ಸೋಮವಾರಪೇಟೆ, ಡಿ. ೨೮: ಕೊಡಗು ಸೇರಿದಂತೆ ಕಾಫಿ ಬೆಳೆಯುವ ಮಲೆನಾಡು ಜಿಲ್ಲೆಗಳ ಕಾಫಿ ಬೆಳೆಗಾರರ ಬಹು ವರ್ಷಗಳ ಬೇಡಿಕೆಯಾಗಿರುವ ೧೦ ಹೆಚ್‌ಪಿವರೆಗಿನ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ವಿಚಾರ ಬೆಳಗಾವಿ ಅಧಿವೇಶನದಲ್ಲಿ ಚರ್ಚೆಗೆ ಬಂದಿದ್ದು, ಇಂಧನ ಸಚಿವರು ಸದನದಲ್ಲಿ ನೀಡಿದ ಹೇಳಿಕೆ ಹಾಗೂ ಲಿಖಿತವಾಗಿ ನೀಡಿರುವ ಹೇಳಿಕೆಗಳು ಬೆಳೆಗಾರರನ್ನು ಮತ್ತೆ ಗೊಂದಲಕ್ಕೆ ಕೊಂಡೊಯ್ದಿದೆ.
ಸದನದಲ್ಲಿ ಉಚಿತ ವಿದ್ಯುತ್ ವಿಷಯವನ್ನು ಪ್ರಸ್ತಾಪಿಸಿದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು, ‘ಕೊಡಗು ಸೇರಿದಂತೆ ವಿವಿಧ ಜಿಲ್ಲೆಯ ಕಾಫಿ ಬೆಳೆಗಾರರ ೧೦ ಹೆಚ್.ಪಿ. ಮೋಟಾರ್‌ಗಳಿಗೆ ಉಚಿತ ವಿದ್ಯುತ್ ನೀಡಬೇಕೆಂಬ ಮನವಿಯನ್ನು ಈ ಹಿಂದೆಯೂ ಮಾಡಲಾಗಿತ್ತು.’
‘ಮಾಜೀ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಜೆಟ್‌ನಲ್ಲಿ ಹಣ ಮೀಸಲಿಟ್ಟು ವಿದ್ಯುತ್ ಬಾಕಿ ಶುಲ್ಕ ಮನ್ನಾ ಮಾಡುವ ಬಗ್ಗೆ ಆಶ್ವಾಸನೆ ಕೊಟ್ಟಿದ್ದರು. ಇದರಿಂದಾಗಿ ಕೊಡಗಿನ ರೈತರು ಯಾವುದೇ ಬಿಲ್‌ನ್ನು ಕಟ್ಟದೇ ಹಾಗೆಯೇ ಉಳಿಸಿಕೊಂಡಿದ್ದರು. ಕೇವಲ ೪೫ ಕೋಟಿ ಮಾತ್ರ ಬಾಕಿ ಇದೆ. ಇದಕ್ಕೆ ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆಯಬೇಕೆಂದು ಸಚಿವರು ತಿಳಿಸಿದ್ದಾರೆ. ಆದರೆ ಹಾಸನ, ದಕ್ಷಿಣ ಕನ್ನಡ, ಕಾರವಾರ ಸೇರಿದಂತೆ ಇತರ ಜಿಲ್ಲೆಗಳಲ್ಲಿ ರೈತರ ಅಡಿಕೆ ಸೇರಿದಂತೆ ಇತರ ಬೆಳೆಗಳಿಗೆ ೧೦ ಹೆಚ್‌ಪಿವರೆಗೆ ಉಚಿತ ವಿದ್ಯುತ್ ಕೊಡುವ ವ್ಯವಸ್ಥೆ ಮಾಡಿದ್ದಾರೆ.’
(ಮೊದಲ ಪುಟದಿಂದ) ‘ಇಲ್ಲಿ ಕಾಫಿ ಬೆಳೆಗಾರರಿಗೆ ಯಾಕೆ ಈ ರೀತಿ ತೊಂದರೆಯಾಗುತ್ತಿದೆ? ಕಾಫಿ ಬೆಳೆಗಾರರಿಗೂ ಕೂಡ ವಿದ್ಯುತ್ ಬಿಲ್ ಬಾಕಿಯನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸುತ್ತೇನೆ’ ಎಂದು ರಂಜನ್ ಸದನದಲ್ಲಿ ಹೇಳಿದರು.
ಇದಕ್ಕೆ ಉತ್ತರಿಸಿದ ಇಂಧನ ಸಚಿವ ಸುನಿಲ್‌ಕುಮಾರ್, ‘ಅಪ್ಪಚ್ಚು ರಂಜನ್ ಸೇರಿದಂತೆ ಆ ಭಾಗದ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಕುಮಾರಸ್ವಾಮಿ, ಪ್ರಾಣೇಶ್ ಸೇರಿದಂತೆ ಇತರರು ಕೂಡ ಕಾಫಿ ಬೆಳೆಗಾರರಿಗೆ ಸಂಬAಧಿಸಿದAತೆ ಉಚಿತ ವಿದ್ಯುತ್ ನೀಡುವ ಬಗ್ಗೆ ಕಳೆದ ಕೆಲವು ತಿಂಗಳುಗಳಿAದ ನಿರಂತರವಾಗಿ ಮನವಿ ಮಾಡುತ್ತಿದ್ದಾರೆ.’
‘ಕಾಫಿ ಬೆಳೆಗಾರರ ಸಂಘದವರೂ ಕೂಡ ಹತ್ತು ಹಲವು ಬಾರಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ೧೦ ಹೆಚ್‌ಪಿ ತನಕದ ಎಲ್ಲಾ ಸಣ್ಣ ಮತ್ತು ಅತೀ ಸಣ್ಣ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡಬೇಕೆಂಬ ತೀರ್ಮಾನವನ್ನು ಪ್ರಕಟ ಮಾಡಿದ್ದರು. ಅದರಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರು ಎಂದು ಪ್ರಸ್ತಾಪವಾಗಿತ್ತು. ಈ ಬಗ್ಗೆ ಅಪ್ಪಚ್ಚು ರಂಜನ್ ಅವರು ವಿನಾಯಿತಿ ಕೋರಿ ಎಲ್ಲಾ ಕಾಫಿ ಬೆಳೆಗಾರರಿಗೆ ೧೦ ಹೆಚ್.ಪಿ.ವರೆಗೆ ಉಚಿತ ವಿದ್ಯುತ್ ನೀಡಬೇಕೆಂಬ ಮನವಿಯನ್ನು ಕೊಟ್ಟಿದ್ದಾರೆ. ಇದನ್ನು ಮೊನ್ನೆ ಅನುಮೋದಿಸಿ ಆರ್ಥಿಕ ಇಲಾಖೆಗೆ ಕಳುಹಿಸಿದ್ದೇವೆ. ಅಲ್ಲಿಂದ ಅನುಮತಿ ತೆಗೆದುಕೊಳ್ಳುತ್ತೇವೆ.’
‘ಎರಡನೆಯದಾಗಿ ಹಳೆಯ ಬಿಲ್ ಬಾಕಿಗಳನ್ನು ಮನ್ನಾ ಮಾಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ೪೫ ಕೋಟಿಯಷ್ಟು ಹಣ ಬಾಕಿಯಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊAದಿಗೆ ಮಾತನಾಡಿದ್ದೇನೆ. ಚೆಸ್ಕಾಂ ಕಂಪೆನಿಯಾಗಿರುವ ಹಿನ್ನೆಲೆ ಆರ್ಥಿಕ ಇಲಾಖೆಯ ಸಹಮತಿ ಬೇಕು.’ ‘ನಾನು ಮುಖ್ಯಮಂತ್ರಿ ಬಳಿ ಮಾತನಾಡಿ ವಿದ್ಯುತ್ ಬಾಕಿ ಶುಲ್ಕ ಮನ್ನಾ ಮಾಡಲು ಬೇಕಾಗಿರುವ ಕ್ರಮಗಳನ್ನು ಕೈಗೊಳ್ಳುತ್ತೇನೆ. ಒಟ್ಟಾರೆ ಕೊಡಗು, ಚಿಕ್ಕಮಗಳೂರು, ಹಾಸನ ಈ ಮೂರು ಜಿಲ್ಲೆಗಳ ಕಾಫಿ ಬೆಳೆಗಾರರೊಂದಿಗೆ ನಮ್ಮ ಸರ್ಕಾರ ಸಂಪೂರ್ಣವಾಗಿ ನಿಲ್ಲುತ್ತದೆ. ೧೦ ಹೆಚ್.ಪಿ. ವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್ ನೀಡಲು ನಮ್ಮ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತದೆ. ಹಳೆಯ ಬಾಕಿಯ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದಾರೆ.
ಸಚಿವರ ಈ ಮಾತುಗಳು ಕಾಫಿ ಬೆಳೆಗಾರರಿಗೆ ಹಿತಕರವಾಗಿದ್ದರೂ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಸಚಿವರು ಲಿಖಿತವಾಗಿ ನೀಡಿರುವ ಉತ್ತರ ಮತ್ತೆ ಗೊಂದಲಕ್ಕೆ ಎಡೆ ಮಾಡಿದೆ.
ಶಾಸಕರು ಪ್ರಸ್ತಾಪಿಸಿದ ವಿಷಯ: ‘ಕಾಫಿ ಬೆಳೆಗಾರರ ಹೆಚ್.ಪಿ. ಒಳಗಿನ ಮೋಟಾರ್‌ಗಳಿಗೆ ಉಚಿತ ವಿದ್ಯುತ್ ನೀಡಬೇಕೆನ್ನುವುದು ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕಾಫಿ ಕೃಷಿಕರ ಬಹುದಿನಗಳ ಬೇಡಿಕೆ ಯಾಗಿದ್ದು, ಈ ಬಗ್ಗೆ ಹಲವಾರು ಬಾರಿ ಸರ್ಕಾರದ ಗಮನಕ್ಕೆ ತಂದಿದ್ದರೂ, ಈವರೆಗೆ ಸರ್ಕಾರದಿಂದ ಯಾವುದೇ ಆದೇಶವಾಗಿಲ್ಲ. ಇದರಿಂದ ಕಾಫಿ ಕೃಷಿಕರಿಗೆ ತೀವ್ರ ತೊಂದರೆಯಾಗಿದ್ದು, ಸರ್ಕಾರ ತಕ್ಷಣ ಕಾಫಿ ಬೆಳೆಗಾರರ ೧೦ ಹೆಚ್.ಪಿ ಒಳಗಿನ ಮೋಟರ್‌ಗಳಿಗೆ ಉಚಿತ ವಿದ್ಯುತ್ ನೀಡಲು ಮತ್ತು ವಿದ್ಯುತ್ ಬಿಲ್ ಬಾಕಿ ಹಣ ಮನ್ನಾ ಮಾಡಿ ಆದೇಶ ಹೊರಡಿಸುವ ಕುರಿತು ಇಂಧನ ಸಚಿವರ ಗಮನ ಸೆಳೆಯ ಬಯಸುತ್ತೇನೆ’
ಇದಕ್ಕೆ ಸಚಿವರು ನೀಡಿರುವ ಲಿಖಿತ ಉತ್ತರ: ‘ಇತ್ತೀಚಿನ ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿನ ಮಹಾ ಮಳೆಗೆ ರೈತರು ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದಾರೆಂದು ರಾಜ್ಯದ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಶಾಸಕರು, ಸದಸ್ಯರುಗಳು ಹಾಗು ಕೊಡಗು ಜಿಲ್ಲಾ ರೈತ ಮುಖಂಡರುಗಳು, ವಿವಿಧ ರೈತ ಸಂಘ ಸಂಸ್ಥೆಗಳು ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ಸೌಲಭ್ಯವನ್ನು ಒದಗಿಸಿದಲ್ಲಿ ಕಾಫಿ ಬೆಳೆಗಾರರಿಗೆ ಆರ್ಥಿಕವಾಗಿ ನೆರವಾಗುವುದೆಂದು ಹಾಗು ಅವರ ಸಾಮಾಜಿಕ ಮತ್ತು ಆರ್ಥಿಕ ಬೆಳೆವಣಿಗೆಗೆ ಪೂರಕವಾಗುವುದೆಂದು ಮುಖ್ಯಮಂತ್ರಿಯವರಿಗೆ ಹಾಗೂ ಇಂಧನ ಸಚಿವರಿಗೆ ಮನವಿ ಸಲ್ಲಿಸುತ್ತಾ ಬಂದಿರುತ್ತಾರೆ’
‘ಅದರAತೆ, ರಾಜ್ಯ ಸರ್ಕಾರವು ರಾಜ್ಯದಲ್ಲಿನ ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರ ೧೦ ಹೆಚ್.ಪಿ. ವರೆಗಿನ ನೀರಾವರಿ ವಿದ್ಯುತ್ ಪಂಪ್‌ಸೆಟ್ ಸ್ಥಾವರಗಳ ವಿದ್ಯುತ್ ಶುಲ್ಕವನ್ನು ಹಲವು ಷÀರತ್ತು/ನಿಬಂಧನೆಗಳಿಗೊಳಪಟ್ಟು ಫಲಾನುಭವಿಗಳಿಗೆ ಆಃಖಿ (ಆiಡಿeಛಿಣ ಃeಟಿeಜಿiಣ ಖಿಡಿಚಿಟಿsಜಿeಡಿ) ವ್ಯವಸ್ಥೆಯಡಿ ಮರುಪಾವತಿಸಲು ಆರ್ಥಿಕ ಇಲಾಖೆಯ ಸಹಮತಿಯನ್ನು ಸರ್ಕಾರಿ ಆದೇಶ ಸಂಖ್ಯೆ ಎನರ್ಜಿ /೫೨)/ಪಿಎಸ್‌ಆರ್/೨೦೨೧ ದಿನಾಂಕ ೨೦.೦೭.೨೦೨೨ನ್ನು ಹೊರಡಿಸ ಲಾಗಿರುತ್ತದೆ’
‘ದಿನಾಂಕ: ೩೦.೦೬.೨೦೨೨ರ ಅಂತ್ಯಕ್ಕೆ ರಾಜ್ಯದಲ್ಲಿನ ೧೦ ಹೆಚ್.ಪಿ ಒಳಗಿನ ಕಾಫಿ ಬೆಳೆಗಾರರ ವಿದ್ಯುತ್ ಶುಲ್ಕ ಬಾಕಿ ಮೊತ್ತ ರೂ. ೪೫.೬೫ ಕೋಟಿಗಳಷ್ಟು ಇರುತ್ತದೆ. ಸದರಿ ಬಾಕಿ ಮೊತ್ತವನ್ನು ಮನ್ನಾ ಮಾಡಲು ಆರ್ಥಿಕ ಇಲಾಖೆಯ ಸಹಮತಿಯನ್ನು ಕೋರಲಾಗುವುದು’ ಎಂದು ಸಚಿವರು ತಿಳಿಸಿದ್ದಾರೆ.
ಆದರೆ ಕೊಡಗು ಸೇರಿದಂತೆ ಇತರ ಜಿಲ್ಲೆಗಳ ಕಾಫಿ ಬೆಳೆಗಾರರು ಯಾವುದೇ ಷರತ್ತುಗಳನ್ನು ವಿಧಿಸದೇ ಈ ಹಿಂದಿನ ವಿದ್ಯುತ್ ಬಾಕಿಯನ್ನು ಮನ್ನಾ ಮಾಡಬೇಕು. ಇತರ ಬೆಳೆಗಳಂತೆ ಎಲ್ಲಾ ಕಾಫಿ ಬೆಳೆಗಾರರ ೧೦ ಹೆಚ್‌ಪಿ ವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಬೇಕೆಂದು ಒತ್ತಾಯಿಸಿ ಈ ಹಿಂದಿನಿAದಲೂ ಪ್ರತಿಭಟನೆ ನಡೆಸುತ್ತಿದ್ದರೂ ಸಂಪೂರ್ಣವಾಗಿ ಈ ಬೇಡಿಕೆಯನ್ನು ಈಡೇರಿಸುವಲ್ಲಿ ಸರ್ಕಾರ ಕ್ರಮ ಕೈಗೊಂಡಿಲ್ಲ.
ಕಳೆದ ಬಾರಿ ಬೆಳಗಾವಿಯಲ್ಲಿ ನಡೆದ ಅಧಿವೇಶನ ಸಂದರ್ಭ ಸೋಮವಾರಪೇಟೆಯಲ್ಲಿ ೧೫ ದಿನಗಳ ಕಾಲ ನಿರಂತರ ಹೋರಾಟ ನಡೆದಿತ್ತು. ಈಗಿನ ಬೆಳಗಾವಿ ಅಧಿವೇಶನದಲ್ಲಾದರೂ ತಮ್ಮ ಬೇಡಿಕೆ ಈಡೇರಬಹುದು ಎಂದು ಚಾತಕಪಕ್ಷಿಯಂತೆ ಕಾಯುತ್ತಿದ್ದವರಿಗೆ ಮತ್ತೆ ನಿರಾಸೆಯಾಗಿದೆ.
ಈ ಹಿಂದೆ ನೀಡಿದ ಆದೇಶದನ್ವಯ ಕಾಫಿ ಬೆಳೆಗಾರರು ತಮ್ಮ ವಿದ್ಯುತ್ ಬಿಲ್‌ಗಳನ್ನು ನಿಗದಿತ ಸಮಯದಲ್ಲಿ ಪಾವತಿಸಬೇಕು. ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರಾಗಿರುವ ಬಗ್ಗೆ ದೃಡೀಕರಣ ಪ್ರತಿ ನೀಡಬೇಕು. ಕರ್ನಾಟಕ ವಿದ್ಯುತ್‌ಚ್ಚಕ್ತಿ ನಿಯಂತ್ರಣ ಆಯೋಗ ನಿಗದಿಪಡಿಸಿರುವ ವಿದ್ಯುತ್ ದರ ಸೂಚಿಯಂತೆ ಮಾಸಿಕ ಬಿಲ್ ಸಿದ್ದಪಡಿಸಿ ನೀಡಲಾಗುವುದು.
ಈ ಸೌಲಭ್ಯಕ್ಕೆ ಅರ್ಹರಾಗುವ ಬಳಕೆದಾರರು/ಗ್ರಾಹಕರು ಮಾಸಿಕ ವಿದ್ಯುತ್ ಬಿಲ್‌ನ್ನು ಸಂಪೂರ್ಣ ವಾಗಿ ನಿಗದಿತ ಸಮಯದಲ್ಲಿ ಪಾವತಿಸಿದ ನಂತರ ಗ್ರಾಹಕರಿಗೆ/ಬಳಕೆದಾರರಿಗೆ ಡಿಬಿಟಿ ಯೋಜನೆಯ ವ್ಯವಸ್ಥೆಯಡಿ ಸರ್ಕಾರದಿಂದ ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಒದಗಿಸುವ ಸಹಾಯಧನವನ್ನು ಮಾಸಿಕ ವಿದ್ಯುತ್ ಬಳಕೆ ಶುಲ್ಕದ ಮೇಲೆ ವಿಧಿಸುವ ವಿದ್ಯುತ್ ತೆರಿಗೆಯನ್ನು ಹೊರತುಪಡಿಸಿ, ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಮರು ಪಾವತಿ ಸಲಾಗುವುದು ಎಂಬುದಾಗಿದೆ.
ಇದರೊಂದಿಗೆ ಬೆಳೆಗಾರರ ೦೧.೦೭.೨೦೨೨ರ ನಂತರ ಬಳಕೆಯಾಗುವ ವಿದ್ಯುತ್‌ಗಳಿಗೆ ಅನ್ವಯವಾಗುವಂತೆ ಗ್ರಾಹಕರಿಗೆ ಮರು ಪಾವತಿ ಮಾಡಲಾಗುವುದು ಎಂಬ ಷರತ್ತುಗಳನ್ನು ವಿಧಿಸಲಾಗಿದೆ. ಈ ಹಿಂದಿನ ಬಾಕಿಯನ್ನು ಮನ್ನಾ ಮಾಡುವ ಯಾವುದೇ ಪ್ರಸ್ತಾಪ ಇಲ್ಲ. ಇದರೊಂದಿಗೆ ಇನ್ನಿತರ ದಾಖಲೆಗಳನ್ನು ಒದಗಿಸುವುದೂ ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿ ವಿದ್ಯುತ್ ಶುಲ್ಕದಲ್ಲಿ ವಿನಾಯಿತಿ ನೀಡುವ ಪ್ರಸ್ತಾಪ ಒಳಗೊಂಡಿದೆ. ಆದರೆ ಸಂಪೂರ್ಣ ಉಚಿತವಾಗಿ ನೀಡುವ ಯಾವುದೇ ಸ್ಪಷ್ಟ ಆದೇಶ ಇಲ್ಲ.
ಇದು ಕೊಡಗಿನ ಕಾಫಿ ಬೆಳೆಗಾರರ ನಿಜವಾದ ಬೇಡಿಕೆಯನ್ನು ಮರೆಮಾಚುವಂತಿದೆ. ಯಾವುದೇ ಷರತ್ತುಗಳನ್ನು ವಿಧಿಸದೇ ಕಾಫಿ ಬೆಳೆಗಾರರ ೧೦ ಹೆಚ್‌ಪಿವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಬೇಕು. ಹಿಂದಿನ ಬಾಕಿಯನ್ನು ಮನ್ನಾ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ತಾಲೂಕು ರೈತ ಸಂಘದ ಪ್ರಮುಖರಾದ ಗರಗಂದೂರು ಲಕ್ಷö್ಮಣ್ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.