ನಾಪೋಕ್ಲು, ಡಿ. ೨೮: ಪೋಷಕರು, ಶಿಕ್ಷಕರು ಮಕ್ಕಳಲ್ಲಿ ಶಿಸ್ತು, ಪ್ರಾಮಾಣಿಕತೆ, ಸ್ವಚ್ಛತೆ ಹಾಗೂ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕೆಂದು ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ. ಚೌರೀರ ಜಗತ್ ತಿಮ್ಮಯ್ಯ ಹೇಳಿದರು. ಸಮೀಪದ ಕಕ್ಕಬೆ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಮೊಬೈಲ್, ಟಿವಿಗಳ ಅತಿಯಾದ ಬಳಕೆಯಿಂದ ಇಂದಿನ ಯುವ ಜನತೆ ತಮ್ಮ ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಇದು ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಈ ಬಗ್ಗೆ ಮಾರ್ಗದರ್ಶಕರು ಹೆಚ್ಚಿನ ಗಮನಹರಿಸಬೇಕು ಎಂದರು.

ಅತಿಥಿಗಳಾಗಿ ಪಾಲ್ಗೊಂಡ ಲಯನ್ಸ್ ಕ್ಲಬ್ ವಲಯ ಅಧ್ಯಕ್ಷ ಮುಕ್ಕಾಟಿರ ಎಂ. ವಿನಯ್ ಮಾತನಾಡಿ ವಿದ್ಯಾರ್ಥಿ ಜೀವನದಿಂದಲೇ ವಿದ್ಯಾರ್ಥಿಗಳು ಆಂತರಿಕ ಶಿಸ್ತಿನೊಂದಿಗೆ ಬಾಹ್ಯ ಶಿಸ್ತನ್ನು ರೂಢಿಸಿಕೊಂಡರೆ ಸಮಾಜದಲ್ಲಿ ಉನ್ನತ ವ್ಯಕ್ತಿಯಾಗಲು ಸಾಧ್ಯ. ನಾಲ್ಕು ಗೋಡೆಗಳ ನಡುವಿನ ಒತ್ತಡದ ಶಿಕ್ಷಣದಿಂದಾಗಿ ಇಂದು ಕ್ರೀಡೆ ಮರೆತು ಹೋಗಿದೆ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲೂ ಹೆಚ್ಚಾಗಿ ಪಾಲ್ಗೊಳ್ಳಬೇಕು. ಪೋಷಕರು ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದರು.

ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ ಕ್ರೀಡಾಕೂಟ ವಿಜೇತರಾದ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ಬಹುಮಾನ ವಿತರಿಸಿ ಶುಭ ಕೋರಿದರು . ಆ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನ ಕಾರ್ಯಕ್ರಮಗಳು ಜರುಗಿ ಸಾರ್ವಜನಿಕರನ್ನು ರಂಜಿಸಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಕ್ಕಬ್ಬೆ ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಕೇಟೋಳಿರ ಪಿ. ಕುಟ್ಟಪ್ಪ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಪಯ್ಯಡಿ ಹಂಸ, ಬಾತ್ಮೀದಾರ ಕಲ್ಯಾಟಂಡ ಸುಧಾ ಗಣಪತಿ, ನಿರ್ದೇಶಕರಾದ ಪರದಂಡ ಸದಾ ನಾಣಯ್ಯ, ಚೋಯಮಾಡಂಡ ನಾಣಯ್ಯ, ಬೊಳಿಯಾಡಿರ ಸಂತು ಸುಬ್ರಮಣಿ, ಮುಕ್ಕಾಟಿರ ರಮೇಶ್, ಪಾಂಡAಡ ಕಿಶನ್ ಪೂಣಚ್ಚ, ಅಂಜಪರವAಡ ಎ. ಕುಶಾಲಪ್ಪ , ನೈಲ್ ಚಂಗಪ್ಪ, ಪರದಂಡ ಪ್ರಮೀಳ ಪೆಮ್ಮಯ್ಯ, ಗೌರವ ಕಾರ್ಯದರ್ಶಿ ಅನಿಲ್ ರಾಜ್, ನಾಮನಿರ್ದೇಶಕರಾದ ಕೆ.ಬಿ. ಲೀಲಾವತಿ, ಉಪಸ್ಥಿತರಿದ್ದರು.

ಅಂಜಪರವAಡ ಎ.ಕುಶಾಲಪ್ಪ ಸ್ವಾಗತಿಸಿದರು. ಶಿಕ್ಷಕ ಕುಟ್ಟಜೆಟ್ಟಿರ ಶರತ್ ಅತಿಥಿ ಪರಿಚಯವನ್ನು ಮಾಡಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಅನಿಲ್ ರಾಜ್ ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಚಂಡಿರ ಲೀಲಾವತಿ ವರದಿ ವಾಚಿಸಿದರು. ಶಿಕ್ಷಕಿ ಅರೆಯಡ ಬಬಿತ ನಿರೂಪಿಸಿ ಬೊಳಿಯಾಡಿರ ಸಂತು ಸುಬ್ರಮಣಿ ವಂದಿಸಿದರು.

ಬೆಳಿಗ್ಗೆ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದ ಧ್ವಜಾರೋಹಣವನ್ನು ಕಕ್ಕಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ ನೆರವೇರಿಸಿದರು. ಅನಂತರ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ವಿವಿಧ ಅಂತರ ಗ್ರಾಮ ಕ್ರೀಡಾಕೂಟಗಳು ಜರುಗಿದವು. ಸಭಾ ಕಾರ್ಯಕ್ರಮದ ಮೊದಲು ಅತಿಥಿಗಳಿಗೆ ಗೌರವರಕ್ಷೆ ಹಾಗೂ ಸಾಮೂಹಿಕ ಅಂಗ ಸಾಧನೆ, ಯೋಗ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರನ್ನು ರಂಜಿಸಿತು.