ಚಿತ್ರ - ವರದಿ : ವಾಸು ಎ.ಎನ್.
ಸಿದ್ದಾಪುರ, ಡಿ. ೨೮ : ಉಪಟಳ ನೀಡುತ್ತಿದ್ದ ಪುಂಡಾನೆಯೊAದನ್ನು ಕೊನೆಗೂ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಸಿದ್ದಾಪುರದ ಕರಡಿಗೋಡು, ಗುಹ್ಯ, ಹಾಗೂ ಸಿದ್ದಾಪುರದ ಸುತ್ತಮುತ್ತಲ ಪ್ರದೇಶಗಳ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದ ಹಾಗೂ ವಾಹನ, ಮಾನವನ ಮೇಲೆ ದಾಳಿ ನಡೆಸುತ್ತಿದ್ದ ಅಂದಾಜು ೧೯ ವರ್ಷ ಪ್ರಾಯದ ಒಂಟಿ ಸಲಗವನ್ನು ಬುಧವಾರದಂದು ಅರಣ್ಯ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಕರಡಿಗೋಡು ಗ್ರಾಮದ ಭುವನಳ್ಳಿ ಕಾಫಿ ತೋಟದಲ್ಲಿ ಸೆರೆ ಹಿಡಿದರು.
ಬುಧವಾರದಂದು ಬೆಳಗ್ಗಿನ ಜಾವದಿಂದ ಕಾರ್ಯಾಚರಣೆಕ್ಕಿಳಿದ ಕಾರ್ಯಾಚರಣೆ ತಂಡವು ೫ ಸಾಕಾನೆಗಳ ನೆರವಿನಿಂದ ಕಾಫಿ ತೋಟದ ಒಳಗೆ ಸುತ್ತಾಡುತ್ತಿರುವ ಸಂದರ್ಭದಲ್ಲಿ ೭ ಕಾಡಾನೆಗಳ ಹಿಂಡಿನೊAದಿಗಿದ್ದ ಸಲಗವು ಗೋಚರಿಸಿದೆ. ಕೂಡಲೇ ಕಾರ್ಯಪ್ರವೃತ್ತರಾದ ಕಾರ್ಯಾಚರಣೆ ತಂಡದಲ್ಲಿದ್ದ ಡಾ. ರಮೇಶ್ ಹಾಗೂ ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ೧೧.೩೦ ರ ಸಮಯಕ್ಕೆ ಅರವಳಿಕೆಯ ಚುಚ್ಚುಮದ್ದನ್ನು ಪ್ರಯೋಗಿಸಿದರು. ಚುಚ್ಚುಮದ್ದು ತಗಲಿದ ಸಲಗವು ಕರಡಿಗೋಡು ಚಿಕ್ಕನಹಳ್ಳಿ ರಾಮಪುರ ಕಾಫಿ ತೋಟಗಳಿಂದ ಸುಮಾರು ೫೦ ಮೀಟರ್ಗಳಷ್ಟು ದೂರದ ಭುವನಳ್ಳಿ ಕಾಫಿ ತೋಟದ ಒಳಗೆ ತೆರಳಿ ನೆಲಕ್ಕೆ ಉರುಳಿತು.
ಕೂಡಲೇ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿ ಕಾಡಾನೆಯ ತಲೆಗೆ ನೀರು ಸುರಿದು, ದೊಡ್ಡ ಹಗ್ಗದಿಂದ ಸಲಗದ ಕಾಲುಗಳನ್ನು ಬಿಗಿಯಾಗಿ ಕಟ್ಟಿದರು. ಇದಾದ ಬಳಿಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ದುಬಾರೆ ಸಾಕಾನೆಗಳಾದ ಪ್ರಶಾಂತ್, ಧನಂಜಯ, ಸುಗ್ರೀವ ಹಾಗೂ ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯು ಹಾಗೂ ಭೀಮ ಸೇರಿ ೫ ಸಾಕಾನೆಗಳ ನೆರವಿನಿಂದ ಸೆರೆ ಹಿಡಿದ ಪುಂಡಾನೆಯನ್ನು ಹಗ್ಗದ ಮೂಲಕ ಕಟ್ಟಿ ಎಳೆದು ತರಲಾಯಿತು. ಆದರೆ ಸೆರೆ ಹಿಡಿದ ಪುಂಡಾನೆಯು ಕಾಫಿ ತೋಟದಿಂದ ರಸ್ತೆಯ ಮೂಲಕ ಬರಲು ಹಿಂದೇಟು ಹಾಕುತ್ತಿತ್ತು. ದಾರಿ ಮಧ್ಯದಲ್ಲಿ ಪುಂಡಾಟಿಕೆಯನ್ನು ಪ್ರದರ್ಶಿಸುತ್ತಾ ಲಾರಿಯ ಬಳಿ ಬರಲು ನಿರಾಕರಿಸುತ್ತಾ ಎಳೆದಾಡುತ್ತಿದ್ದ ದೃಶ್ಯ ಕಂಡು ಬಂದಿತು. ಆದರೆ ಪ್ರಶಾಂತ್, ಸುಗ್ರೀವ, ಅಭಿಮನ್ಯು ಈ ಮೂರು ಸಾಕಾನೆಗಳು ಎಳೆಯುತ್ತಾ ಹಿಂದಿನಿAದ ದೂಡುತ್ತಾ ರಸ್ತೆಯ ಉದ್ದಗಲಕ್ಕೂ ತಡೆ ಗೋಡೆಯಂತೆ ನಿಂತು ಲಾರಿಯ ಬಳಿ ಕರೆ ತರಲು ಯಶಸ್ವಿಯಾದವು. ಸಲಗಕ್ಕೆ ಬೆಲ್ಟ್ ಅಳವಡಿಸಿ ಕ್ರೆöÊನ್ ಮೂಲಕ ಸಾಕಾನೆಗಳ ನೆರವಿನಿಂದ ಲಾರಿಗೆ ಹತ್ತಿಸಿ ದುಬಾರೆಯ ಸಾಕಾನೆ ಶಿಬಿರಕ್ಕೆ ಸಾಗಿಸಲಾಯಿತು. ಜಿಲ್ಲಾ ಮುಖ್ಯ ಸಂರಕ್ಷಣಾಧಿಕಾರಿ ಬಿ.ಎನ್ ಮೂರ್ತಿ ಮಾರ್ಗದರ್ಶನದಲ್ಲಿ ಮಡಿಕೇರಿ ವಿಭಾಗದ ಡಿ.ಸಿ.ಎಫ್ ಪೂವಯ್ಯ, ವೀರಾಜಪೇಟೆಯ ಡಿ.ಸಿ.ಎಫ್ ಚಕ್ರಪಾಣಿ ನೇತೃತ್ವದಲ್ಲಿ ವೀರಾಜಪೇಟೆ ವಲಯದ ಎ.ಸಿ.ಎಫ್ ನೆಹರೂ, ಕುಶಾಲನಗರ ವಲಯದ ಎ.ಸಿ.ಎಫ್ ಗೋಪಾಲ, ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ, ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ ಶಿವರಾಂ, ಉಪವಲಯ ಅರಣ್ಯಾಧಿಕಾರಿಗಳಾದ ದೇಯಂಡ ಸಂಜಿತ್ ಸೋಮಯ್ಯ, ಕನ್ನಂಡ ರಂಜನ್ ಸೇರಿದಂತೆ ೭೫ ಕ್ಕೂ ಅಧಿಕ ಮಂದಿ ಸಿಬ್ಬಂದಿಗಳು, ಮಾವುತರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕಾಡಾನೆಗಳು ಪ್ರತ್ಯಕ್ಷ!!!
ಒಂಟಿ ಸಲಗವನ್ನು ಸೆರೆ ಹಿಡಿದ ಕಾಫಿ ತೋಟದ ಒಳಗೆ ಸಲಗದೊಂದಿಗೆ ಸುತ್ತಾಡುತ್ತಿದ್ದ ಇತರ ೫ ಕಾಡಾನೆಗಳು ಪ್ರತ್ಯಕ್ಷಗೊಂಡಿತ್ತು. ಕಾಡಾನೆಗಳ ಹಿಂಡಿನಲ್ಲಿ ಮರಿಯಾನೆಗಳು ಕಂಡು ಬಂದಿತು. ಈ ಕಾಡಾನೆಗಳು ಸೆರೆಯಾದ ಪುಂಡಾನೆಯನ್ನು ಹುಡುಕಿಕೊಂಡು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಲಗ್ಗೆಯಿಡುತ್ತಾ ಕಾಫಿ ತೋಟದ ಸುತ್ತಲೂ ಸುತ್ತಾಡುತ್ತಿರುವು ದರೊಂದಿಗೆ ಆತಂಕ ಸೃಷ್ಠಿಸಿತ್ತು. ಈ ಕಾಡಾನೆಗಳನ್ನು ಅರಣ್ಯ ಸಿಬ್ಬಂದಿಗಳು ಕಾಡಿಗೆ ಅಟ್ಟಲು ಪ್ರಯತ್ನಿಸಿದರು.
ಈರ್ವರು ಅಧಿಕಾರಿಗಳು ಪ್ರಾಣಾಪಾಯದಿಂದ ಪಾರು
ಸಲಗವನ್ನು ಸೆರೆ ಹಿಡಿದ ಬಳಿಕ ಕಾಫಿ ತೋಟದ ಒಳಗಿನ ರಸ್ತೆಯ ಮೂಲಕ ಕಾಲ್ನಡಿಗೆಯಲ್ಲಿ ಕಾಫಿ ತೋಟದ ಮಧ್ಯಭಾಗದಲ್ಲಿ ಬರುತ್ತಿದ್ದ ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ ಶಿವರಾಂ ಹಾಗೂ ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯರವರ ಮೇಲೆ ಹಠಾತ್ತನೆ ಕಾಡಾನೆಗಳು ದಾಳಿಗೆ ಮುಂದಾಗಿದ್ದು, ಕೂದಲೆಳೆಯ ಅಂತರದಿAದ ಈರ್ವರು ಅಧಿಕಾರಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪುಂಡಾಟಿಕೆಯಿAದ ದಂತಕ್ಕೆ ಹಾನಿ!!
ಕ್ರೆöÊನ್ ಮೂಲಕ ಲಾರಿಗೆ ಹತ್ತಲು ಹಿಂದೇಟು ಹಾಕುತ್ತಿದ್ದ ಸಲಗವು ಸಾಕಾನೆಗಳೊಂದಿಗೆ ಪುಂಡಾಟಿಕೆ ಮಾಡುತ್ತಿತ್ತು. ಆದರೆ ಸಾಕಾನೆಗಳು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿ ಲಾರಿಯ ಒಳಗೆ ಸೇರಿಸಿತು. ಇದರಿಂದ ಆಕ್ರೋಶಗೊಂಡ ಸಲಗವು ಲಾರಿಯ ಒಳಗೆ ತನ್ನ ಪುಂಡಾಟಿಕೆಯನ್ನು ತೋರ್ಪಡಿಸುತ್ತಾ ಲಾರಿಯ ಎರಡು ಬದಿಯ ಕಬ್ಬಿಣದ ಸಲಗೆಗಳಿಗೆ ಗುದ್ದುತ್ತಾ ಲಾರಿಯಿಂದ ಹೊರ ಬರಲು ಪ್ರಯತ್ನಿಸುತ್ತಿತ್ತು. ಅಲ್ಲದೇ ಕೋಪದಿಂದ ಲಾರಿಯ ಒಳಗಿನ ಸರಳುಗಳಿಗೆ ದಂತದಿAದ ಗುದ್ದಿದ ಪರಿಣಾಮ ಸಲಗದ ಬಲ ಭಾಗದ ದಂತದ ತುದಿಯ ಭಾಗ ತುಂಡಾಗಿದೆ. ಲಾರಿಗೆ ಸಲಗವನ್ನು ಹತ್ತಿಸಲು ಕಾರ್ಯಾಚರಣೆ ತಂಡವು ಹರಸಾಹಸಪಟ್ಟಿತ್ತು. ಕಳೆದ ೩ ದಿನಗಳಿಂದ ಸಲಗವನ್ನು ಸೆರೆ ಹಿಡಿಯಲು ಹಗಲು ರಾತ್ರಿ ಶ್ರಮಪಟ್ಟಿರುವ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಸವಳಿಯುವಂತಾಗಿತ್ತು.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಮಡಿಕೇರಿ ವಿಭಾಗದ ಡಿ.ಸಿ.ಎಫ್ ಪೂವಯ್ಯ ಹಾಗೂ ಎ.ಸಿ.ಎಫ್ ಕೊಚ್ಚೇರ ನೆಹರೂ ಮಾತನಾಡಿ ಜಿಲ್ಲೆಯಲ್ಲಿ ಉಪಟಳ ನೀಡುತ್ತಿರುವ ೪ ಸಲಗಗಳನ್ನು ಸೆರೆ ಹಿಡಿಯಲು ಸರ್ಕಾರದಿಂದ ಆದೇಶ ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಮುಂದಿನ ೨ ದಿನಗಳಲ್ಲಿ ಚೆಟ್ಟಳ್ಳಿ ಸಮೀಪದ ಮೋದೂರು ಬಳಿ ಕಾಫಿ ತೋಟದ ಒಳಗೆ ಉಪಟಳ ನೀಡುತ್ತಿರುವ ಸಲಗವೊಂದನ್ನು ಸೆರೆ ಹಿಡಿಯಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದರು. ಇದಾದ ಬಳಿಕ ಸಿದ್ದಾಪುರ ಸಮೀಪದ ಅಮ್ಮತ್ತಿ ಭಾಗದಲ್ಲಿ ಕೂಡ ಗುರುತಿಸಿದ ಕಾಡಾನೆಗಳನ್ನು ಸೆರೆ ಹಿಡಿಯಲಾಗುವುದೆಂದರು.