ಸೋಮವಾರಪೇಟೆ, ಡಿ. ೨೯: ಸೋಮವಾರಪೇಟೆ ಪಟ್ಟಣದಿಂದ ತೋಳೂರುಶೆಟ್ಟಳ್ಳಿ ಮಾರ್ಗವಾಗಿ ಕೂತಿ, ಎಡದಂಟೆ, ಗಡಿಕಲ್ಲು ಮೂಲಕ ಹಾದುಹೋಗಿರುವ ರಸ್ತೆಯನ್ನು ಅಗಲೀಕರಣ ಮಾಡುವಂತೆ ದಶಕಗಳÀ ಗ್ರಾಮಸ್ಥರ ಬೇಡಿಕೆ ಇನ್ನೂ ಈಡೇರಿಲ್ಲ.
ಈ ರಸ್ತೆಯ ಬಗ್ಗೆ ಲೋಕೋಪಯೋಗಿ ಇಲಾಖೆ ದಿವ್ಯ ಮೌನ ವಹಿಸಿದ್ದು, ಆಡಳಿತಗಾರರೂ ಸಹ ಅನಾದರ ತೋರುತ್ತಿದ್ದಾರೆ.
ಇತ್ತೀಚೆಗಷ್ಟೇ ರಸ್ತೆ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳ ಬೇಡಿಕೆ ಈಡೇರಿಕೆಗಾಗಿ ಗ್ರಾಮಸ್ಥರು ಸೇರಿ ಸಮಿತಿಯನ್ನು ರಚಿಸಿದ್ದು, ಒಂದೆರಡು ಸಭೆ ನಡೆಸಲಷ್ಟೇ ಸೀಮಿತವಾಗಿದೆ. ಇಲ್ಲೂ ಸಹ ರಾಜಕೀಯ ನುಸುಳಿರುವ ಸಾಧ್ಯತೆ ನಿಚ್ಛಳವಾಗಿದ್ದು, ಪರಿಣಾಮ ರಸ್ತೆ ಅಗಲೀಕರಣ ಬೇಡಿಕೆಯ ಕೂಗು ಅರಣ್ಯರೋಧನದಂತಿದೆ!
ಲೋಕೋಪಯೋಗಿ ಇಲಾಖೆಗೆ ಸೇರಿರುವ ರಾಜ್ಯ ಹೆದ್ದಾರಿ ಕಳೆದ ಅನೇಕ ದಶಕಗಳಿಂದ ದುರಸ್ತಿ ಕಾಣದೇ ಇದ್ದು, ಈ ರಸ್ತೆಯಲ್ಲಿ ಸಂಚರಿಸುವ ಸಾವಿರಾರು ಮಂದಿಗೆ ಸಮಸ್ಯೆ ತಂದಿಟ್ಟಿದೆ. ಸೋಮವಾರಪೇಟೆಯಿಂದ ಕೂಡುರಸ್ತೆ, ಕಲ್ಕಂದೂರು ಮಾರ್ಗವಾಗಿ ಹೊಸಬೀಡು, ತೋಳೂರುಶೆಟ್ಟಳ್ಳಿ, ಕೂತಿ ಸಂಪರ್ಕ ರಸ್ತೆಯು ಅತ್ಯಂತ ಕಿರಿದಾಗಿದ್ದು, ವಾಹನಗಳ ಸಂಚಾರಕ್ಕೆ ತೀವ್ರ ತೊಡಕಾಗಿದೆ.
ರಸ್ತೆಯು ಕಿರಿದಾಗಿರುವುದರಿಂದ ಎದುರಿನ ವಾಹನಕ್ಕೆ ಜಾಗ ಬಿಡುವ ಸಂದರ್ಭ ಅವಘಡಗಳು ಸಂಭವಿಸುತ್ತಿವೆ. ರಸ್ತೆಯ ಎರಡೂ ಬದಿಯಲ್ಲಿ ಮಳೆ ನೀರು ಹರಿದು ಚರಂಡಿ ನಿರ್ಮಾಣವಾಗಿದ್ದು, ದ್ವಿಚಕ್ರ ವಾಹನ ಸಂಚಾರ ಕಷ್ಟಸಾಧ್ಯವಾಗಿದೆ. ಈ ರಸ್ತೆಯಲ್ಲಿ ದಿನನಿತ್ಯ ೧೦ಕ್ಕೂ ಅಧಿಕ ಸರ್ಕಾರಿ, ಖಾಸಗಿ ಬಸ್‌ಗಳು ಸಂಚರಿಸುತ್ತಿವೆ. ಶಾಲಾ-ಕಾಲೇಜು ವಾಹನಗಳು ತೆರಳುತ್ತಿದ್ದು, ಕೃಷಿಕರು, ಕೂಲಿ ಕಾರ್ಮಿಕರು, ಹೊರ ಜಿಲ್ಲೆಯವರು ಹೆಚ್ಚಾಗಿ ಈ ರಸ್ತೆಯನ್ನು ಅವಲಂಬಿಸಿದ್ದಾರೆ.
ಕಳೆದ ೨೦ ವರ್ಷಗಳಿಂದಲೂ ಈ ರಸ್ತೆಯ ಅಗಲೀಕರಣ ಹಾಗೂ ದುರಸ್ತಿ ಕಾರ್ಯಕ್ಕೆ ಲೋಕೋಪಯೋಗಿ ಇಲಾಖೆ ಮುಂದಾಗಿಲ್ಲ. ನೆರೆಯ ಹಾಸನ ಹಾಗೂ ಮಂಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯೂ ಇದಾಗಿದೆ. ಸೋಮವಾರಪೇಟೆ ಪಟ್ಟಣದಿಂದ ಕಲ್ಕಂದೂರು-ಕೂಡುರಸ್ತೆ, ತೋಳೂರುಶೆಟ್ಟಳ್ಳಿ, ಕೂತಿ, ಹಾಸನ ಜಿಲ್ಲೆಯ ಗೊದ್ದು, ಕೂಡುರಸ್ತೆ, ಬಿಸಿಲೆ ಮಾರ್ಗವಾಗಿ ಸುಬ್ರಹ್ಮಣ್ಯ, ಕೂಡುರಸ್ತೆಯಿಂದ ಸಕಲೇಶಪುರ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯೂ ಇದಾಗಿದೆ. ಕೊಡಗಿನ ಗಡಿಯಾಗಿರುವ ಎಡದಂಟೆ-ಕೂಡು ರಸ್ತೆಯವರೆಗೆ ಅತ್ಯಂತ ಕಿರಿದಾಗಿರುವ ರಸ್ತೆ ವಾಹನಗಳ ಸಂಚಾರಕ್ಕೆ ಭಾರೀ ಸಮಸ್ಯೆ ತಂದೊಡ್ಡಿದೆ. ಕೂಡು ರಸ್ತೆಯಿಂದ ನೆರೆಯ ಜಿಲ್ಲೆಯಾದ ಹಾಸನಕ್ಕೆ ಒಳಪಟ್ಟಿರುವ ರಸ್ತೆ ಅಗಲೀಕರಣದೊಂದಿಗೆ ಡಾಂಬರೀಕರಣಗೊAಡು ಸುಸಜ್ಜಿತವಾಗಿದೆ.
ಕೂಡು ರಸ್ತೆ ಮಾರ್ಗವಾಗಿ ಸೋಮವಾರಪೇಟೆಗೆ ಆಗಮಿಸುವ ಮಂದಿ, ಗಡಿಕಲ್ಲು ಗ್ರಾಮಕ್ಕೆ ಆಗಮಿಸಿದೊಡನೆ ಕೊಡಗಿನ ಲೋಕೋಪಯೋಗಿ ಇಲಾಖೆಗೆ ಶಪಿಸುವುದು ಮಾಮೂಲಾಗಿದೆ. ಕಳೆದ ಅನೇಕ ದಶಕಗಳ ಹಿಂದೆ ಮೂರು ಮೀಟರ್ ಅಗಲದ ರಸ್ತೆ ನಿರ್ಮಾಣವಾಗಿದ್ದನ್ನು ಹೊರತುಪಡಿಸಿದರೆ ಮತ್ತೆ ಈ ರಸ್ತೆಯತ್ತ ಲೋಕೋಪಯೋಗಿ ಇಲಾಖೆ ಗಮನ ಹರಿಸಿಲ್ಲ. ಅನೇಕ ಸರ್ಕಾರಗಳು ಬಂದು ಹೋದರೂ, ಕೊಡಗಿಗೆ ಸಾವಿರಾರು ಕೋಟಿ ಅನುದಾನಗಳು ಬಿಡುಗಡೆಯಾದರೂ ಈ ರಸ್ತೆ ಮಾತ್ರ ಇಂದಿಗೂ ಅಗಲೀಕರಣವಾಗಿಲ್ಲ.
ಈ ರಸ್ತೆಯನ್ನು ಅಗಲೀಕರಣದೊಂದಿಗೆ ಅಭಿವೃದ್ಧಿ ಪಡಿಸಲು ಸರ್ಕಾರದಿಂದ ಅನುದಾನ ಒದಗಿಸಿ, ಲೋಕೋಪಯೋಗಿ ಇಲಾಖೆ ಮೂಲಕ ತುರ್ತು ಕಾಮಗಾರಿ ಕೈಗೊಳ್ಳಲು ನಿರ್ದೇಶನ ನೀಡಬೇಕೆಂದು ತೋಳೂರುಶೆಟ್ಟಳ್ಳಿ ಮೂಲಭೂತ ಸೌಕರ್ಯ ಅಭಿವೃದ್ಧಿ ಹೋರಾಟ ಸಮಿತಿಯಿಂದ ಇತ್ತೀಚೆಗಷ್ಟೇ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಮನವಿ ಸಲ್ಲಿಸಲಾಗಿದೆ.
ತೋಳೂರುಶೆಟ್ಟಳ್ಳಿ ವ್ಯಾಪ್ತಿಯಲ್ಲಿ ಎನ್‌ಡಿಆರ್‌ಎಫ್, ಸಿಎಂಜಿಎಸ್‌ವೈ, ಮಲೆನಾಡು ಪ್ರದೇಶಾಭಿವೃದ್ಧಿ, ೨೦೨೧-೨೨ನೇ ಸಾಲಿನ ಮಳೆಹಾನಿ ಪರಿಹಾರ ನಿಧಿ, ೫೦-೫೪ ಯೋಜನೆಯಡಿ ರೂ. ೧.೧೩ ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುವ ಗ್ರಾಮೀಣ ರಸ್ತೆ ಕಾಂಕ್ರೀಟ್, ಡಾಂಬರು, ಚರಂಡಿ, ಮೋರಿ ನಿರ್ಮಾಣ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದ ಸಂದರ್ಭವೂ ಸಹ, ಗ್ರಾಮಸ್ಥರು ರಾಜ್ಯ ಹೆದ್ದಾರಿಯ ಅಗಲೀಕರಣದ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಈ ಸಂದರ್ಭ ಮುಂದಿನ ದಿನಗಳಲ್ಲಿ ೧ ಕೋಟಿ ಅನುದಾನದಡಿ ರಸ್ತೆ ಅಭಿವೃದ್ಧಿಪಡಿಸುವ ಭರವಸೆಯನ್ನು ಶಾಸಕರು ನೀಡಿದ್ದು, ಈ ಅನುದಾನದಡಿ ರಸ್ತೆಯ ಅಗಲೀಕರಣ ಹಾಗೂ ಡಾಂಬರೀಕರಣ ಅಸಾಧ್ಯ. ಸೋಮವಾರಪೇಟೆ ಪಟ್ಟಣ ಸಮೀಪದ ಕೂಡುರಸ್ತೆಯಿಂದ ಕೊಡಗಿನ ಗಡಿ ಎಡದಂಟೆಯವರೆಗೆ ೧೩ ಕಿ.ಮೀ. ಅಂತರವಿದ್ದು, ಎಲ್ಲಾ ಕಡೆಯೂ ರಸ್ತೆ ಕಿರಿದಾಗಿದೆ. ೧೩ ಕಿ.ಮೀ. ರಸ್ತೆ ಅಗಲೀಕರಣಗೊಂಡರೆ ನೆರೆಯ ಹಾಸನ ಜಿಲ್ಲೆಯ ಸುಸಜ್ಜಿತ ರಸ್ತೆಗೆ ಸಂಪರ್ಕಗೊಳ್ಳುತ್ತದೆ. ಈ ಬಗ್ಗೆ ವಿಸ್ತೃತ ಯೋಜನೆ ಸಿದ್ದಪಡಿಸಬೇಕಾಗಿದೆ.
ತೋಳೂರುಶೆಟ್ಟಳ್ಳಿಯ ಹರಪಳ್ಳಿ ಗ್ರಾಮದಲ್ಲಿ ೨೭ ಕೋಟಿ ವೆಚ್ಚದ ಅಂಬೇಡ್ಕರ್ ವಸತಿ ಶಾಲೆಯೂ ನಿರ್ಮಾಣವಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲಾರಂಭಗೊಳ್ಳುವ ನಿರೀಕ್ಷೆಯಿದೆ. ಶಾಲೆ ಆರಂಭಗೊAಡರೆ ಈ ರಸ್ತೆಯಲ್ಲಿ ವಾಹನ ಸಂಚಾರವೂ ಹೆಚ್ಚಲಿದೆ.
ಆದಷ್ಟು ಶೀಘ್ರವಾಗಿ ಈ ರಸ್ತೆಯ ಅವ್ಯವಸ್ಥೆಗೆ ಮುಕ್ತಿ ನೀಡಿ, ಈ ಭಾಗದ ಸಾರ್ವಜನಿಕರ ಬಹುಕಾಲದ ಬೇಡಿಕೆಯನ್ನು ಈಡೇರಿಸಲು ಲೋಕೋಪಯೋಗಿ ಇಲಾಖೆ ಮುಂದಾಗಬೇಕಿದೆ. - ವಿಜಯ್ ಹಾನಗಲ್