ಕಣಿವೆ, ಡಿ. ೨೬: ನಿಸರ್ಗದತ್ತವಾಗಿ ಬೆಳೆದು ನಿಂತಿರುವ ಶ್ರೀಗಂಧದ ಗಿಡಗಳಿಗೆ ಸೂಕ್ತ ರಕ್ಷಣೆ ಇಲ್ಲದ ಕಾರಣ ಅಮೂಲ್ಯವಾದ ಶ್ರೀಗಂಧದ ಗಿಡಗಳು ಕಟುಕರ ಪಾಲಾಗುತ್ತಿವೆ.
ತಾಲೂಕು ಕೇಂದ್ರ ಕುಶಾಲನಗರದಿಂದ ಹೆಬ್ಬಾಲೆ ಮಾರ್ಗವಾಗಿ ಭೈರಪ್ಪನಗುಡಿಗೆ ತೆರಳುವ ಹೆದ್ದಾರಿ ಬದಿಯ ಗುಡ್ಡದುದ್ದಕ್ಕು ಸ್ವಾಭಾವಿಕವಾಗಿ ಬೆಳೆದು ನಿಂತಿರುವ ಶ್ರೀಗಂಧದ ಗಿಡಗಳನ್ನು ಸಂರಕ್ಷಣೆ ಮಾಡಿದಲ್ಲಿ ಅರಣ್ಯ ಇಲಾಖೆಗೆ ಕೋಟ್ಯಾಂತರ ರೂಗಳ ಆದಾಯ ಬರುವುದರಲ್ಲಿ ಸಂಶಯವಿಲ್ಲ.
ಹಾಗಿದ್ದರೂ ಕೂಡ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ದೂರದೃಷ್ಟಿಯ ಕೊರತೆಯಿಂದಾಗಿ ಇಲ್ಲಿ ಬೆಳೆದು ನಿಂತಿರುವ ಶ್ರೀಗಂಧದ ಗಿಡಗಳು ದುಷ್ಕರ್ಮಿಗಳ ಕತ್ತಿ ಏಟಿಗೆ ನೆಲಕ್ಕುರುಳುತ್ತಿವೆ.
ಹೆಬ್ಬಾಲೆ-ಭೈರಪ್ಪನಗುಡಿ ಮಾರ್ಗದ ಹಾರಂಗಿ ಕಾಲುವೆಯಿಂದ ಆರಂಭಗೊAಡು ಹೆದ್ದಾರಿಯುದ್ದಕ್ಕೂ ಹತ್ತಲ್ಲ, ನೂರಲ್ಲ, ಸಾವಿರಾರು ಸಂಖ್ಯೆಯಲ್ಲಿ ಬೆಳೆಯುತ್ತಿರುವ ಶ್ರೀಗಂಧದ ಗಿಡಗಳು ದಿನೇ ದಿನೇ ದನಗಾಹಿಗಳು ಹಾಗೂ ಶ್ರೀಗಂಧದ ಚೋರರಿಂದ ಧರಾಶಾಹಿಯಾಗುತ್ತಿವೆ.
ಹೆಬ್ಬಾಲೆಯಿಂದ ಭೈರಪ್ಪನಗುಡಿ ಮಾರ್ಗದುದ್ದಕ್ಕೂ ಇರುವ ಶ್ರೀಗಂಧದ ಗಿಡಗಳ ಪ್ರದೇಶವನ್ನು ‘ಶ್ರೀಗಂಧದ ಪಾರ್ಕ್’ ಮಾಡಬೇಕೆಂದು ಅರಣ್ಯ ಇಲಾಖೆಗೆ ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ. ಅಲ್ಲದೆ ಶ್ರೀಗಂಧದ ಗಿಡಗಳನ್ನು ಬುಡಕ್ಕೆ ಕತ್ತರಿಸಿ ನಾಶಪಡಿಸುತ್ತಿರುವ ದುಷ್ಕರ್ಮಿಗಳನ್ನು ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಬೇಕು. ದನಗಾಹಿಗಳಿಗೆ ಸೂಕ್ತ ಎಚ್ಚರಿಕೆಯನ್ನು ನೀಡಬೇಕು.
ಈ ವ್ಯಾಪ್ತಿಯ ವಸತಿ ಪ್ರದೇಶಗಳನ್ನು ಪರಿಶೀಲಿಸಿ ಅಲ್ಲಿ ಮನೆಯ ಸೌದೆಗೆಂದು ಇಲ್ಲಿನ ಗಿಡಗಳನ್ನು ಕಡಿದುರುಳಿಸಿರುವುದನ್ನು ಪತ್ತೆ ಹಚ್ಚಿ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕೆಂಬುದು ಕೂಡ ಪರಿಸರ ಪ್ರಿಯರ ಆಗ್ರಹವಾಗಿದೆ.
ಖಾಸಗಿ ಭೂಮಿಯಲ್ಲೂ ಇವೆ
ಈ ಮಾರ್ಗದುದ್ದಕ್ಕೂ ಇರುವ ಹೆದ್ದಾರಿಯ ಒಂದು ಬದಿಯ ಗುಡ್ಡದ ಮೇಲೆ ಖಾಸಗಿ ಮಾಲೀಕತ್ವದ ಭೂಮಿಯು ಇದ್ದು ಅಲ್ಲಿಯು ಶ್ರೀಗಂಧದ ಗಿಡಗಳು ಬೆಳೆದು ನಿಂತಿವೆ. ಆದ್ದರಿಂದ ಅಂತಹ ಭೂಮಾಲೀಕರಿಗೆ ಶ್ರೀಗಂಧದ ಗಿಡಗಳ ಸಂರಕ್ಷಣೆಯ ಜಾಗೃತಿ ಮೂಡಿಸಬೇಕೆಂದು ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಮಹೇಶ್ ಹಾಗೂ ಉಪಾಧ್ಯಕ್ಷ ಎಂ.ಟಿ. ಬೇಬಿ ಒತ್ತಾಯಿಸಿದ್ದಾರೆ.
-ಕೆ.ಎಸ್. ಮೂರ್ತಿ