(ಹೆಚ್.ಕೆ.ಜಗದೀಶ್)

ಗೋಣಿಕೊಪ್ಪಲು, ಡಿ. ೨೮ : ಕೊರೆಯುವ ಚಳಿಯ ನಡುವೆ ಪ್ಲಾಸ್ಟಿಕ್ ಹೊದಿಕೆಯನ್ನೇ ಸೂರಾಗಿಸಿಕೊಂಡು ಕಳೆದ ಆರು ದಿನಗಳಿಂದ ಅನಧಿಕೃತವಾಗಿ ಸರ್ಕಾರಿ ಜಾಗದಲ್ಲಿ ವಾಸವಾಗಿದ್ದ ೪೦ಕ್ಕೂ ಅಧಿಕ ಕುಟುಂಬಗಳನ್ನು ತೆರವುಗೊಳಿಸುವಲ್ಲಿ ಕೊಡಗು ಜಿಲ್ಲಾಡಳಿತ ಯಶಸ್ವಿಯಾಗಿದೆ; ಮುಂಜಾನೆ ವೇಳೆ ತೆರವು ಕಾರ್ಯಾಚರಣೆಗೆ ಮುಂದಾದ ಕೊಡಗು ಜಿಲ್ಲಾ ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್ ಹಾಗೂ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್ ನೇತೃತ್ವದಲ್ಲಿ ಕೆ.ಬಾಡಗ ಪಂಚಾಯಿತಿ ವ್ಯಾಪ್ತಿಯ ಈಚುಮಾಡು ಪ್ರದೇಶಕ್ಕೆ ಪೊಲೀಸ್ ಪಡೆಯೊಂದಿಗೆ ತೆರಳಿದ ಅಧಿಕಾರಿ ವೃಂದ ಅಕ್ರಮವಾಗಿ ಕಟ್ಟಲಾಗಿದ್ದ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲುಗಳನ್ನು ತೆರವುಗೊಳಿಸಿದರು.

ಈಚುಮಾಡು ಪ್ರದೇಶದಲ್ಲಿರುವ ೧೮ ಎಕರೆಗೂ ಹೆಚ್ಚಿನ ಸರ್ಕಾರಿ ಜಾಗದಲ್ಲಿ ಖಾಲಿ ಇದ್ದ ಅರ್ಧ ಎಕರೆ ಸ್ಥಳದಲ್ಲಿ ಕಳೆದ ೬ ದಿನಗಳ ಹಿಂದೆ ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡ ಕೃಷ್ಣಪ್ಪ ಬೆಳ್ಳೂರು ಮುಂದಾಳತ್ವದಲ್ಲಿ ತಾಲೂಕಿನ ವಿವಿಧ ಭಾಗದಲ್ಲಿ ವಾಸವಿದ್ದ ನಿವೇಶನ ರಹಿತರಾದ ಆದಿವಾಸಿ ಜನಾಂಗಗಳಾದ ಯರವ, ಜೇನುಕುರುಬ ಸೇರಿದಂತೆ ಇತರ ಜಾತಿಯ ಜನರು ನಿವೇಶನಕ್ಕಾಗಿ ಈ ಜಾಗದಲ್ಲಿ ಅನಧಿಕೃತವಾಗಿ ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದರು. ಸುದ್ದಿ ತಿಳಿದ ಪೊನ್ನಂಪೇಟೆ ತಹಶೀಲ್ದಾರ್ ಪ್ರಶಾಂತ್ ಹಾಗೂ ಗಿರಿಜನ ಕಲ್ಯಾಣಾಧಿಕಾರಿ ಗುರುಶಾಂತಪ್ಪ, ಕಂದಾಯ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಅನಧಿಕೃತವಾಗಿ ವಾಸಿಸುತ್ತಿರುವುದು ಕಾನೂನು ಬಾಹಿರವಾಗಿದೆ. ಗುಡಿಸಲನ್ನು ತೆರವುಗೊಳಿಸಿ ತಮ್ಮ ಸ್ಥಳಕ್ಕೆ ವಾಪಸು ತೆರಳುವಂತೆ ಗುಡಿಸಲು ವಾಸಿಗಳಿಗೆ ಮನವಿ ಮಾಡಿದ್ದರು. ಈ ವೇಳೆ ಅಲ್ಲಿದ್ದ ಜನರು ಯಾವುದೇ ಕಾರಣಕ್ಕೂ ಇಲ್ಲಿಂದ ತೆರಳುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಘಟನೆಯ ಮಾಹಿತಿಯನ್ನು ತಹಶೀಲ್ದಾರರು ಕೊಡಗು ಜಿಲ್ಲಾಡಳಿತಕ್ಕೆ ನೀಡಿದ್ದರು.

ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಕೊಡಗು ಜಿಲ್ಲಾಡಳಿತ ಉಪವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ತಹಶೀಲ್ದಾರ್ ಪ್ರಶಾಂತ್ ಮುಂದಾಳತ್ವದಲ್ಲಿ ಅತಿಕ್ರಮಣ ಗೊಂಡಿರುವ ಜಾಗವನ್ನು ಕಾನೂನು ಪ್ರಕಾರ ತೆರವುಗೊಳಿಸುವಂತೆ ನಿರ್ದೇಶನ ನೀಡಿದ್ದರು. ಜಿಲ್ಲಾಡಳಿತದ ಸೂಚನೆ ಮೇರೆ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಮುಂಜಾನೆ ೬.೩೦ರ ಸುಮಾರಿಗೆ ಈಚುಮಾಡು

(ಮೊದಲ ಪುಟದಿಂದ) ಪ್ರದೇಶಕ್ಕೆ ತೆರಳಿ ಪೊಲೀಸರ ಸಮ್ಮುಖದಲ್ಲಿ ಗುಡಿಸಲುಗಳನ್ನು ತೆರವುಗೊಳಿಸಿದರು. ಆಗ ತಾನೇ ಗುಡಿಸಲು ವಾಸಿಗಳು ಮುಂಜಾನೆಯ ಆಹಾರವನ್ನು ತಯಾರು ಮಾಡುವ ತಯಾರಿಯಲ್ಲಿದ್ದರು. ಅಧಿಕಾರಿಗಳ ತಂಡ ಹಾಗೂ ಪೊಲೀಸರು ಆಗಮಿಸುತ್ತಿದ್ದಂತೆಯೇ ಗಲಿಬಿಲಿಗೊಂಡ ೧೦೦ಕ್ಕೂ ಅಧಿಕ ಮಂದಿ ಜನಸ್ತೋಮವನ್ನು ಕಂಡು ಕೆಲಕಾಲ ಸ್ತಬ್ಧಗೊಂಡರು.

ಗುಡಿಸಲುಗಳು ತೆರವು ಗೊಳ್ಳುತ್ತಿದ್ದಂತೆಯೇ ಆದಿವಾಸಿಗಳು ಅಧಿಕಾರಿಯ ಮೇಲೆ ತಮ್ಮ ಅಸಮಾಧಾನ ವ್ಯಕ್ತಪಡಿಸಿ, ಗುಡಿಸಲು ತೆರವು ಗೊಳಿಸಿದರೂ ಇಲ್ಲಿಂದ ಕದಲುವುದಿಲ್ಲ ಎಂದು ಹಠಕ್ಕೆ ಬಿದ್ದರು. ಸ್ಥಳದಲ್ಲಿದ್ದ ತಹಶೀಲ್ದಾರ್ ಪ್ರಶಾಂತ್ ಹಾಗೂ ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್ ಅಲ್ಲಿದ್ದ ಮುಗ್ಧ ಆದಿವಾಸಿಗಳನ್ನು ಮನವೊಲಿಸುವ ಪ್ರಯತ್ನ ಮಾಡಿದರು. ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಗುಡಿಸಲು ನಿರ್ಮಾಣ ಮಾಡುವಂತಿಲ್ಲ ಹೀಗಾಗಿ ತೆರವು ಕಾರ್ಯ ನಡೆಸುತ್ತಿದ್ದೇವೆ. ಮುಂದಿನ ದಿನದಲ್ಲಿ ತಮ್ಮ ವ್ಯಾಪ್ತಿಯ ಪಂಚಾಯಿತಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ. ಹಠ ಮಾಡದೆ ತಮ್ಮ ಪ್ರದೇಶಗಳಿಗೆ ತೆರಳುವಂತೆ ತಿಳುವಳಿಕೆ ನೀಡಿದರು.

ಆದರೆ ಅಧಿಕಾರಿಗಳ ಮಾತಿಗೆ ಮನ್ನಣೆ ನೀಡಲಿಲ್ಲ. ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ಅಧಿಕಾರಿಗಳು ಹೇಳಿದಂತೆ ನಿಯಮ ಪಾಲಿಸುವುದು ಉತ್ತಮ ದಯವಿಟ್ಟು ಸ್ಥಳದಿಂದ ಹೊರಡುವಂತೆ ಮನವೊಲಿಸುವ ಪ್ರಯತ್ನವೂ ಕೂಡ ವಿಫಲವಾಯಿತು. ಮುಂಜಾನೆಯಿAದ ೧೧ ಗಂಟೆಯವರೆಗೂ ಅಲ್ಲಿದ್ದ ಆದಿವಾಸಿಗಳನ್ನು ಮನವೊಲಿಸುವ ಎಲ್ಲಾ ಪ್ರಯತ್ನಗಳು ಕೈಗೊಂಡರೂ ಪ್ರಯೋಜನವಾಗಲಿಲ್ಲ. ಈ ವೇಳೆ ಸ್ಥಳದಲ್ಲಿದ್ದ ಆದಿವಾಸಿಗಳು ಬಳಸುತ್ತಿದ್ದ ಹಾಸಿಗೆ, ಪಾತ್ರೆ, ಆಹಾರ ಸಾಮಗ್ರಿಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳು ಸೂಚನೆ ನೀಡಿದರು. ಆದರೆ ಅಧಿಕಾರಿಗಳ ಸೂಚನೆಯನ್ನು ಧಿಕ್ಕರಿಸಿದರು. ಅನಿವಾರ್ಯವಾಗಿ ಅಧಿಕಾರಿಗಳು ಸ್ಥಳದಲ್ಲಿದ್ದ ಕಂದಾಯ ಸಿಬ್ಬಂದಿಗಳಿಗೆ ಸಾಮಗ್ರಿಗಳನ್ನು ಒಂದೆಡೆ ಜೋಡಿಸಿಡುವಂತೆ ನಿರ್ದೇಶನ ನೀಡಿದರು. ಅಧಿಕಾರಿಗಳ ಸೂಚನೆಯಂತೆ ಅಲ್ಲಿದ್ದ ವಸ್ತುಗಳನ್ನು ಸಿಬ್ಬಂದಿಗಳು ಒಂದೆಡೆ ಜೋಡಿಸಿಟ್ಟರು. ಈ ವೇಳೆ ಅಲ್ಲಿದ್ದ ಆದಿವಾಸಿಗಳು ತಮ್ಮ ಅಸಮಾಧಾನ ವನ್ನು ಹೊರ ಹಾಕುತ್ತಲೇ ಅಧಿಕಾರಿ ಗಳ ನಡೆಯನ್ನು ಖಂಡಿಸಿದರು.

ಆದಿವಾಸಿಗಳನ್ನು ವಶಕ್ಕೆ ಪಡೆದ ನಂತರ ಸುತ್ತಲಿನ ಆಕ್ರಮಿತ ಪ್ರದೇಶವನ್ನು ಇಲಾಖೆಯು ತನ್ನ ವಶಕ್ಕೆ ಪಡೆಯಿತು. ಅಲ್ಲಿದ್ದ ಆದಿವಾಸಿಗಳನ್ನು ಕುಟ್ಟ ಭಾಗದ ಸಮುದಾಯ ಭವನಕ್ಕೆ ಸ್ಥಳಾಂತರಿಸಿ ಅವರ ಅಹವಾಲುಗಳನ್ನು ಸ್ವೀಕರಿಸಿ, ಆದಿವಾಸಿಗಳು ವಾಸಿಸುತ್ತಿದ್ದ ಪಂಚಾಯಿತಿ ವ್ಯಾಪ್ತಿಯ ಪಿಡಿಓಗಳನ್ನು ಬರಮಾಡಿಕೊಂಡು ಮಾಹಿತಿ ಪಡೆದರು. ಮುಂದಿನ ಹಂತದಲ್ಲಿ ನಿವೇಶನ ನೀಡುವ ಬಗ್ಗೆ ಕ್ರಮ ವಹಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿ ಆದಿವಾಸಿಗಳನ್ನು ಕಳುಹಿಸಿಕೊಡಲಾಯಿತು.

ಸ್ಥಳಕ್ಕೆ ಆಗಮಿಸಿದ ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡರಾದ ಕೃಷ್ಣಪ್ಪ ಬೆಳ್ಳೂರು ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿದರು. ಸ್ಥಳದಲ್ಲಿದ್ದ ಉಪವಿಭಾಗಾಧಿಕಾರಿಗಳಿಗೆ ಆದಿವಾಸಿಗಳ ನಿವೇಶನಗಳ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿದರು.

ಪ್ರಸ್ತುತ ವಿವಾದಿತ ಸ್ಥಳದಲ್ಲಿರುವ ಜಾಗದ ಹಕ್ಕುದಾರರಾದ ಬಾಚರಣಿಯಂಡ ಪೂಣಚ್ಚ ಪ್ರತಿಕ್ರಿಯಿಸಿ ಈ ಭಾಗದಲ್ಲಿ ಅಣ್ಣ ತಮ್ಮಂದಿರು ಅನೇಕ ವರ್ಷಗಳಿಂದ ವಾಸವಾಗಿದ್ದೇವೆ. ಮಕ್ಕಳ ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ದೂರದ ನಗರ ಪ್ರದೇಶಕ್ಕೆ ತೆರಳಿದ್ದೆವು. ಈ ವೇಳೆ ಕೆಲವು ಆದಿವಾಸಿಗಳು ನನ್ನ ಮನೆಯ ಸುತ್ತಲೂ ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿರುವ ವಿಷಯ ತಿಳಿದು ಬಂದಿರುತ್ತೇನೆ. ಇಂತಹ ಚಟುವಟಿಕೆಗಳು ಕಾನೂನು ಬಾಹಿರವಾಗಿದೆ. ನನ್ನ ಮನೆಯ ಸುತ್ತಲಿದ್ದ ಗುಡಿಸಲುಗಳನ್ನು ಇದೀಗ ತೆರವುಗೊಳಿಸಿದ್ದಾರೆ ಎಂದು ಮಾಧ್ಯಮಕ್ಕೆ ಮಾಹಿತಿ ನೀಡಿದರು.

ತೆರವು ಕಾರ್ಯದ ವೇಳೆ ಶ್ರೀಮಂಗಲ ಹೋಬಳಿ ರಾಜಸ್ವ, ನಿರೀಕ್ಷಕ ಶಿವಕುಮಾರ್, ಪೊನ್ನಂಪೇಟೆ ಆರ್‌ಐ ಸುಧೀಂದ್ರ, ಗ್ರಾಮ ಆಡಳಿತ ಅಧಿಕಾರಿ ಪೂಣಚ್ಚ, ಬಸವನಗೌಡ ಸಿಬ್ಬಂದಿಗಳಾದ ತಿಮ್ಮಯ್ಯ, ಮಹೇಶ್, ಕರುಂಬಯ್ಯ, ತರುಣ್,ಎ.ಎಸ್.ಐ ಚಂದ್ರು, ಸುನೀಲ್, ಚಂದ್ರ, ನಾಗರಾಜ್ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು. ಕೆ.ಬಾಡಗ ಗ್ರಾಮ ಪಂಚಾಯಿತಿಯ ಸದಸ್ಯರಾದ ಮುಕ್ಕಾಟಿರ ರಿತೇಶ್ ಬಿದ್ದಪ್ಪ, ಗ್ರಾಮಸ್ಥರಾದ ರೋಹಿತ್ ಸುಬ್ಬಯ್ಯ, ಪಾರ್ಥ ಪೂಣಚ್ಚ, ವಿಜಯ, ಬೋಪಣ್ಣ, ಹರೀಶ್, ನಾಚಪ್ಪ ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.

ಡಿವೈಎಸ್ಪಿ ನಿರಂಜನ್ ರಾಜೇ ಅರಸ್ ಮುಂದಾಳತ್ವದಲ್ಲಿ ಕುಟ್ಟ ವೃತ್ತ ನಿರೀಕ್ಷಕÀ ಮಂಜಪ್ಪ, ಗೋಣಿಕೊಪ್ಪ ವೃತ್ತ ನಿರೀಕ್ಷ ಗೋವಿಂದ್‌ರಾಜ್, ಗೋಣಿಕೊಪ್ಪ ಠಾಣಾಧಿಕಾರಿ ದೀಕ್ಷಿತ್ ಕುಮಾರ್, ಪೊನ್ನಂಪೇಟೆ ಠಾಣಾಧಿಕಾರಿ ಸುಬ್ರಮಣಿ, ಕುಟ್ಟ ಠಾಣಾಧಿಕಾರಿ ಮಹಾದೇವ್ ಸೇರಿದಂತೆ ನೂರಾರು ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲಿ ಬಂದೋಬಸ್ತ್ನಲ್ಲಿದ್ದರು.