ಭಾಗಮಂಡಲ, ಡಿ. ೨೭: ರೈತರು ಮಣ್ಣು ಪರೀಕ್ಷೆ ಮಾಡಿ ಅದಕ್ಕೆ ಅನುಗುಣವಾಗಿ ಗೊಬ್ಬರ ಬಳಕೆ ಮಾಡುವುದು ಸೂಕ್ತ ಎಂದು ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಹೇಳಿದರು.
ಕೃಷಿ ಪರಂಪರಾಗತ ಯೋಜನೆ ಅಡಿ ಸಾವಯವ ಕೃಷಿ ಮಾಡುವ ರೈತ ಮತ್ತು ರೈತ ಮಹಿಳೆಯರಿಗೆ ತೋಟಗಾರಿಕೆ ಮತ್ತು ಭಾಗಂಡೇಶ್ವರ ತೋಟಗಾರಿಕೆ ರೈತ ಉತ್ಪಾದಕರ ಕಂಪೆನಿ ವತಿಯಿಂದ ಭಾಗಮಂಡಲದ ಜೇನು ಕೃಷಿ ತಾಂತ್ರಿಕ ತರಬೇತಿ ಸಭಾಂಗಣದಲ್ಲಿ ನಡೆದ ತೆಂಗಿನ ಗಿಡ ಹಾಗೂ ಜೇನು ಪೆಟ್ಟಿಗೆ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಭೌಗೋಳಿಕವಾಗಿ ಇಂದು ಹವಾಮಾನ ವೈಪರೀತ್ಯವಾಗುತ್ತಿದ್ದು, ಸಂದರ್ಭಕ್ಕೆ ಅನುಗುಣವಾಗಿ ರೈತರು ಬೆಳೆಗಳ ಬದಲಾವಣೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ರೈತರು ಚಿಂತನೆ ಮಾಡಬೇಕಿದೆ. ಕಾಫಿ, ಏಲಕ್ಕಿ, ಕಿತ್ತಳೆ, ಕಾಳುಮೆಣಸು ಇನ್ನಿತರ ಬೆಳೆಗಳು ಕುಂಠಿತವಾಗುತ್ತಿದೆ. ರೈತರು ಇತರ ತೋಟಗಾರಿಕಾ ಬೆಳೆಗಳತ್ತ ಗಮನಹರಿಸ ಬೇಕಿದೆ. ಮುಂದಿನ ದಿನಗಳಲ್ಲಿ ಗೊಬ್ಬರ ಖರೀದಿ ಮಾಡಲು ಪಹಣಿ ಹೊಂದಿದ ರೈತರಿಗೆ ಮಾತ್ರ ರಸಗೊಬ್ಬರ ದೊರೆಯಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು.
ಭಾಗಮAಡಲದ ಭಗಂಡೇಶ್ವರ ರೈತ ಉತ್ಪಾದಕ ಕಂಪೆನಿ ಅಧ್ಯಕ್ಷ ಕೋಡಿ ಪೊನ್ನಪ್ಪ ಮಾತನಾಡಿ, ರಾಸಾಯನಿಕ ಗೊಬ್ಬರದ ಬಳಕೆಯಿಂದಾಗಿ ಇಂದು ಭೂಮಿಯಲ್ಲಿ ಯಾವುದೇ ಸತ್ವಗಳಿಲ್ಲದೆ ಭೂಮಿಯಲ್ಲಿರುವ ಕೀಟ ಜಲಚರಗಳು ನಶಿಸುತ್ತಿವೆ. ಸಾವಯವ ಗೊಬ್ಬರ ಬಳಕೆ ಮಾಡಿದಲ್ಲಿ ನಿಧಾನಗತಿಯಲ್ಲಿ ಆದರೂ ಉತ್ತಮ ಇಳುವರಿ ಪಡೆಯುವು ದರೊಂದಿಗೆ ಉತ್ತಮ ಆರೋಗ್ಯವು ಜನರಿಗೆ ದೊರೆಯಲಿದೆ. ಅಲ್ಲದೆ ಸಾವಯವ ಗೊಬ್ಬರದಿಂದ ಬೆಳೆದ ವಸ್ತುಗಳಿಗೆ ಹೆಚ್ಚಿನ ಬೆಲೆ ದೊರಕಲಿದೆ ಎಂದರು. ತೋಟಗಾರಿಕಾ ಇಲಾಖೆಯ ಹಿರಿಯ ಉಪನಿರ್ದೇಶಕ ಪ್ರಮೋದ್ ಮಾತನಾಡಿ, ಸಾವಯವ ಗೊಬ್ಬರ ದಿಂದ ಪಡೆದ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಇದಕ್ಕೆ ಅನುಗುಣವಾಗಿ ಸರ್ಕಾರ ಭಾಗಮಂಡಲದ ರೈತ ಕಂಪೆನಿಯಲ್ಲಿ ಸದಸ್ಯರಾಗಿರುವ ಸಾವಯವ ಕೃಷಿಕರಿಗೆ ಗಿಡ ಹಾಗೂ ನೆರವು ನೀಡಲು ಮುಂದೆ ಬಂದಿದ್ದು, ರೈತರು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಮಿತಾ ವಹಿಸಿದ್ದರು. ಕಂಪೆನಿಯ ಉಪಾಧ್ಯಕ್ಷ ಈಶ್ವರ್, ನಿರ್ದೇಶಕ ವಿಠಲ, ತೋಟಗಾರಿಕಾ ಸಹಾಯಕ ಅಧಿಕಾರಿ ಬಿ.ಡಿ. ವಸಂತ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ೬೭೬ ಫಲಾನುಭವಿಗಳಿಗೆ ಜೇನು ಪೆಟ್ಟಿಗೆ ಹಾಗೂ ತೆಂಗಿನ ಗಿಡ ವಿತರಿಸಲಾಯಿತು.