ವೀರಾಜಪೇಟೆ, ಡಿ . ೨೯ : ಆಕ್ಸ್ಫರ್ಡ್ ಕ್ಲಬ್ ವತಿಯಿಂದ ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ರಾಜ್ಯಮಟ್ಟದ ಸೂಪರ್ ನೈನ್ ಕಾಲ್ಚೆಂಡು ಪಂದ್ಯಾಟಕ್ಕೆ ವೀರಾಜಪೇಟೆಯ ಹಿರಿಯ ಕ್ರೀಡಾಪಟು ನೆಲ್ಲಮಕ್ಕಡ ಮೋಹನ್ ಚಾಲನೆ ನೀಡಿದರು. ಕಾಲ್ಚೆಂಡು ಪಂದ್ಯಾಟದಲ್ಲಿ ಸ್ಥಳೀಯ ತಂಡಗಳು ಸೇರಿದಂತೆ ಜಿಲ್ಲೆಯ ಹಾಗೂ ಹೊರ ರಾಜ್ಯಗಳ ಒಟ್ಟು ಇಪ್ಪತ್ತಕ್ಕೂ ಹೆಚ್ಚು ತಂಡಗಳು ಭಾಗವಹಿಸಲಿವೆ. ಅಂತಿಮ ಪಂದ್ಯಾಟದಲ್ಲಿ ಜಯಗಳಿಸಿದ ತಂಡಕ್ಕೆ ಒಂದು ಲಕ್ಷ ನಗದು, ಆಕರ್ಷಕ ಟ್ರೋಫಿ ನೀಡಲಾಗುತ್ತದೆ ಎಂದು ಕ್ಲಬ್‌ನ ಅಧ್ಯಕ್ಷ ರೈಸನ್ ಚಾಕೊ ತಿಳಿಸಿದರು.
ಈ ಸಂದರ್ಭ ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕ ಜೀಜೊ ಪಿ.ಜೆ. ಸೇರಿದಂತೆ ಕ್ಲಬ್‌ನ ಉಪಾಧ್ಯಕ್ಷ ಕಾರ್ತಿಕ್ ರಾಜ್, ಕಾರ್ಯದರ್ಶಿ ಸಾಧು, ಖಜಾಂಚಿ ಸುನಿಲ್ ರಾಜು ಸೇರಿದಂತೆ ಕ್ಲಬ್‌ನ ಸದಸ್ಯರು ಹಾಜರಿದ್ದರು.