರಕ್ಕೆ ಹೆಗಲುಕೊಟ್ಟು ನಡೆದರು. ಬಳಿಕ ಪಾರ್ಥಿವ ಶರೀರವನ್ನು ಸೆಕ್ಟರ್ ೩೦ರ ರುದ್ರಭೂಮಿಗೆ ತರಲಾಗಿತ್ತು. ಅಂತಿಮ ದರ್ಶನದ ಬಳಿಕ ಸಂಪ್ರದಾಯದAತೆ ಹೀರಾಬೆನ್ ಅವರ ಅಂತ್ಯಸAಸ್ಕಾರವನ್ನು ನೆರವೇರಿಸಲಾಯಿತು. ಹೀರಾಬೆನ್ ಅವರು ಪಾರ್ಥಿವ ಶರೀರಕ್ಕೆ ಪ್ರಧಾನಿ ಮೋದಿಯವರು ಅಗ್ನಿ ಸ್ಪರ್ಶ ಮಾಡಿದರು. ಹೀರಾಬೆನ್ ಅವರು ಐವರು ಪುತ್ರರು ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಅಂತ್ಯ ಸಂಸ್ಕಾರದಲ್ಲಿ ಸರಳತೆ

ಪ್ರಧಾನಿ ಅವರ ತಾಯಿ ವಿಧಿವಶವಾಗಿರುವ ಬಗ್ಗೆ ತಿಳಿದ ಕೂಡಲೇ ಪ್ರಧಾನಿಗಳು ೬ ಗಂಟೆ ವೇಳೆಗೆ ಗುಜರಾತಿಗೆ ಬಂದಿಳಿದರು. ಕೇವಲ ಮೂರೂವರೆ ಗಂಟೆ ಅವಧಿಯೊಳಗಡೆ, ಅಂದರೆ; ೯.೩೦ರ ವೇಳೆಗೆ ಎಲ್ಲ ವಿಧಿ ವಿಧಾನಗಳು ಮುಗಿದು ಹೋದವು. ಮಾಧ್ಯಮಗಳ ಲೈವ್ ಇರಲಿಲ್ಲ. ಗಣ್ಯ ವ್ಯಕ್ತಿಗಳ ಭೇಟಿಗೂ ಅವಕಾಶವಿಲ್ಲ. ಅದ್ಧೂರಿ ಶವಯಾತ್ರೆಗೆ ವ್ಯವಸ್ಥೆ ಇಲ್ಲ.

(ಮೊದಲ ಪುಟದಿಂದ) ಯಾವದೇ ಟ್ರಾಫಿಕ್ ಜಾಮ್ ಇರಲಿಲ್ಲ. ಸಾರ್ವಜನಿಕರ ದರ್ಶನಕ್ಕೆ ಅವಕಾಶವಿಲ್ಲ, ಶವದ ಮೇಲೆ ರಾಷ್ಟç ಧ್ವಜದ ಹೊದಿಕೆ ಇಲ್ಲ; ಶೋಕಾಚರಣೆ ಇಲ್ಲ; ಅಗ್ನಿ ಸ್ಪರ್ಶಕ್ಕೆ ಶ್ರೀಗಂಧದ ಕಟ್ಟಿಗೆಗಳಿಲ್ಲದೆ, ಸಾಮಾನ್ಯರಲ್ಲಿ ಸಾಮಾನ್ಯರಂತೆ ಯಾವದೇ ಪ್ರಚಾರ, ಆಡಂಬರವಿಲ್ಲದೆ ದೇಶದ ಪ್ರಧಾನಿಯ ತಾಯಿಯ ಅಂತ್ಯಕ್ರಿಯೆ ನಡೆದುಹೋಯಿತು.

ತಮ್ಮ ತಾಯಿ ನಿಧನದ ಹಿನ್ನೆಲೆ ಯಾವುದೇ ಪೂರ್ವ ನಿಗಧಿತ ಅಧಿಕೃತ ಸರಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸದಂತೆ ಸೂಚಿಸಿದ ಪ್ರಧಾನಿ ಮೋದಿ ತಾವು ಕೊಲ್ಕತ್ತಾದಲ್ಲಿ ಭಾಗವಹಿಸಬೇಕಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಉದ್ಘಾಟನಾ ಕಾರ್ಯಕ್ರಮವನ್ನು ವೀಡಿಯೋ ಕಾನ್ಫರೆನ್ಸ್ ಮೂಲಕವೇ ನೆರವೇರಿಸಿದರು.