ವಿಶೇಷ ವರದಿ: ದಿನೇಶ್ ಮಾಲಂಬಿ

ಆಲೂರು-ಸಿದ್ದಾಪುರ, ಡಿ. ೩೦: ಕಳೆದ ವಾರದಲ್ಲಿ ಸುರಿದ ಅಕಾಲಿಕ ಮಳೆಯಿಂದ ಸೋಮವಾರಪೇಟೆ ತಾಲೂಕಿನಾದ್ಯಾದಂತ ಭತ್ತ ಮತ್ತು ಕಾಫಿಗೆ ಹಾನಿಯಾಗಿತ್ತು. ಕಾಫಿ ತೋಟದಲ್ಲಿ ಹಣ್ಣು ಕುಯ್ಯಲು ಮತ್ತು ಪಲ್ಪರ್ ಮಾಡಿದ ಕಾಫಿ ಬೀಜ ಒಣಗಿಸಲು ತುಂಬಾ ತೊಂದರೆಯಾಗಿತ್ತು. ಕೆಲವು ಕಡೆಗಳಲ್ಲಿ ಮಳೆಗೆ ಕಾಫಿ ಹಣ್ಣು ಉದುರಿ ನಷ್ಟ ಸಂಭವಿಸಿದೆ. ಕಟಾವು ಮಾಡಿದ್ದ ಭತ್ತ ಗದ್ದೆಯಲ್ಲಿ ಮಳೆಗೆ ಕೊಳೆತು ಹೋಗಿತ್ತು.

ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ೧೦ ದಿನದ ಹಿಂದೆ ೪ ಇಂಚು ಮಳೆಯಾಗಿತ್ತು. ಇದರ ಪರಿಣಾಮ ಈಗ ಬಹಳಷ್ಟು ಕಾಫಿ ತೋಟಗಳಲ್ಲಿ ಅಕಾಲಿಕ ಸಮಯದಲ್ಲಿ ಕಾಫಿ ಗಿಡಗಳಲ್ಲಿ ಹೂವು ಬಿಟ್ಟಿದೆ. ಹೋಬಳಿ ವ್ಯಾಪ್ತಿಯಲ್ಲಿ ೧೦ ದಿನದ ಹಿಂದೆ ಮಳೆಯಾಗಿದ್ದ ಕಡೆಗಳಲ್ಲಿ ಕಾಫಿ ಗಿಡದಲ್ಲಿ ಹೂವು ಅರಳಿದೆ. ಹೆಚ್ಚಾಗಿ ರೋಬಸ್ಟಾ ಕಾಫಿ ಗಿಡಗಳಲ್ಲಿ ಹೂವು ಬಿಟ್ಟಿದೆ ಈಗ ಕಾಫಿ ಹಣ್ಣು ಕುಯ್ಯುವ ಸಮಯವಾಗಿದ್ದು, ಒಂದು ಕಡೆಯಲ್ಲಿ ಗಿಡದಲ್ಲಿ ಕಾಫಿ ಹಣ್ಣು ಫಸಲು ಬಿಟ್ಟಿದ್ದರೆ. ಅದೇ ಗಿಡದಲ್ಲಿ ಕಾಫಿ ಹೂವು ಬಿಟ್ಟಿದೆ.

ಅಕಾಲಿಕ ಸಮಯದಲ್ಲಿ ಅರಳಿದ ಕಾಫಿ ಹೂವು

ನವೆಂಬರ್-ಡಿಸೆAಬರ್ ತಿಂಗಳಲ್ಲಿ ಕಾಫಿ ಹಣ್ಣು ಕುಯ್ಲು ಮಾಡುತ್ತಾರೆ. ಮಾರ್ಚ್ ತಿಂಗಳಲ್ಲಿ ಮುಂಗಾರು ಮಳೆಯಾಗುವ ಸಂದರ್ಭದಲ್ಲಿ ಕಾಫಿ ತೋಟಗಳಲ್ಲಿ ಗಿಡದಲ್ಲಿ ಹೂವು ಬಿಟ್ಟು ಮಿಡಿಗಟ್ಟುತ್ತದೆ. ಒಂದು ವೇಳೆ ಮಾರ್ಚ್ ತಿಂಗಳಲ್ಲಿ ಮಳೆಯಾಗದಿದ್ದಾಗ ಬೆಳೆಗಾರರು ಕೊಳವೆ ಬಾವಿ ನೀರಾವರಿ ವ್ಯವಸ್ಥೆ ಮೂಲಕ ಗಿಡಗಳಿಗೆ ನೀರು ಹಾಯಿಸುತ್ತಾರೆ. ಇದರಿಂದ ಗಿಡಗಳಲ್ಲಿ ಹೂವು ಅರಳುತ್ತದೆ. ಆದರೆ ಶನಿವಾರಸಂತೆ ವ್ಯಾಪ್ತಿಯಲ್ಲಿ ೧೦ ದಿನದ ಹಿಂದೆ ಸುರಿದ ಭಾರೀ ಮಳೆಯಾಗಿದ್ದು ಇದರ ಪರಿಣಾಮ ರೋಬಸ್ಟಾ ತೋಟದಲ್ಲಿ ಕಾಫಿ ಹೂವು ಬಿಟ್ಟಿದ್ದು, ಇದರಿಂದ ಕಾಫಿ ಹಣ್ಣು ಕುಯ್ಯಲು ಅಡಚಣೆಯಾಗುತ್ತಿದೆ ಹಾಗೂ ಅಕಾಲಿಕ ಸಮಯದಲ್ಲಿ ಗಿಡದಲ್ಲಿ ಹೂವು ಬಿಟ್ಟಿರುವುದರಿಂದ ಹೂವು ಮಿಡಿಗಟ್ಟುವುದಿಲ್ಲ. ಇದರಿಂದ ವಾಡಿಕೆ ಸಮಯದಲ್ಲಿ ಮಳೆಯಾದರೂ ಸಹ ಗಿಡದಲ್ಲಿ ಹೂವು ಅರಳಲು ಸಾಧ್ಯವಾಗುವುದಿಲ್ಲ ಎಂದು ಬೆಳೆಗಾರರು ಆತಂಕ ಪಡುತ್ತಿದ್ದಾರೆ.