ಸೋಮವಾರಪೇಟೆ, ಡಿ. ೨೬: ವಿಧಾನ ಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿಯಿದ್ದು, ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಈ ಬಾರಿ ಮುಂಚಿತವಾಗಿಯೇ ಅಖಾಡಕ್ಕಿಳಿದಿದೆ.
ಈಗಾಗಲೇ ಜಿಲ್ಲೆಯ ಮಡಿಕೇರಿ ಮತ್ತು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿರುವ ಆಕಾಂಕ್ಷಿಗಳಿAದ ಅರ್ಜಿ ಪಡೆದುಕೊಂಡಿದ್ದು, ಒಂದೆರಡು ಸುತ್ತಿನ ಮಾತುಕತೆಗಳೂ ನಡೆದಿವೆ.
ಈ ನಡುವೆ ಇಂದು ಜಿಲ್ಲೆಯ ಎರಡೂ ವಿಧಾನ ಸಭಾ ಕ್ಷೇತ್ರಗಳಿಂದ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಗಳಾಗಿರುವವರನ್ನು ಕಾಂಗ್ರೆಸ್ ಪಕ್ಷದ ಜಿಲ್ಲಾ ಉಸ್ತುವಾರಿಗಳಾಗಿರುವ ಹೆಚ್.ಸಿ. ಮಹದೇವಪ್ಪ ಮತ್ತು ಧ್ರುವನಾರಾಯಣ್ ಅವರುಗಳು ಭೇಟಿ ಮಾಡಿ ಚರ್ಚಿಸಿದ್ದಾರೆ.
ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ಟಿಕೆಟ್ ಆಕಾಂಕ್ಷಿಗಳು, ಜಿಲ್ಲೆ ಹಾಗೂ ಬ್ಲಾಕ್ ಕಾಂಗ್ರೆಸ್ ಮುಖಂಡರ ಸಭೆ ನಡೆಸಿದ ಈರ್ವರು ಉಸ್ತುವಾರಿಗಳು, ಚುನಾವಣೆ ಸಂಬAಧ ಮಾತುಕತೆ ನಡೆಸಿದರು. ರಾಜ್ಯ ವರಿಷ್ಠರ ನಿರ್ದೇಶನ ಹಿನ್ನೆಲೆ ಜಿಲ್ಲೆಗೆ ಭೇಟಿ ನೀಡಿದ ಧ್ರುವನಾರಾಯಣ್ ಹಾಗೂ ಹೆಚ್.ಸಿ. ಮಹದೇವಪ್ಪ ಅವರುಗಳು, ಆಕಾಂಕ್ಷಿಗಳನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಚುನಾವಣೆಯಲ್ಲಿ ಟಿಕೆಟ್ ಲಭಿಸಿದರೆ ಅಥವಾ ಕೈತಪ್ಪಿದರೆ ಆಗಬಹುದಾದ ಸಾಧಕ ಬಾಧಕಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಜಿಲ್ಲೆಯ ನಾಯಕರುಗಳನ್ನೂ ಸಹ ಪ್ರತ್ಯೇಕವಾಗಿ ಭೇಟಿ ಮಾಡಿ ಆಕಾಂಕ್ಷಿಗಳ ಬಲಾಬಲದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಈ ವಿವರವನ್ನು ರಾಜ್ಯ ವರಿಷ್ಠರಿಗೆ ಸಲ್ಲಿಸಲಾಗುವುದು. ಅಂತಿಮವಾಗಿ ಪಕ್ಷದ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಲಿದೆ. ಯಾರೇ ಅಭ್ಯರ್ಥಿಯಾದರೂ ಒಗ್ಗಟ್ಟಿನಿಂದ ಪಕ್ಷದ ಗೆಲುವಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಸೂಚನೆ ನೀಡಿದರು.