ಮಡಿಕೇರಿ, ಡಿ. ೨೯: ಕೊಡಗು ಜಿಲ್ಲೆಯಲ್ಲಿರುವ ಪಶುಚಿಕಿತ್ಸಾ ಕೇಂದ್ರಗಳೆಷ್ಟು, ಇದರಲ್ಲಿ ಮಂಜೂ ರಾಗಿರುವ, ಭರ್ತಿಯಾಗಿರುವ ಹುದ್ದೆಗಳೆಷ್ಟು, ಖಾಲಿ ಇರುವ ಹುದ್ದೆಗಳನ್ನು ಯಾವಾಗ ಭರ್ತಿ ಮಾಡಲಾಗುತ್ತದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಪಶು ಸಂಗೋಪನ ಸಚಿವ ಪ್ರಭು ವಿ. ಚವ್ಹಾಣ್ ಅವರಿಂದ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಮಾಹಿತಿ ಪಡೆದಿದ್ದಾರೆ.
ಇದಕ್ಕೆ ಉತ್ತರಿಸಿದ ಪಶುಸಂಗೋಪನಾ ಸಚಿವರು ಕೊಡಗು ಜಿಲ್ಲೆಯಲ್ಲಿ ಒಟ್ಟು ೭೪ ಪಶುಚಿಕಿತ್ಸಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಕೇಂದ್ರಗಳಿಗೆ ಒಟ್ಟು ೩೦೬ ಹುದ್ದೆಗಳು ಮಂಜೂರಾಗಿದ್ದು, ಇವುಗಳಲ್ಲಿ ೭೭ ಹುದ್ದೆಗಳು ಭರ್ತಿಯಾಗಿವೆ. ೨೨೯ ಹುದ್ದೆಗಳು ಖಾಲಿ ಇದೆ.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿನ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಗಳ ಅಧಿಕಾರಿಗಳನ್ನು ಜಾನುವಾರುಗಳ ಚಿಕಿತ್ಸೆಗೆ ತೊಂದರೆಯಾಗದAತೆ ಅಧಿಕ ಪ್ರಬಾರ ವ್ಯವಸ್ಥೆ ಮಾಡಲಾಗಿದೆ.
ಪ್ರಸ್ತುತ ೪೦೦ ಪಶು ವೈದ್ಯಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡುವ ಸಂಬAಧ ಅರ್ಹತಾ ಪಟ್ಟಿ ತಯಾರಿಸಲಾಗುತ್ತಿದೆ. ಈ ನೇಮಕಾತಿ ಕುರಿತು ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಅಂತಿಮ ತೀರ್ಪು ಬಂದ ನಂತರ ಮಾನ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಕ್ರಮವಹಿಸಲಾಗುವುದು. ೨೫೦ ಕಿರಿಯ ಪಶು ವೈದ್ಯಕೀಯ ಪರೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕೆ.ಇ.ಎ. ಮುಖಾಂತರ ಅಧಿಸೂಚನೆ ಹೊರಡಿಸಿ ಆಯ್ಕೆ ಪ್ರಕ್ರಿಯೆ ಚಾಲನೆಯಲ್ಲಿದೆ. ‘ಡಿ’ ದರ್ಜೆ ಹುದ್ದೆಗಳನ್ನು ಅನುಕಂಪದ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದ್ದು, ಹೊರ ಗುತ್ತಿಗೆ ಆಧಾರದ ಮೇಲೆ ೨೨೫೬ ‘ಡಿ’ ದರ್ಜೆ ಹುದ್ದೆಗಳಿಗೆ ಸೇವೆಯನ್ನು ಪಡೆಯಲಾಗಿದೆ.
ಕೊಡಗು ಜಿಲ್ಲೆಯಲ್ಲಿರುವ ಕೆಲವು ಪಶು ಚಿಕಿತ್ಸಾ ಕೇಂದ್ರಗಳು ಶಿಥಿಲಾವಸ್ಥೆಯಲ್ಲಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ, ಪಶು ಚಿಕಿತ್ಸಾ ಕೇಂದ್ರದ ದುರಸ್ತಿಗೆ ಕಳೆದ ಮೂರು ವರ್ಷಗಳಲ್ಲಿ ಎಷ್ಟು ಅನುದಾನ ಬಿಡುಗಡೆಗೊಳಿಸಲಾಗಿದೆ, ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಪಶು ಸಂಗೋಪನ ಸಚಿವ ಪ್ರಭು ಬಿ. ಚವ್ಹಾಣ್ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಪಶುಸಂಗೋಪನಾ ಸಚಿವರು, ೨೦೧೯-೨೦ನೇ ಸಾಲಿನಲ್ಲಿ ೧೯ ಸಂಸ್ಥೆಗಳ ಕಟ್ಟಡಗಳನ್ನು ರೂ. ೫೦ ಲಕ್ಷಗಳಲ್ಲಿ ದುರಸ್ತಿಗೊಳಿಸಲಾಗಿದೆ. ೨೦೨೦-೨೧ ನೇ ಸಾಲಿನಲ್ಲಿ ೨೯ ಸಂಸ್ಥೆಗಳ ಕಟ್ಟಡಗಳನ್ನು ರೂ. ೫೦ ಲಕ್ಷಗಳಲ್ಲಿ ದುರಸ್ತಿಗೊಳಿಸಲಾಗಿದೆ. ೨೦೨೧-೨೨ನೇ ಸಾಲಿನಲ್ಲಿ ೧೦ ಸಂಸ್ಥೆಗಳ ಕಟ್ಟಡಗಳನ್ನು ರೂ. ೫೦ ಲಕ್ಷಗಳಲ್ಲಿ ದುರಸ್ತಿಗೊಳಿಸಲಾಗಿದೆ ಎಂದು ಉತ್ತರಿಸಿದರು.