ಸಿದ್ದಾಪುರ, ಡಿ ೨೭ : ಒಂಟಿ ಸಲಗವನ್ನು ಸೆರೆ ಹಿಡಿಯಲು ಪ್ರಯತ್ನಿಸಿದ ಕಾರ್ಯಾಚರಣೆ ತಂಡವನ್ನೇ ಸಲಗ ಬೆನ್ನಟ್ಟಿದ್ದು ಕೂದಲೆಳೆಯ ಅಂತರದಿAದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾದ ಘಟನೆ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ನಡೆದಿದೆ.

ಸಿದ್ದಾಪುರದ ಸುತ್ತಮುತ್ತಲ ಗ್ರಾಮಗಳಾದ ಗುಹ್ಯ, ಇಂಜಿಲಗೆರೆ, ಕರಡಿಗೋಡು, ಬೀಟಿಕಾಡು ಭಾಗಗಳ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಪುಂಡಾನೆಯೊAದನ್ನು ಸೆರೆ ಹಿಡಿಯಲು ಆದೇಶ ಬಂದಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರದAದು ಬೆಳಗ್ಗಿನ ಜಾವ ಒಂಟಿ ಸಲಗವನ್ನು ಸೆರೆ ಹಿಡಿಯಲು ಕಾರ್ಯಾಚರಣೆ ತಂಡವು ಸಾಕಾನೆಗಳ ನೆರವಿನೊಂದಿಗೆ ಕರಡಿಗೋಡು ಗ್ರಾಮದ ಕಾಫಿ ತೋಟಕ್ಕೆ ಪ್ರವೇಶಿದೆ.

ಈ ಸಂದರ್ಭ ಕಾರ್ಯಾಚರಣೆ ತಂಡಕ್ಕೆ ಸೆರೆ ಹಿಡಿಯಲು ಗುರುತಿಸಿದ್ದ ಒಂಟಿ ಸಲಗ ಕಂಡು ಬಂದಿದೆ. ಕೂಡಲೇ ಕಾರ್ಯಾಚರಣೆ ತಂಡವು ಪಟಾಕಿಗಳನ್ನು ಸಿಡಿಸಿ ಸಲಗವನ್ನು ಸುತ್ತುವರಿಯಲು ಸಿದ್ಧತೆ ಕೈಗೊಂಡಿದೆ. ಈ ವೇಳೆ ಪಟಾಕಿ ಶಬ್ದಕ್ಕೆ ಕೋಪಗೊಂಡ ಸಲಗ ಕಾರ್ಯಾ ಚರಣೆ ತಂಡವನ್ನೇ ಬೆನ್ನಟ್ಟಿತ್ತು ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಅರಣ್ಯಾಧಿಕಾರಿ ಗಳು ಹಾಗೂ ಸಿಬ್ಬಂದಿಗಳು ಪಾರಾಗಿದ್ದಾರೆ. ಅಪಾಯವನ್ನು ಅರಿತ ಅಧಿಕಾರಿಗಳು ಸಿಬ್ಬಂದಿ ಕಾಫಿ ತೋಟದೊಳಗೆ ಎದ್ದು ಬಿದ್ದು ಓಡಿದ್ದಾರೆ.

ಆದರೂ ಛಲ ಬಿಡದ ಅಧಿಕಾರಿಗಳು, ಸಿಬ್ಬಂದಿ ಸಾಕಾನೆಗಳಾದ ಅಭಿಮನ್ಯು, ಧನಂಜಯ, ಭೀಷ್ಮ, ಪ್ರಶಾಂತ್ ಇವುಗಳೊಂದಿಗೆ ಕಾರ್ಯಾಚರಣೆ ಯನ್ನು ಮುಂದುವರೆಸಿದ್ದಾರೆ. ಕೊರೆಯುವ ಚಳಿ ನಡುವೆ ಹಗಲಿರುಳು ಶ್ರಮಪಟ್ಟು ಸಲಗವನ್ನು ಖೆಡ್ಡಕ್ಕೆ ಬೀಳಿಸಲು ಅರಣ್ಯ ಇಲಾಖಾಧಿಕಾರಿಗಳು ತೀರ್ಮಾನಿ ಸಿದ್ದು, ೫೦ಕ್ಕೂ ಅಧಿಕ ಮಂದಿ ಸಿಬ್ಬಂದಿ ಭಾಗವಹಿಸಿದ್ದಾರೆ. ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್ ಮೂರ್ತಿ ಅವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ಡಿ.ಸಿ.ಎಫ್ ಚಕ್ರಪಾಣಿ, ಎ.ಸಿ.ಎಫ್. ಕೆ. ನೆಹರು, ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ, ಉಪವಲಯ ಅರಣ್ಯಾಧಿಕಾರಿ ಸಂಜಿತ್ ಸೋಮಯ್ಯ, ಕನ್ನಂಡ ರಂಜನ್, ಶೂಟರ್ ಅಕ್ರಂ, ವನ್ಯ ಜೀವಿ ವೈದ್ಯಾಧಿಕಾರಿಗಳಾದ ಡಾ. ರಮೇಶ್, ಡಾ. ಚಿಟ್ಟಿಯಪ್ಪ ಪಾಲ್ಗೊಂಡಿದ್ದಾರೆ.

- ವಾಸು