ಸೋಮವಾರಪೇಟೆ, ಡಿ. ೨೭: ಇಲ್ಲಿನ ಟೀಂ ಎಬಿಡಿ ವತಿಯಿಂದ ಎರಡು ದಿನಗಳ ಕಾಲ ಐಪಿಎಲ್ ಮಾದರಿ ನಡೆದ ಚುಟುಕು ಕ್ರಿಕೆಟ್ ಪಂದ್ಯಾಟದಲ್ಲಿ ರೋಚಕ ಆಟ ಪ್ರದರ್ಶಿಸಿದ ಕ್ಲಬ್ರಸ್ತೆ-ಪಂಜಾಬ್ ತಂಡವು ೫೦ ಸಾವಿರ ನಗದಿನೊಂದಿಗೆ ಆಕರ್ಷಕ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿತು.
ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜನೆಗೊಂಡಿದ್ದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದ ಫೈನಲ್ನಲ್ಲಿ ಆದರ್ಶ್ ತಮ್ಮಯ್ಯ ಮಾಲೀಕತ್ವ ಹಾಗೂ ನಾಯಕತ್ವದ ಕ್ಲಬ್ರಸ್ತೆ ಪಂಜಾಬ್ ತಂಡವು ಪ್ರಥಮ ಸ್ಥಾನ ಪಡೆದರೆ, ಕಿಬ್ಬೆಟ್ಟ ಮಧು ಮಾಲೀಕತ್ವ ಹಾಗೂ ಶ್ರೀರಂಜನ್ ನಾಯಕತ್ವದ ಕೆ.ಕೆ.ಆರ್. ಕಿಬ್ಬೆಟ್ಟ ತಂಡ ದ್ವಿತೀಯ ಸ್ಥಾನದೊಂದಿಗೆ ರೂ. ೩೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿಗೆ ಭಾಜನವಾಯಿತು.
ಹೊಸಬೀಡಿನ ಪೃಥ್ವಿ ಮಾಲೀಕತ್ವ ಹಾಗೂ ವಿಕ್ರಂ ಸಾಗರ್ ನಾಯಕತ್ವದ ಹೊಸಬೀಡಿನ ಡೆಕ್ಕನ್ ಚಾಜರ್ಸ್ ತಂಡವು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ರೂ. ೧೦ ಸಾವಿರ ನಗದು ಹಾಗೂ ಟ್ರೋಫಿ ಪಡೆಯಿತು.
ಮ್ಯಾನ್ ಆಫ್ದ ಮ್ಯಾಚ್ ಪ್ರಶಸ್ತಿಗೆ ಭಾಜನರಾದ ಪಂಜಾಬ್ ತಂಡದ ಪ್ರದೀಪ್ ಅವರಿಗೆ ೩೨ ಇಂಚಿನ ಟಿ.ವಿ., ಮ್ಯಾನ್ ಆಫ್ ದ ಸೀರೀಸ್ ಪ್ರಶಸ್ತಿಗೆ ಭಾಜನರಾದ ಕೆಕೆಆರ್ ತಂಡದ ವಿನೋದ್ ಅವರಿಗೆ ಬಹುಮಾನವಾಗಿ ಸೈಕಲ್ ವಿತರಿಸಲಾಯಿತು. ಪಂದ್ಯಾವಳಿಯ ಬೆಸ್ಟ್ ಬ್ಯಾಟ್ಸ್ಮೆನ್ ಆಗಿ ವಿಕ್ರಂ ಸಾಗರ್, ಬೌಲರ್ ಆಗಿ ವಿನೋದ್, ಫೀಲ್ಡರ್ ಆಗಿ ಸಂಜು ಬೆಸ್ಟ್ ಕ್ಯಾಪ್ಟನ್ ಆಗಿ ಆದರ್ಶ್ ತಮ್ಮಯ್ಯ ಅವರುಗಳು ಹೊರಹೊಮ್ಮಿದರು.
ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಾಟಗಳನ್ನು ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಕಾಂಗ್ರೆಸ್ ಮುಖಂಡ ಡಾ. ಮಂಥರ್ಗೌಡ, ಉದ್ಯಮಿ ಗಿರೀಶ್ ಮಲ್ಲಪ್ಪ ಅವರುಗಳು ಉದ್ಘಾಟಿಸಿದರು. ಬಹುಮಾನ ವಿತರಣಾ ಸಮಾರಂಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಠಾಣಾಧಿಕಾರಿ ರಮೇಶ್ಕುಮಾರ್, ಚೌಡ್ಲು ಗ್ರಾ.ಪಂ. ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಬೋವಿ ಸಮಾಜದ ಜಿಲ್ಲಾಧ್ಯಕ್ಷ ಸುಜಿತ್, ಕೆ.ಕೆ.ಆರ್. ತಂಡದ ಮಾಲೀಕ ಕಿಬ್ಬೆಟ್ಟ ಮಧು, ಟೀಂ ಎಬಿಡಿ ಅಧ್ಯಕ್ಷ ಎಸ್.ಐ. ಚೇತನ್ ಅವರುಗಳು ಉಪಸ್ಥಿತರಿದ್ದು, ವಿಜೇತರಿಗೆ ಬಹುಮಾನ ವಿತರಿಸಿದರು.