ಮಡಿಕೇರಿ, ಡಿ. ೨೭: ಇತ್ತೀಚೆಗೆ ಸುಳ್ಯದಲ್ಲಿ ಮುಳ್ಳೇರಿಯ ಹವ್ಯಕ ಮಂಡಲ ಸಭೆ ನಡೆಯಿತು. ಈ ಸಂದರ್ಭ ಅಂಗಸAಸ್ಥೆಗಳ ಪ್ರಧಾನರಾದ ಹಾರೆಕೆರೆ ನಾರಾಯಣ ಭಟ್ಟ ಅವರ ಅಧ್ಯಕ್ಷತೆಯಲ್ಲಿ ಕೊಡಗಿನ ಸಂಪಾಜೆಯಲ್ಲಿರುವ ಜೇಡ್ಲಾ ಗೋಶಾಲೆಯ ನೂತನ ಕಾರ್ಯಕಾರಿ ಸಮಿತಿಯ ರಚನೆಯ ಬಗ್ಗೆ ಪರಿಚಯ ಮಾಡಲಾಯಿತು.
ಗೋಶಾಲೆಯ ಕಾರ್ಯಾಧ್ಯಕ್ಷ ಡಾ. ರಾಜಾರಾಮ ಎ.ಆರ್ ಎಲ್ಲ ಗೋಭಕ್ತರು, ಸದಸ್ಯರು ಗೋಶಾಲೆಗೆ ಆಗಮಿಸಿ, ಗೋವುಗಳ ಒಡನಾಟ ಪಡೆದುಕೊಳ್ಳುವಂತೆ ವಿನಂತಿಸಿದರು. ಗೋ ಸೇವೆಗೆ ಸುಲಭ ಮಾರ್ಗವಾದ ಗೋವಿನ ಆರೈಕೆಗೆ ಗೋಬಂಧು ಹಾಗೂ ಗೋಪಾಲ ಯೋಜನೆ ಬಗ್ಗೆಯೂ ಮಾಹಿತಿ ನೀಡಲಾಯಿತು.
ಜೇಡ್ಲಾ ಗೋಶಾಲೆಯು ಒಂದು ವರ್ಷದಲ್ಲಿ ಸ್ವಾವಲಂಬಿ ಆಗುವಂತೆ ಮಾರ್ಗಸೂಚಿ ರಚಿಸಿದ್ದು, ಗೋಶಾಲೆ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಬಯಸಿದರು.
ಜೇಡ್ಲಾ ಗೋಶಾಲೆಯ ಯೋಜನೆಗಳಲ್ಲಿ ಒಂದಾದ ಕಾಣಿಕೆ ಹುಂಡಿಯನ್ನು ಹಾರಕೆರೆ ನಾರಾಯಣ ಭಟ್ಟ ಅವರು ಲೋಕಾರ್ಪಣೆ ಮಾಡಿದರು.