ಕುಶಾಲನಗರ, ಡಿ. ೨೮: ಪೊಲೀಸ್ ಇಲಾಖೆಯ ಸೋಮವಾರಪೇಟೆ ಉಪ ವಿಭಾಗದ ವತಿಯಿಂದ ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕುಗಳ ವ್ಯಾಪ್ತಿಯ ಹೋಂಸ್ಟೇ ಹಾಗೂ ರೆಸಾರ್ಟ್ಗಳ ಮಾಲೀಕರ ಸಭೆ ಕುಶಾಲನಗರದಲ್ಲಿ ನಡೆಯಿತು.
ಪಟ್ಟಣದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಶೀಘ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಪ್ರವಾಸೋದ್ಯಮ ಇಲಾಖೆ ನೀಡಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕೊಠಡಿಗಳ ದರ ಪಟ್ಟಿ ನಮೂದಿಸಿ ಪ್ರವಾಸಿಗರಿಗೆ ಕಾಣುವಂತೆ ಪ್ರದರ್ಶಿಸಬೇಕು. ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳನ್ನು ಅನೈತಿಕ ಚಟುವಟಿಕೆಗಳಿಂದ ರಕ್ಷಿಸುವುದರೊಂದಿಗೆ ಅನೈತಿಕ ಚಟುವಟಿಕೆಗಳು ನಡೆಯದಂತೆ ಎಚ್ಚರ ವಹಿಸುವ ಜವಾಬ್ದಾರಿ ನಿಭಾಯಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಕೆಲವು ರೆಸಾರ್ಟ್ಗಳ ಮಾಲೀಕರು, ಕೋಟ್ಯಂತರ ರೂಪಾಯಿಗಳ ಬಂಡವಾಳ ಹೂಡಿ ಹೋಂಸ್ಟೇ ಹಾಗೂ ರೆಸಾರ್ಟ್ಗಳನ್ನು ತೆರೆದಿದ್ದೇವೆ. ಹೊಸ ವರ್ಷದ ಆಚರಣೆ ಸಂದರ್ಭ ರಾತ್ರಿ ೧೨ ಗಂಟೆಯ ವರೆಗೆ ಪೊಲೀಸ್ ಇಲಾಖೆ ಸಮಯವನ್ನು ಕೊಡಬೇಕು ಎಂದು ಕೋರಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ಡಿವೈಎಸ್‌ಪಿ ಗಂಗಾಧರ್, ನಿಯಮಗಳ ಪಾಲನೆಯಷ್ಟೆ ನಮ್ಮ ಕೆಲಸ. ಅನಗತ್ಯವಾಗಿ ನಿಯಮಬಾಹಿರ ಚಟುವಟಿಕೆಗಳ ಬಗ್ಗೆ ದೂರುಗಳು ಬಂದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ರೆಸಾರ್ಟ್ಗಳಲ್ಲಿ ಪ್ರವಾಸಿಗರು ಗಾಂಜಾ ಅಫೀಮುಗಳನ್ನು ಮತ್ತಿತರ ಮಾದಕ ವಸ್ತುಗಳನ್ನು ಬಳಸದಂತೆ ಎಚ್ಚರವಹಿಸುವುದರೊಂದಿಗೆ ಅಕ್ರಮವಾಗಿ ಮದ್ಯ ಸೇವನೆಗೆ ಅವಕಾಶ ಕಲ್ಪಿಸದಂತೆ ನೋಡಿಕೊಳ್ಳಬೇಕಾಗಿದೆ ಎಂದರು.
ಈ ಸಂದರ್ಭ ಸಭೆಯಲ್ಲಿ ವೃತ್ತ ನಿರೀಕ್ಷಕ ಬಿ.ಜಿ. ಮಹೇಶ್, ಪಟ್ಟಣ ಠಾಣಾಧಿಕಾರಿ ಅಪ್ಪಾಜಿ, ಗ್ರಾಮಾಂತರ ಠಾಣೆಯ ಅಪರಾಧ ವಿಭಾಗದ ಠಾಣಾಧಿಕಾರಿ ಭಾರತಿ ಇದ್ದರು.