ಸಿದ್ದಾಪುರ, ಡಿ. ೩೦: ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನಲ್ಲಿ ಸೆರೆ ಹಿಡಿದ, ಮೈಸೂರು ಬಳಿಯ ಬಿಳಿಕೆರೆ ಹಾಗೂ ಸಿದ್ದಾಪುರ ಕರಡಿಗೋಡುವಿನಲ್ಲಿ ಸೆರೆ ಹಿಡಿದ ಸಲಗ ಸೇರಿ ಮೂರು ಸಲಗಗಳು ದುಬಾರೆ ಸಾಕಾನೆ ಶಿಬಿರದಲ್ಲಿ ಬಂದಿಯಾಗಿವೆ.

ಇತ್ತೀಚೆಗೆ ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನಲ್ಲಿ ಉಪಟಳ ನೀಡುತ್ತಿದ್ದ ಒಂಟಿ ಸಲಗವನ್ನು ಸೆರೆ ಹಿಡಿಯಲಾಯಿತು. ಸೆರೆ ಹಿಡಿದ ಸಲಗವನ್ನು ಪಳಗಿಸಲು ದುಬಾರೆಯ ಸಾಕಾನೆಗಳ ಶಿಬಿರಕ್ಕೆ ಕರೆ ತರಲಾಗಿದ್ದು, ಇಲ್ಲಿನ ಕ್ರಾಲ್‌ನಲ್ಲಿ ಬಂದಿಯಾಗಿರುತ್ತದೆ. ಇದಲ್ಲದೇ ಕಳೆದ ಮೂರು ದಿನಗಳ ಹಿಂದೆ ಸಿದ್ದಾಪುರದ ಕರಡಿಗೋಡು ಗ್ರಾಮದ ಕಾಫಿ ತೋಟದೊಳಗೆ ಬೀಡುಬಿಟ್ಟು ದಾಂಧಲೆ ನಡೆಸುತ್ತಾ ಮಾನವ, ವಾಹನಗಳ ಮೇಲೆ ದಾಳಿ ನಡೆಸುತ್ತಿದ್ದ ಸಲಗವನ್ನು ಸೆರೆ ಹಿಡಿದು ದುಬಾರೆ ಸಾಕಾನೆಯ ಶಿಬಿರದಲ್ಲಿ ಮರಗಳ ಕ್ರಾಲ್‌ನಲ್ಲಿ ಬಂದಿಸಲಾಗಿದೆ. ಈ ಮೂರು ಕಾಡಾನೆಗಳನ್ನು ಶಿಬಿರದಲ್ಲಿ ನೋಡಿಕೊಳ್ಳಲು ಎರಡು ಮಾವುತರು ಹಾಗೂ ಎರಡು

(ಮೊದಲ ಪುಟದಿಂದ) ಕಾವಾಡಿಗಳನ್ನು ನೇಮಿಸಲಾಗಿದೆ. ಸಲಗಗಳ ಬಳಿ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ. ಶಿವರಾಂ ತಿಳಿಸಿದ್ದಾರೆ.

ಚೆಟ್ಟಳ್ಳಿ ಭಾಗದಲ್ಲಿ ಹಾಗೂ ನೆಲ್ಯಹುದಿಕೇರಿ ಗ್ರಾಮದಲ್ಲಿ ಉಪಟಳ ನೀಡುತ್ತಿರುವ ಎರಡು ಸಲಗಗಳನ್ನು ಸೆರೆ ಹಿಡಿಯಲು ಈಗಾಗಲೇ ಸಿದ್ಧತೆ ಕೈಗೊಂಡಿದ್ದು, ಮುಂದಿನ ಒಂದು ವಾರದೊಳಗೆ ಮೋದೂರುವಿನಲ್ಲಿ ಕಾರ್ಯಾಚರಣೆ ನಡೆಸಿ ಸಲಗವನ್ನು ಸೆರೆ ಹಿಡಿಯಲಾಗುವುದೆಂದು ಶಿವರಾಂ ಮಾಹಿತಿ ನೀಡಿದರು. ನೆಲ್ಯಹುದಿಕೇರಿ, ಅಭ್ಯತ್‌ಮಂಗಲ ಗ್ರಾಮದಲ್ಲಿ ಉಪಟಳ ನೀಡುತ್ತಿರುವ ಸಲಗವನ್ನು ಗುರುತಿಸಿದ್ದು, ಆಗಿಂದಾಗ್ಗೆ ತಪ್ಪಿಸಿಕೊಳ್ಳುತ್ತಿದೆ. ಸದ್ಯದಲ್ಲೇ ಕಾಡಾನೆಗಳನ್ನು ಖೆಡ್ಡಾಕ್ಕೆ ಬೀಳಿಸಲು ಅರಣ್ಯ ಇಲಾಖೆ ಸಜ್ಜಾಗಿದೆ.

ಬಿಳಿಕೆರೆಯಿಂದ ಮತ್ತೊಂದು

ಕುಶಾಲನಗರ: ಮೈಸೂರು ಜಿಲ್ಲೆಯ ಬಿಳಿಕೆರೆ ಬಳಿ ಕಾಡಿನಿಂದ ನಾಡಿಗೆ ಲಗ್ಗೆ ಇಡುತ್ತಿದ್ದ ಕಾಡಾನೆಯೊಂದನ್ನು ಸೆರೆ ಹಿಡಿದು ದುಬಾರೆ ಸಾಕಾನೆ ಶಿಬಿರಕ್ಕೆ ಸೇರಿಸಲಾಗಿದೆ.

ಅಲ್ಲಿನ ಅರಬಿತಟ್ಟು ಎಂಬಲ್ಲಿ ಕಾಡಾನೆ ಕಂಡು ಬಂದಿದ್ದು, ಅರಣ್ಯ ಅಧಿಕಾರಿಗಳು ಅದನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಿದ್ದಾರೆ. ಅಂದಾಜು ೪೦ ವರ್ಷ ಪ್ರಾಯದ ಗಂಡಾನೆಯನ್ನು ಸಾಕಾನೆಗಳ ಸಹಾಯದೊಂದಿಗೆ ಲಾರಿ ಮೂಲಕ ಶಿಬಿರಕ್ಕೆ ತರಲಾಯಿತೆಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ ಶಿವರಾಮ್ ತಿಳಿಸಿದ್ದಾರೆ. ಇದೀಗ ಒಂದೇ ವಾರದ ಅವಧಿಯಲ್ಲಿ ಕರಡಿಗೋಡು, ಚಿಕ್ಕಮಗಳೂರು ಬಳಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದ ಪುಂಡಾನೆ ಸೇರಿದಂತೆ ಮೂರು ಕಾಡಾನೆಗಳು ದುಬಾರೆ ಶಿಬಿರದ ಕ್ರಾಲ್ ಸೇರಿವೆ. -ವರದಿ: ವಾಸು, ಸಿಂಚು