ಕೊಡಗು ಪುಟ್ಟಿಂಜಾಕೇ ನಂಗ ಈಡೆ ಕುಡೆಯರ ಕೂಡೆ ಪಣಿ ಚೈಕೊಂಡು ಉಳ್ಳೊ...ಪಣಿಯಂಗ. ಇತ್ತರೆ ಕಾಲ ಕೈಂಜಕಲೂ ಚರಕಾರ (ಗರ‍್ನಮೆಂಟು...) ನಂಗಾಕು ಒಂಜೂ ತರುವಕಾಣಿ. ಚರಕಾರ ಉಳಾನಾಂಜು ನಂಗಾಕು ಗೊತ್ತುಕಾಣಿ... (ಕೊಡಗು ಜನನವಾದಗಿನಿಂದ ನಾವು ಕೊಡವರ ಜೊತೆ ಕೆಲಸ ಮಾಡಿಕೊಂಡು ಬದುಕುತ್ತಿದ್ದೇವೆ. ಸರ್ಕಾರ ಇದುವರೆಗೆ ನಮಗೆ ಸವಲತ್ತು ನೀಡಿಲ್ಲ. ಸರ್ಕಾರ ಇದೆಯಾ ಎಂಬುದು ನಮಗೆ ಗೊತ್ತಿಲ್ಲ)... ಇದು ಕೊಡಗಿನಲ್ಲಿರುವ ಅಪರೂಪದ ಎರವ ಜನಾಂಗದವರ ವ್ಯಥೆಯ ಕಥೆ.

ಕೊಡಗಿನ ಮೂಲ ನಿವಾಸಿ ಎರವ ಜನಾಂಗವು ಅಳಿವಿನ ಅಂಚಿನಲ್ಲಿದ್ದು ಬಹುತೇಕ ಜನರು ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದಾರೆ. ಹಿಂಜರಿಕೆ, ಅಳುಕುತನ, ಕೀಳರಿಮೆ, ಸಮಾಜದಿಂದಾಗುವ ಶೋಷಣೆ ಇದಕ್ಕೆ ಪ್ರಮುಖ ಕಾರಣ ಎಂದರೆ ಅತಿಶಯೋಕ್ತಿಯಲ್ಲ. ಇಂತಹ ಹಲವಾರು ಕಾರಣಗಳಿಂದ ಎರವರು ಅಧಃಪತನಕ್ಕೆ ತಲುಪಿದ್ದಾರೆ. ಎರವ ಜನಾಂಗಕ್ಕೆ ಒಳ ಮೀಸಲಾತಿ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವತ್ತ ಮಾಡಿದರೆ ಮಾತ್ರ ಈ ಜನಾಂಗದ ಉಳಿವು ಸಾಧ್ಯವೇನೋ. ಎರವರು ಕೇರಳದ ವೆಯನಾಡುವಿನಿಂದ ಕೊಡಗಿಗೆ ವಲಸೆ ಬಂದಿರಬಹುದು ಎಂಬ ಅಭಿಪ್ರಾಯ ಇದೆ. ಕೊಡಗು ಜಿಲ್ಲೆಯ ದಕ್ಷಿಣ ಕೊಡಗಿನ ಭಾಗದಲ್ಲಿ ಪುರಾತನ ಕಾಲದಿಂದ ನೆಲಸಿರುವ ಈ ಜನಾಂಗದ ಉಳಿವಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದರೂ ಆ ಯೋಜನೆಗಳು ಅವರ ಕೈ ಸೇರುತ್ತಿಲ್ಲ. ಆ ಜನಾಂಗದ ಅಭಿವೃದ್ದಿಗಾಗಿ ಸ್ಥಾಪಿತಗೊಂಡ ವಿವಿಧ ಇಲಾಖೆಗಳು ನಾಮಕಾವಸ್ಥೆಗೆ ಕಾರ್ಯ ನಿರ್ವಹಿಸುತ್ತದೆ ವಿನಹಃ ನಿಜವಾದ ಕಾಳಜಿ ಆಸಕ್ತಿಯಿಂದಲ್ಲ. ನೈಜ ಎರವರು ಇಂದಿಗೂ ಕೂಡ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.

ಪರಿಶಿಷ್ಟ ಪಂಗಡಕ್ಕೆ ಸೇರಿದ ಈ ಜನಾಂಗದ ಯಾವೊಬ್ಬ ವ್ಯಕ್ತಿಯೂ ನೇರವಾಗಿ ಸರ್ಕಾರಿ ನೌಕರಿ ಪಡೆದುಕೊಂಡ ನಿದರ್ಶನ ಕಂಡು ಬರುತ್ತಿಲ್ಲ. ಇದ್ದರೂ ಅನುಕಂಪದ ಆಧಾರದಲ್ಲಿ ಅಥವಾ ದಿನಗೂಲಿಯಾಗಿ ಇರಬಹುದು. ಸರ್ಕಾರ ಪರಿಶಿಷ್ಠ ಪಂಗಡಕ್ಕೆ ಮೀಸಲಿಟ್ಟ ಎಲ್ಲಾ ಸೌಲಭ್ಯಗಳು ಎರವರನ್ನು ಹೊರತು ಪಡಿಸಿದಂತೆ ಉಳಿದ ಪಂಗಡಗಳು ಪಡೆದುಕೊಳ್ಳುತ್ತಿರುವುದು ನಿರ್ವಿವಾದ. ಈ ಬಗ್ಗೆ ಸರ್ಕಾರ ಎರವ ಜನಾಂಗದ ಅಭಿವೃದ್ಧಿ ಗಾಗಿಯೆ ಒಂದು ಪ್ರತ್ಯೇಕ ಮಂಡಳಿಯನ್ನು ರಚಿಸುವತ್ತ ಚಿಂತಿಸುವುದು ಅತಿ ಮುಖ್ಯ.

ಸಂಖ್ಯೆ ಕ್ಷೀಣ: ಹಲವು ದಶಕಗಳ ಹಿಂದೆ ಹೆಚ್ಚಿನ ಜನಸಂಖ್ಯೆ ಹೊಂದಿದ್ದ ಎರವರ ಸಂಖ್ಯೆ ಇದೀಗ ಕ್ಷೀಣಿಸುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ನಶಿಸಿ ಹೋಗುವ ಭೀತಿಯಲ್ಲಿದೆ. ಇದಕ್ಕೆ ಹಲವಾರು ಕಾರಣಗಳಿವೆ. ಪಡಿತರ ಸೌಲಭ್ಯವನ್ನು ಹೊರತು ಪಡಿಸಿದರೆ ಉಳಿದ ಎಲ್ಲಾ ಸರ್ಕಾರಿ ಸೌಲಭ್ಯಗಳಿಂದ ಇವರು ವಂಚಿತರಾಗಿದ್ದಾರೆ. ಸಮಾಜದ ಮುಖ್ಯವಾಹಿನಿಗೆ ತಂದರೂ ಮುಂದೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ವಿದ್ಯಾಭ್ಯಾಸದಿಂದ ವಿಮುಕ್ತ: ಎರವರು ಮೂಲ ನಿವಾಸಿಗಳ ಕಾಫಿತೋಟ, ಮತ್ತು ಮಾಲೀಕರು ನೀಡಿರುವ ವಸತಿ ಸೌಲ್ಯಭ್ಯದಿಂದ ದೂರ ಹೋಗಿ ಸರ್ಕಾರ ನೀಡುವ ನಿವೇಶನ ಹಾಗೂ ಜಾಗವನ್ನು ಪಡೆದುಕೊಂಡು ಪ್ರತ್ಯೇಕ ವಾಗಿ ಜೀವಸಲು ಹಿಂಜರಿಯುತ್ತಾರೆ. ಮಕ್ಕಳು ವಿದ್ಯಾಭ್ಯಾಸದಿಂದ ವಿಮುಕ್ತರಾಗು ತ್ತಿದ್ದು, ಸರ್ಕಾರ ಹಾಗೂ ತೋಟ ಮಾಲೀಕರು ಎಷ್ಟೇ ಉತ್ತೇಜನ ನೀಡಿದರೂ ಪ್ರಾಥಮಿಕ ಹಂತದಿAದಲೇ ಶಾಲಾ ಕಲಿಕೆಯಿಂದ ದೂರ ಉಳಿಯುತ್ತಿದ್ದಾರೆ.

ಕುಡಿತದ ಚಟ: ಬಹುತೇಕ ಎರವರು ಮದ್ಯಪಾನದ ಚಟಕ್ಕೆ ಬಲಿಯಾಗಿ ನಡು ವಯಸ್ಸಿನಲ್ಲಿಯೇ ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ. ಎಳೆ ವಯಸ್ಸಿನಲ್ಲಿಯೇ ಕುಡಿತದ ಚಟಕ್ಕೆ ದಾಸರಾಗುವುದರಿಂದ ಈ ಜನಾಂಗದ ಸಂತತಿ ವೃದ್ಧಿ ಶಕ್ತಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಇವರು ಪೌಷ್ಟಿಕ ಆಹಾರವನ್ನು ಸೇವಿಸುವುದಿಲ್ಲ. ಇವರ ಮಕ್ಕಳು ಕೂಡ ಅಪೌಷ್ಠಿಕತೆ ಯಿಂದ ಕೂಡಿದ್ದಾರೆ. ಆಹಾರದಲ್ಲಿ ಹೆಚ್ಚಾಗಿ ಗಾಂಧಾರಿ ಮೆಣಸು ಬಳಕೆ ಮಾಡುತ್ತಾರೆ.

ಸಂತಾನ ಹರಣ ಶಸ್ತçಚಿಕಿತ್ಸೆಯೂ ಕಾರಣ : ಜನಸಂಖ್ಯೆ ನಿಯಂತ್ರಣದ ನಿಟ್ಟಿನಲ್ಲಿ ವಿವಿಧ ಸರ್ಕಾರಿ ವೈದ್ಯಕೀಯ ಸಿಬ್ಬಂದಿಗಳಿಗೆ ನೀಡಿದ ಟಾರ್ಗೆಟ್‌ನ ಗುರಿ ತಲುಪಲು ಅಮಾಯಕ ಎರವ ಜನಾಂಗವನ್ನು ಗುರಿಯಾಗಿಸಿಕೊಂಡು ಇಲಾಖೆ ಯಶಸ್ವಿಯಾಗಿದೆ. ಅಲ್ಪ ಹಣದ ಆಸೆಗೆ ಒಳಪಟ್ಟು ಇವರು ಕ್ಷೀಣಿಸುವಂತಾಗಿದೆ. ಬಾಲ್ಯಾವಸ್ಥೆಯ ವಿವಾಹವು ಕೂಡ ಎರವ ಜನಾಂಗ ಅವನತಿಯ ಅಂಚಿಗೆ ತಲುಪಲು ಒಂದು ಕಾರಣವಾಗಿದೆ.

ಆಚಾರ ವಿಚಾರ: ಎರವ ಜನಾಂಗದ ಭಾಷೆ ಕೊಂಚ ಮಟ್ಟಿಗೆ ವಿಭಿನ್ನ ವಾದರೂ ಆಚಾರ-ವಿಚಾರ ಪದ್ಧತಿ ಪರಂಪರೆ ಉಡುಗೆ-ತೊಡುಗೆ, ಆಹಾರ ಪದ್ಧತಿ ಎಲ್ಲವು ಮೂಲ ನಿವಾಸಿಗಳ ಅನುಸರಿಸುವಂತದ್ದೆ. ಮದುವೆ, ಶವಸಂಸ್ಕಾರ, ಮಗುವಿನ ನಾಮಕರಣ ಇತ್ಯಾದಿಗಳು ಕೊಡವರ ಪದ್ಧತಿಯಂತೆ ನಡೆಯುತ್ತಿದೆ.

ಪ್ರಮುಖ ಪಂಗಡ: ಕೊಡಗು ಜಿಲ್ಲೆಯ ಮೂಲ ನಿವಾಸಿಗಳ ಪೈಕಿ ಎರವ ಜನಾಂಗ ಕೂಡ ಒಂದು ಪ್ರಮುಖ ಪಂಗಡವಾಗಿದೆ. ಒಂದು ಮೂಲದ ಪ್ರಕಾರ ಕೊಡವ ಜನಾಂಗದ ಜತೆಯಲ್ಲಿಯೆ ಈ ಎರವ ಜನಾಂಗವು ಕೂಡ ಕೊಡಗಿನಲ್ಲಿ ನೆಲೆ ನಿಂತಿರುವ ಬಗ್ಗೆ ಹಲವು ದಾಖಲೆಗಳು ಸ್ಪಷ್ಟೀಕರಿಸುತ್ತದೆ. ಎರವ ಜನಾಂಗದಲ್ಲಿ ನಾಲ್ಕು ಒಳಗುಂಪುಗಳಿವೆ. ಪಣಿ ಎರವ, ಪಂಜರಿ ಎರವ, ಬಡಗ ಎರವ ಮತ್ತು ಕಾಗೆ ಎರವ.

ಪಣಿ ಎರವರು: ಪಣಿ ಎರವರು ೧೭೯೨ ರ ಈಚೆಗೆ ಅವರ ಮೂಲದ ಬಗ್ಗೆ ನಿಖರ ಮಾಹಿತಿ ಇಲ್ಲ. ಇವರು ಬಹುತೇಕ ಭೂ ಮಾಲೀಕರ ಲೈನ್ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಪಿತೃ ಪ್ರಧಾನ ಕುಟುಂಬ ಇವರದಾಗಿದೆ. ಪಿತೃ ವಂಶಿಯ ಮಕ್ಕಳು ತಂದೆ ಕಡೆಗೆ ಸೇರುತ್ತಾರೆ. ಇವರಲ್ಲಿ ಕುಲವನ್ನು ಸೂಚಿಸಲು ಪಟ್ಟೋಲೆ ಮತ್ತು ತಾರಣ ಎಂಬ ಪದವನ್ನು ಬಳಸುತ್ತಾರೆ. ಒಂದೇ ಕುಲದೊಳಗೆ ವಿವಾಹವಾಗುವುದು ನಿಷಿದ್ದ. ಪಣಿ ಎರವರಿಗೆ ಕೊಡವ ಜನಾಂಗಕ್ಕೂ ಅವಿನಾಭಾವ ಸಂಬAಧ ಇದೆ. ಇವರ ಮದುವೆ, ನಾಮಕರಣ ಸಾವು ಸೇರಿದಂತೆ ಬಹತೇಕ ಆಚಾರ ವಿಚಾರ ಎಲ್ಲಾವು ಕೊಡವರ ಪದ್ಧತಿಯನ್ನು ಅನುಕರಿಸುತ್ತದೆ. ಪಣಿ ಎರವರ ಬಗ್ಗೆ ಸರಕಾರ ನಡೆಸಿದ ಜನಗಣತಿಯ ಸಮೀಕ್ಷೆಯಲ್ಲಿ ೩೫ ತಾರಣಗಳನ್ನು ಗುರುತಿಸಲಾಗಿದೆ. ಅಚ್ಚಿರಿಯ, ಅಮ್ಮಂಗಾಲಿಯ, ಅನಿಮಲೈ, ಆಂಜಿಲಿಯ, ಬೈನಾಡು, ಬೇಂಗೇರಿಯಮ್, ಬೂತ್ಯಾಧಿ, ಚೆರತೋನಿಯಮ್, ಚೇರಿಕೆ, ಚಿಂಗಪಾಚೆ, ಚಿಂಗಾರಿಮಾರು, ಚುಳೋಡು, ಚುಂಡೆಪಟ್ಟಿಯೆ, ಏವಿಲಾತು, ಇಡೆಯೋಡೆ, ಅಯ್ಯಂಚೆರಿಯೆ, ಕಿಡೇಚ್ಚುಳ, ಕರುಮತ್ತೆöÊ, ಕಿರಿಮತ್ತೆöÊ, ಕಿಯಾಕ್ಕೆöÊ, ಕೋತಾಲಿಯಂ, ಕೊಟ್ಟೆಪಟ್ಟಿಯ, ಕೋಯಿಮುಟ್ಟೆöÊ, ಕುಂಡನಿಯA, ಕುಟ್ಟುಚೆರೇಯೈ, ಮಡಾತಿಲೆ, ಮಲೈಕೋಡು, ಮುತ್ತೋಟ್ಟೆöÊ, ಮುಚ್ಚಳಿಯಂ, ಮುಂಡಚಿಯ, ನಗರತ್ತೆ, ಪಾಕತ್ತೆöÊ, ಪಾಪ್ಪಲಿಯೆ, ಪತ್ತುಬೂಡು, ತಂದಿಯೋಡೆಲಿ ಇವುಗಳು ಕೇವಲ ವಿವಾಹ ಸಂಬAಧ ಸೀಮಿತಗೊಳಿಸುವುದಕ್ಕೆ ಮಾತ್ರ ಅಸ್ತಿತ್ವದಲ್ಲಿ ಇರುವಂತೆ ಕಂಡುಬರುತ್ತಿದೆ. ಇವರ ಮುಖ್ಯಸ್ಥ ಚಮ್ಮಕಾರರು, ಅರ್ಚಕರಾದ ಅಟ್ಟಾಳಿಗಳು ವಿವಾಹ, ಶವ ಸಂಸ್ಕಾರಗಳಲ್ಲಿ ಮುಖ್ಯ ಪಾತ್ರವಹಿಸುತ್ತಾರೆ.

ಪಣಿ ಎರವರು ತಮ್ಮ ಮೂಲವನ್ನು ಮಾನಾತುರುಮಕ್ಕ ಎಂಬ ಭೂತಗಳ ಎರಡು ಮಕ್ಕಳಿಗೆ ಒಯ್ಯುತ್ತಾರೆ. ಈ ಎರಡು ಅಣ್ಣ-ತಂಗಿಯರು ಇಪ್ಪುಮಲೈ ತಂಬಿರನ ಬಂಧನಕ್ಕೆ ಬಿದ್ದು ಸಮಯ ಸಂದರ್ಭಗಳ ಒತ್ತಡದಿಂದ ಗಂಡ-ಹೆAಡತಿಯರಾಗಿ ಬಾಳಿದರು. ಇವರ ವಂಶದವರೇ ಪಣಿ ಎರವರು ಎಂದು ನಂಬಿದ್ದಾರೆ. ಪಣಿ ಎರವರ ದೇವರುಗಳು ಇಪ್ಪಿಮಲೈನ ತಂಬಿರ ಮತ್ತು ತಂಬಿರಾಟ, ಅಂಜಲತ್ತು ಅಪ್ಪೆಮೂತ್ತಿ, ಪಾಪ್ಪಲತ್ತು ಅಮ್ಮೆಮುತ್ತಿ, ನಿರ್‌ಮಲೈ ಮುತ್ತಾಚಿ, ಕಲಿಮಲೈ ಮುತ್ತಾಚಿ ಮತ್ತು ಹೊನ್ನಮಲೈ ಮುತ್ತಾಚಿ. ಇವುಗಳಲ್ಲಿ ತಂಬಿರ ಮತ್ತು ಅಂಜಲತ್ತು, ಅಪ್ಪೆಮುತ್ತಿಗಳು ಪುರುಷ ದೇವರುಗಳು, ಉಳಿದವು ಸ್ತಿçà ದೇವತೆಗಳು. ಈ ಎಲ್ಲಾ ದೇವರುಗಳು ಕೇರಳದಲ್ಲಿ ಇವೆ ಎನ್ನುತ್ತಾರೆ. ಆದರೆ ಎಲ್ಲಿ ಇವೆ ಎಂದು ಖಚಿತ ಗೊಂಡಿಲ್ಲ. ಈ ದೇವತೆಗಳನ್ನು ಅಟ್ಟಾಳಿಯು ಮನೆಗಳಲ್ಲಿ ಸಾಮೂಹಿಕ ಪೂಜೆಗಳಲ್ಲಿ ಎಲ್ಲಿ ಬೇಕಾದರೂ ಆಹ್ವಾನಿಸಿ ಪೂಜಿಸುತ್ತಾರೆ. ಸಮುದಾಯ ಪೂಜೆಗಳನ್ನು ತೆರ ಎಂದು ಕರೆಯುತ್ತಾರೆ. ಪಣಿ ಎರವರು ತಮ್ಮ ಬೀಡುಗಳ ಸಮೀಪ ಕಾಡುಗಳಲ್ಲಿ ಅಲ್ಲಲ್ಲಿ ದೇವಸ್ಥಾನಗಳನ್ನು ಕಟ್ಟಿಕೊಂಡು ದೇವರುಗಳನ್ನು ಕಲ್ಲಿನ ರೂಪದಲ್ಲಿ ಪೂಜಿಸುತ್ತಾರೆ. ದೇವರ ಜೊತೆಗೆ ಕತ್ತಿ, ತ್ರಿಶೂಲ, ಗಂಟೆ, ದೀಪ ಇತ್ಯಾದಿಗಳನ್ನು ಇಡುತ್ತಾರೆ.

ಪಂಜರಿ ಎರವರು: ಕೊಡಗಿನ ಮೂಲ ನಿವಾಸಿಗಳ ಕುಟುಂಬಗಳ ಅದರಲ್ಲೂ ವಿಶೇಷವಾಗಿ ಕೊಡವರ ಕೃಷಿ ಕಾರ್ಮಿಕರಾಗಿ ತಲೆ ತಲಾಂತರದಿAದ ದುಡಿಯುತ್ತಿ ದ್ದಾರೆ. ಪಂಜರಿ ಎರವರು ಅರಣ್ಯ ಪ್ರದೇಶಗಳ ನಿವಾಸಿಗಳಾಗಿದ್ದಾರೆ. ಇವರಲ್ಲಿ ೨ ಗುಂಪುಗಳಿದೆ. ಇಪ್ಪು ಮಲೆ ಎರವರು ಮತ್ತು ಕರಟಿ ಎರವರು. ಇಪ್ಪು ಮಲೆ ಎರವರು ಪೊನ್ನಂಪೇಟೆ, ಶ್ರೀಮಂಗಲ ಕಡೆಯಲ್ಲಿ, ಕರಟಿ ಎರವರು ಕೇರಳ ಗಡಿಯ ಬೈತೂರು ಸಮೀಪ ಪರಟಿ ಮಲೆಯಲ್ಲಿ ಕಂಡುಬರುತ್ತಾರೆ. ಪಂಜರಿ ಎರವರು ತಮ್ಮ ಮೂಲವನ್ನು ಮಣ್ಣಿನ ೨ ಹೆಣ್ಣು ಗಂಡು ಬೊಂಬೆಗಳಿಗೆ ಒಯ್ಯುತ್ತಾರೆ. ಮೇಲ್ಜಾತಿಯರಿಬ್ಬರು ಮಣ್ಣಿನಿಂದ ಹೆಣ್ಣು ಮತ್ತು ಗಂಡು ವಿಗ್ರಹಗಳನ್ನು ಮಾಡಿದ ರೆಂದು ಅದಕ್ಕೆ ದೇವರು ಜೀವಕೊಟ್ಟನೆಂದು, ಅವರು ಗಂಡ-ಹೆAಡತಿಯರಾಗಿ ಅವರಿಂದ ಬಂದ ಸಂತತಿಯೇ ಪಂಜರಿ ಎರವರು ಎಂದು ದಂತಕಥೆ ಇದೆ.

ಇವರು ಮಾತೃವಂಶಿಯರು : ವಂಶವನ್ನು ಹೆಣ್ಣು ಮಕ್ಕಳಿಂದ ಗುರುತಿಸುತ್ತಾರೆ. ಮಕ್ಕಳು ತಾಯಿಯ ವಂಶಕ್ಕೆ ಸೇರಿದವರು. ವಿವಾಹವಾದ ಮೇಲೆ ಪುರುಷನು ತನ್ನ ತಂದೆಯ, ಸ್ತಿçÃಯು ತನ್ನ ತಾಯಿಯ ವಂಶಕ್ಕೆ ಸೇರಿರುತ್ತಾರೆ. ಆದರೆ ಮಾತೃಪ್ರಧಾನರಲ್ಲ, ತಂದೆಯೇ ಕುಟುಂಬದ ಯಜಮಾನ. ವಂಶವು ಅನೇಕ ಕುಟುಂಬಗಳನ್ನು ಹೊಂದಿದ್ದು, ಅವುಗಳಿಗೆಲ್ಲಾ ಒಬ್ಬ ಸ್ತಿçà ಮೂಲವಾಗಿರುತ್ತಾಳೆ. ಈ ಎಲ್ಲಾ ಕುಟುಂಬಗಳ ಹಿರಿಯನು ಯಜಮಾನನಾಗಿರುತ್ತಾನೆ. ವಿವಾಹ ಹಾಗೂ ಮರಣ ಹೊಂದಿದ ಸಂದರ್ಭ ಕಾರ್ಯಗಳನ್ನು ನಿರ್ವಹಿಸುತ್ತಾನೆ. ಇವರು ಕುಲಗಳನ್ನು ಚಮ್ಮ ಮತ್ತು ಕುಡಿಯ ಎಂದು ಕರೆಯುತ್ತಾರೆ. ಇವರ ಜನಪದದ ಪ್ರಕಾರ ೩೩ ಕುಲಗಳ ಹೆಸರುಗಳು ಇದೆ. ಇವರ ಭಾಷೆಗೂ ಪಣಿ ಎರವರ ಭಾಷೆಗೂ ವ್ಯತ್ಯಾಸ ಇದೆ. ಇವರು ತಮ್ಮ ಮೂಲ ಸ್ಥಾನವನ್ನು ತಿರ್‌ನೆಲ್ಲಿಗೂ ತಮ್ಮ ಮೂಲ ಪುರುಷನನ್ನು ಅಚ್ಛೆ ಮತ್ತು ಇತ್ತಿಗೂ ಒಯ್ಯುತ್ತಾರೆ.

ಪಂಜರಿ ಎರವರಿಗೂ ಕೇರಳದ ಅಡಿಯರಿಗೂ ವೈವಾಹಿಕ ಸಂಬAಧವಿದ್ದು, ಇವರ ಸಂಪ್ರದಾಯಗಳು ಒಂದೇ ಆಗಿದೆ. ಇವರ ಜನಪದದ ಪ್ರಕಾರ ೩೩ ಕುಲಗಳಿವೆ. ಅಂಜಿಲ, ಬಡಾಕ್ ಮಂಜು, ಬಾಳೆಪಾತೆರ, ಬೆಳ್ಳಿಚಲು, ಬೈನಾಟ್ಲು, ಚೈಂದೆ, ಚಲುಂಬೇಡು, ಚೇಗಾದಿ, ಚೆರುವಳ್ಳ, ಏವೀಲ, ಇಡೇಮಲೆ, ಕಚ್ಚೇಲೆ, ಕಡೇಮಲೆ, ಕಾಳಕೊಟ್ಟೆöÊ, ಕಲ್ಲುಮಾನಿ, ಕಲ್ಯ, ಕರೈಲ, ಕೊಟ್ಟೆöÊ, ಕುಪ್ಪೆತೋಡ, ಮಾಡಚೇರಿ, ಮಾಮಟ್ಲು, ಮರೇಂಗಾವ್ಲ, ಮುದ್ರೀಲ, ಮುದುಂಗುತ್ತು, ನಾಲಪ್ಪಾಡಿ, ಪನ್ನೇಲಿ, ಪಾವಡೆ, ಪೊದರ್ ಮಂಜು, ಪೂದರಿ, ಪುಡುಚೇರಿ, ಕುದುರು, ತಿರುಮಂಜೆ ಮತ್ತು ಉಳ್ಳಂಗುತ್ತು. ಇವರುಗಳ ಒಂದೇ ಕುಲದೊಳಗೆ ವಿವಾಹಗಳು ನಿಷಿದ್ದ.

ಇವರ ಹಿರಿಯನನ್ನು ಚಮ್ಮಕಾರನೆನ್ನುತ್ತಾರೆ : ಈ ಚಮ್ಮಗಳನ್ನು ಹದಿಮೂರು ಹೊರಗುಂಪುಗಳಾಗಿಯೂ ಅವುಗಳನ್ನು ಪುನಃ ೩ ಗುಂಪುಗಳಾಗಿ ವಿಂಗಡಿಸಿ ದ್ದಾರೆ. ಈ ಮೂರು ಗುಂಪುಗಳಾದ ಬಡಾಕ್ ಮಂಜುಗೆ, ಕರಿಚಾತ್ತೆöÊಮಾಳಿಯಮ್ಮೆöÊ ಮತ್ತು ಕಿರುನೆಲ್ಲಿ ಮಂಜುಗೆ ಪಕತ್ತಯ್ಯಗಳು ದೇವತೆಗಳು ಎಲ್ಲಾ ಚಮ್ಮಗಳು ಸಮಾನ ಅಂತಸ್ತಿನವು. ಬಡಾಕ್ ಮಂಜು ದೇವತೆಯಾದ ಪೂಕ್ಕರಿಮಗೆಗೆ ಶಾಖಾಹಾರಿ ನೈವೇದ್ಯ ಮಾಡುತ್ತಾರೆ. ಪಂಜರಿ ಎರವರ ಊರುಗಳನ್ನು ಕುಂಜ ಎಂದು ಕರೆಯುತ್ತಾರೆ. ಪ್ರತಿಯೊಂದು ಕುಂಜಕ್ಕೂ ಕುಂಜಕಾರನಿರುತ್ತಾರೆ. ಇವರಲ್ಲಿ ವಿವಾಹ ವಿಚ್ಚೇದನೆ, ಪುನರ್ ವಿವಾಹ, ವಿಧವಾ ವಿವಾಹಗಳಿಗೆ ಅವಕಾಶ ಇದೆ. ಸತ್ತವರನ್ನು ಸುಡುವುದು ಮತ್ತು ಹೂಳುವುದು ಇವರ ಸಂಸ್ಕೃತಿ.

ಋತುಮತಿ: ಹೆಣ್ಣು ಮಕ್ಕಳು ಮೈನೆರೆದಾಗ ಋತುಮತಿ ಆಗುವುದನ್ನು ಹಿರೆನ್ಯಾ ಕನ್ಯಾಳ ಎಂದು ಕರೆಯುತ್ತಾರೆ. ಇವರು ಮೈನರೆದಂತಹ ಸಂದರ್ಭದಲ್ಲಿ ಮನೆ ಸೂತಕವಾಗಿದ್ದಾಗ ಸ್ವಲ್ಪ ದೂರದಲ್ಲಿಯೇ ಗುಡಿಸಿಲು ಹಾಕಿ ಅಲ್ಲೇ ಋತುಮತಿಯನ್ನು ಬಿಡುತ್ತಾರೆ. ೧೫ ದಿನಗಳ ನಂತರ ಸ್ನಾನ ಮಾಡಿಸಿ ಎಲ್ಲರೂ ಸ್ನಾನ ಮಾಡಿ ಗಂಗಾ ಪೂಜೆಯನ್ನು ನಡೆಸಿ ಸೂತಕವನ್ನು ತೆಗೆಯುತ್ತಾರೆ.

ಮದುವೆ ಶಾಸ್ತç: ಮದುವೆ ಶಾಸ್ತçವು ೩ ಹಂತದಲ್ಲಿದ್ದು ಇಳೆ ಶಾಸ್ತç ಅಥವಾ ನಿಶ್ಚಿತಾರ್ಥ, ಮಂಗಳಧಾರೆ, ಗಂಗಾ ಪೂಜೆ. ಕುಟುಂಬ ಸದಸ್ಯರು ಹಾಗೂ ಗುರು ಹಿರಿಯರ ಸಮ್ಮುಖದಲ್ಲಿ ವರ ತಾಳಿ ಕಟ್ಟುವುದರ ಮೂಲಕ ವಧುವನ್ನು ವರಿಸುತ್ತಾನೆ.

ಸಾವು: ಕುಟುಂಬದಲ್ಲಿ ಸಾವು ಸಂಭವಿಸಿದರೆ ಬಂಧು-ಬಳಗ ಬಂದ ನಂತರ ಶವ ಪೂಜೆಯನ್ನು ಕನ್ಯಾನಾಡಿ, ಅಜ್ಜರಕೋಲು, ಪೇಯಿಬಳೆಗಳನ್ನು ಹಿಡಿದುಕೊಂಡು ಹಾಡಿ ಪೂರ್ವಿಕರನ್ನು ನೆನೆದು ಶೃಂಗರಿಸಿದ ಚಟ್ಟದಲ್ಲಿ ಕುಳ್ಳಿರಿಸಿ ಶವ ಸಂಸ್ಕಾರ ನಡೆಸುತ್ತಾರೆ. ಹೆಂಗಸರು ಸ್ಮಶಾನಕ್ಕೆ ತೆರಳುವುದು ನಿಶಿದ್ದವಾಗಿದೆ. ಸತ್ತ ಸೂತಕವನ್ನು ಚಾವುಪಿಲೆ ಎಂದು ಕರೆಯುತ್ತಾರೆ. ತಿಥಿ ಕರ್ಮಾಂತರವನ್ನು ಪದಿಮುಂಜು ಎಂದು ಕರೆಯುತ್ತಾರೆ.

ದೇವರು ಕರೆಯುವುದು: ಸಂಸಾರ ಹಾಗೂ ಕುಟುಂಬದಲ್ಲಿ ತೊಂದರೆ ಉಂಟಾದಾಗ, ಯಾವುದಾದರೂ ವಸ್ತು ಕಳೆದು ಹೋದರೆ, ರೋಗ ರುಜಿನಗಳು ಬಂದರೆ, ಮಕ್ಕಳು ಮನೆ ಬಿಟ್ಟುಹೋದರೆ, ಕುಟುಂಬದ ದೈವಗಳನ್ನು ಕನ್ಯಾಲಾಡಿಯ ಮುಖಾಂತರ ಆಹ್ವಾನಿಸುತ್ತಾರೆ. ಇದನ್ನು ಉಳಿಯಂತರ ಎಂದು ಕರೆಯುತ್ತಾರೆ.

ಬಡಗ ಎರವರು: ಇವರು ವೀರಾಜಪೇಟೆ ತಾಲೂಕಿನ ಈಶಾನ್ಯ ಭಾಗದಲ್ಲಿ ಕಂಡು ಬರುತ್ತಾರೆ. ಇವರಲ್ಲಿ ೨ ಒಳ ಪಂಗಡಗಳಿವೆ. ಹೆಚ್.ಡಿ. ಕೋಟೆ ಕಡೆಯಿಂದ ಬಂದ ಎರವರು ಮತ್ತು ವೀರಾಜಪೇಟೆ ಈಶಾನ್ಯ ದಿಕ್ಕಿನಲ್ಲಿರುವ ಸೋಲಿಗರೆಂದುಕೊಳ್ಳುವ ಬಡಗ ಎರವರು. ಮೊದಲನೇ ಗುಂಪಿನವರು ಈಗಲೂ ಕೂಡ ಹೆಚ್.ಡಿ.ಕೋಟೆ ಜನರೊಂದಿಗೆ ಸಂಬAಧ ಇಟ್ಟುಕೊಂಡಿ ದ್ದಾರೆ. ಇವರ ಮನೆ ಮಾತು ಕನ್ನಡ. ಇವರ ಸ್ಥಳದ ಆಧಾರದ ಮೇಲೆ ಅನೇಕ ಕುಲಗಳಿದ್ದು, ಕಟ್ಟೆಮನೆ ಮತ್ತು ಗಡಿಮನೆ ಎಂಬ ೨ ದೊಡ್ಡ ಪಂಗಡ ಗಳಿವೆ. ಪಿತೃಪ್ರಧಾನ ಕುಟುಂಬ. ಮದುವೆಗೆ ಸೋದರ ಮಾವ ಅಥವಾ ಸೋದರ ಅತ್ತೆಯ ಮಗಳಿಗೆ ಹೆಚ್ಚು ಪ್ರಾಶಸ್ತö್ಯ ನೀಡುತ್ತಾರೆ. ಕನ್ಯಾ ಶುಲ್ಕ ರೂಢಿಯಲ್ಲಿದೆ. ವೀಳ್ಯ ಶಾಸ್ತç, ದೇವರು ತರುವುದು, ಕಂಕಣ ಧಾರಣೆ, ಧಾರೆ ಮುಂತಾದವು ಮದುವೆಯ ಮುಖ್ಯ ಅಂಗಗಳು. ಮದುವೆಯಲ್ಲಿ ಮದ್ಯ-ಮಾಂಸ ನಿಷೇಧ. ವಿವಾಹ ವಿಚ್ಚೇದನ ವಿಧವಾ ವಿವಾಹಗಳು ರೂಢಿಯಲ್ಲಿದೆ. ಮಹದೇಶ್ವರ ದೇಶದ ಮಾರಮ್ಮ, ದಂಡು ಮಾರಮ್ಮ, ಚಿಕ್ಕದೇವಮ್ಮ, ಮೊದಲಾದ ದೇವರುಗಳನ್ನು ಇವರು ಪೂಜಿಸುತ್ತಾರೆ. ವೀರಾಜಪೇಟೆ ತಾಲೂಕಿನ ಈಶಾನ್ಯ ಭಾಗದಲ್ಲಿ ಕಂಡುಬರುವ ಬಡಗ ಎರವರು ಬಿಳಿಗಿರಿ ರಂಗನ ಬೆಟ್ಟದ ಸೋಲಿಗರ ಪಂಗಡಕ್ಕೆ ಸೇರಿದವರೆಂದು ಹೇಳಿಕೊಳ್ಳುತ್ತಾರೆ. ಮೈಸೂರು ದೊರೆಗಳ ಸೈನ್ಯ ದೊಂದಿಗೆ ಬಂದವರು ಕೊಡಗಿನಲ್ಲಿಯೇ ಉಳಿದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮದುವೆಗಳಲ್ಲಿ ಧಾರೆಯೇ ಮುಖ್ಯಾಂಗ. ಕೂಡಾವಳಿ ಪದ್ಧತಿ ರೂಢಿಯಲ್ಲಿದೆ. ಸಿದ್ದೇಶ್ವರ, ಬಿಳಿಗಿರಿ ರಂಗ, ವೀರಭದ್ರ, ಮಾದಯ್ಯ, ಬಸವ, ಪಿರಿಯಾಪಟ್ಟಣದ ಅಮ್ಮ, ಗುಳಿಗ, ಚೌಡಿ ಮೊದಲಾದ ದೇವತೆಗಳನ್ನು ಪೂಜಿಸುತ್ತಾರೆ.

ಕಾಗೆ ಎರವರು: ಇವರನ್ನು ಕಾಗೆ ಪಣಿಯರು ಎಂದು ಕರೆಯುತ್ತಾರೆ. ಇವರ ಸಂಖ್ಯೆ ಬಹಳ ಕಡಿಮೆ ಇದ್ದು, ಮಧ್ಯೆ ಕೊಡಗಿನ ಹೆಬ್ಬಾಲೆ, ದೇವರ ಕಾಡುಗಳ ಪಕ್ಕದಲ್ಲಿ ಕಂಡು ಬರುತ್ತಾರೆ. ಕೊಡವರಂತೆ ವಸ್ತç ಸಂಹಿತೆ ಇವರ ಆಚಾರ-ವಿಚಾರ, ಪದ್ಧತಿ-ಪರಂಪರೆ ಗಳೆಲ್ಲವೂ ಪಣಿ ಎರವರನ್ನು ಹೋಲುತ್ತದೆ.

-ಪಳೆಯಂಡ ಪಾರ್ಥ ಚಿಣ್ಣಪ್ಪ, ವೀರಾಜಪೇಟೆ.