ಸೋಮವಾರಪೇಟೆ, ಡಿ. ೩೦ : ಇಲ್ಲಿನ ಪಟ್ಟಣ ಪಂಚಾಯಿತಿ ಆಡಳಿತವು ಗುತ್ತಿಗೆದಾರರಿಗೆ ಮಂಡಿಯೂರಿದAತೆ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಸಂಶಯ ಸ್ವತಃ ಪಂಚಾಯಿತಿ ಆಡಳಿತ ಮಂಡಳಿಯ ಸದಸ್ಯರಿಗೆ ಮೂಡುವಂತಹ ಘಟನೆಗೆ ಇಂದಿನ ಸಾಮಾನ್ಯ ಸಭೆ ಸಾಕ್ಷಿಯಾಯಿತು.
ಪಟ್ಟಣದ ಜನತಾ ಕಾಲೋನಿಯಲ್ಲಿ ಮಳೆಹಾನಿ ಪರಿಹಾರ ನಿಧಿಯಡಿ ತಡೆಗೋಡೆ ನಿರ್ಮಿಸಲು ಕಳೆದ ೧ ವರ್ಷದ ಹಿಂದೆಯೇ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಪಡೆದಿರುವ ಗುತ್ತಿಗೆದಾರರು ಈವರೆಗೆ ಕೆಲಸ ಪ್ರಾರಂಭಿಸಿಲ್ಲ. ನಾಲ್ಕೆöÊದು ಬಾರಿ ಗುತ್ತಿಗೆದಾರರು, ಅಧಿಕಾರಿಗಳನ್ನು ಸ್ಥಳಕ್ಕೆ ಕರೆದೊಯ್ದು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆ ವಾರ್ಡ್ನ ಸದಸ್ಯ ಶುಭಕರ್ ಅವರು ಸಾಮಾನ್ಯ ಸಭೆಯಲ್ಲಿ ಗಮನಕ್ಕೆ ತಂದರು. ಈ ಬಗ್ಗೆ ಒಂದಿಷ್ಟು ಚರ್ಚೆಗಳು ನಡೆದು, ಒಂದು ವರ್ಷದಿಂದಲೂ ಕಾಮಗಾರಿ ಆರಂಭಿಸದಿರುವ ಬಗ್ಗೆ ಬಹುತೇಕ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಅವರಿಗೆ ನೀಡಿದ ಟೆಂಡರ್ ರದ್ದುಪಡಿಸಿ ಮರು ಟೆಂಡರ್ ಕರೆಯುವಂತೆ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಬಗ್ಗೆ ನಿರ್ಣಯವಾಗಬೇಕೆನ್ನುವಷ್ಟರಲ್ಲಿ ಅಧ್ಯಕ್ಷ ಪಿ.ಕೆ. ಚಂದ್ರು ಅವರು ಸಂಬAಧಿಸಿದ ಗುತ್ತಿಗೆದಾರರಿಗೆ ಸ್ಥಳದಲ್ಲೇ ಕರೆ ಮಾಡಿ, ಸಂಬAಧಿಸಿದ ವಾರ್ಡ್ ಸದಸ್ಯರ ಹೆಸರನ್ನು ಉಲ್ಲೇಖಿಸಿ, ಕೆಲಸ ಮಾಡದ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸುತ್ತಿರುವ ಬಗ್ಗೆ ಮಾಹಿತಿ ನೀಡಿದರು.
ತಕ್ಷಣ ವಾರ್ಡ್ ಸದಸ್ಯ ಶುಭಕರ್ ಅವರಿಗೆ ಅತ್ತಲಿಂದ ಗುತ್ತಿಗೆದಾರರು ಕರೆ ಮಾಡಿ, ಸಭೆಯಲ್ಲಿ ವಿಚಾರ ಪ್ರಸ್ತಾಪಿಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭ ಕರೆ ಸ್ಥಗಿತಗೊಳಿಸಿದ ಶುಭಕರ್ ಅವರು, “ಸಭೆಯಲ್ಲಿ ಮಾತನಾಡಿ ಒಂದು ನಿಮಿಷವೂ ಆಗಿಲ್ಲ;ಅಷ್ಟು ಬೇಗ ಅಧ್ಯಕ್ಷರು-ಗುತ್ತಿಗೆದಾರರಿಗೆ ಕರೆ ಮಾಡಿ ನಮ್ಮ ವಿರುದ್ಧವೇ ಚುಚ್ಚಿದ್ದಾರೆ. ಗುತ್ತಿಗೆದಾರರು ಕರೆ ಮಾಡಿ ಅವಾಜ್ ಹಾಕುತ್ತಿದ್ದಾರೆ. ಇಂತಹ ಸಾಮಾನ್ಯ ಸಭೆ ಬೇಕೇ?” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಅಧ್ಯಕ್ಷ ಪಿ.ಕೆ. ಚಂದ್ರು ಅವರು “ಕೆಲಸ ಆಗದಿರುವ ಬಗ್ಗೆ ನಾನು ಕೇಳಿದ್ದೇನೆ” ಎಂದರಲ್ಲದೇ ತಾವು ಮಾಡಿದ್ದೇ ಸರಿ ಎಂದು ಸಮರ್ಥನೆಗೆ ಮುಂದಾದರು. “ಇಂತಹ ಸಾಮಾನ್ಯ ಸಭೆಗೆ ಯಾವುದೇ ಬೆಲೆ ಇಲ್ಲ; ಗುತ್ತಿಗೆದಾರರಿಂದ ಅವಾಜ್ ಹಾಕಿಸುವ ಇಂತಹ ಸಭೆ ನನಗೆ ಬೇಡ” ಎಂದು ಶುಭಕರ್ ಅವರು ಸಭೆಯನ್ನು ಬಹಿಷ್ಕರಿಸಿ ಹೊರಡಲು ಮುಂದಾದರು.
ಈ ಸಂದರ್ಭ ಎದ್ದು ನಿಂತ ಆಡಳಿತ ಪಕ್ಷದ ಬಹುತೇಕ ಸದಸ್ಯರೂ ಸೇರಿದಂತೆ ವಿಪಕ್ಷಗಳ ಸದಸ್ಯರು, ಅಧ್ಯಕ್ಷರ ಕ್ರಮ ಹಾಗೂ ಸಮರ್ಥನೆಯ ವಿರುದ್ಧ ಮುಗಿಬಿದ್ದರು. ಸಭೆಯ ಘನತೆಯನ್ನು ಕಾಪಾಡಿಕೊಳ್ಳಿ ಎಂಬ ಸಲಹೆಗಳೂ ಕೇಳಿಬಂದವು. ವರ್ಷವಾದರೂ ಕೆಲಸ ಮಾಡದ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಕೆಲಸ ಮಾಡಿಸುವುದನ್ನು ಬಿಟ್ಟು ಸಭೆಯಲ್ಲಿಯೇ ಅವರಿಗೆ ಮಾಹಿತಿ ನೀಡುತ್ತಿರುವುದು ಸರಿಯಲ್ಲ. ಇದು ಆಡಳಿತ ವೈಫಲ್ಯವನ್ನು ತೋರಿಸುತ್ತಿದೆ ಎಂದು ಸದಸ್ಯರು ಆಕ್ರೋಶಿತರಾದರು. ಈ ಸಂದರ್ಭ ಅಧ್ಯಕ್ಷರು ಮೌನಕ್ಕೆ ಶರಣಾಗಿದ್ದರು.
ಒಟ್ಟಾರೆ ಕಳೆದ ವರ್ಷದ ಮಳೆಹಾನಿ ಪರಿಹಾರ ನಿಧಿಯಡಿ ಟೆಂಡರ್ ಆಗಿರುವ ಕಾಮಗಾರಿಯು ಒಂದು ವರ್ಷ ಕಳೆದರೂ ಆರಂಭವಾಗದ ಬಗ್ಗೆ, ಪ್ರಶ್ನೆ ಮಾಡಿದ ಸದಸ್ಯರನ್ನೇ ಇಕ್ಕಟ್ಟಿಗೆ ಸಿಲುಕಿಸುವ ಇಂತಹ ಘಟನೆ- ನಿಜವಾಗಲೂ ಗುತ್ತಿಗೆದಾರರಿಗೆ ಪಂಚಾಯಿತಿ ಆಡಳಿತ ಮಂಡಿಯೂರಿದೆಯೇ? ಎಂಬ ಸಂಶಯವನ್ನು ಹುಟ್ಟುಹಾಕಿದ್ದಂತೂ ನಿಜ!