ಸಿದ್ದಾಪುರ, ಡಿ. ೨೫: ಹಾಡಹಗಲೇ ವ್ಯಕ್ತಿಯೋರ್ವನನ್ನು ಹಗ್ಗದಿಂದ ಕಟ್ಟಿಹಾಕಿ ಹಲ್ಲೆ ನಡೆಸಿ ಹಣ ಹಾಗೂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ಅವರೆಗುಂದದಲ್ಲಿ ನಡೆದಿದೆ. ಅವರೆಗುಂದದ ನಿವಾಸಿ ಎಂ.ಎA. ಚಂಗಪ್ಪ (೬೪) ಎಂಬವರು ತಮಗೆ ಸೇರಿದ ಜಾನುವಾರುಗಳನ್ನು ಮನೆಯ ಬಳಿ ಮೇಯಿಸುತ್ತಿದ್ದ ಸಂದರ್ಭದಲ್ಲಿ ಪೂರ್ವಾಹ್ನ ಅಂದಾಜು ೧೨ ಗಂಟೆಯ ಸಮಯದಲ್ಲಿ ನಾಲ್ವರು ಅಪರಿಚಿತ ವ್ಯಕ್ತಿಗಳು ಚಂಗಪ್ಪ ಅವರ ಸಮೀಪಕ್ಕೆ ಬಂದು ‘ಈ ಕಡೆ ನಮ್ಮ ಜಾನುವಾರುಗಳು ಬಂದಿದೆಯಾ’ ಎಂದು ಕೇಳುತ್ತಾ ಹತ್ತಿರ ಬಂದಿದ್ದಾರೆ ಎನ್ನಲಾಗಿದೆ. ನೀವು ಯಾರು ಎಂದು ಕೇಳುವಷ್ಟರಲ್ಲಿ ನಾಲ್ವರು ಅಪರಿಚಿತ ವ್ಯಕ್ತಿಗಳು ಏಕಾಏಕಿ ಚಂಗಪ್ಪರವರ ಮೇಲೆ ಹಲ್ಲೆಗೆ ಮುಂದಾಗಿ ಮುಖಕ್ಕೆ ಹಲ್ಲೆ ನಡೆಸಿದ್ದಾರೆ. ನಂತರ ಪ್ಲಾಸ್ಟಿಕ್ ಹಗ್ಗದಿಂದ ನಾಲ್ವರು ಸೇರಿ ಚಂಗಪ್ಪರವರ ಕಾಲು ಹಾಗೂ ಕೈಗಳನ್ನು ಕಟ್ಟಿ ಹಾಕಿದ್ದಾರೆ. ಇದಾದ ಬಳಿಕ ದುಷ್ಕರ್ಮಿಗಳು ಚಂಗಪ್ಪರವರ ಮನೆಯ ಒಳಗೆ ನುಗ್ಗಿ ಅಲ್ಮೇರಾದಲ್ಲಿಟ್ಟಿದ್ದ ಅಂದಾಜು ರೂ. ೯೦ ಸಾವಿರ ನಗದು ಹಾಗೂ ಇವರ ಪತ್ನಿಗೆ ಸೇರಿದ ೧೬ ಗ್ರಾಂ ಚಿನ್ನಾಭರಣಗಳನ್ನು ಸುಲಿಗೆ ಮಾಡಿ ಪರಾರಿಯಾಗಿದ್ದಾರೆ. ಅಪರಿಚಿತರ ಹಲ್ಲೆಗೆ ಒಳಗಾದ ಚಂಗಪ್ಪರವರ ಕಣ್ಣಿನ ಭಾಗಕ್ಕೆ ಗಾಯವಾಗಿದೆ. ಇವರಿಗೆ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಲಾಗಿದೆ. ಇವರ ಪತ್ನಿ ಅವರೆಗುಂದದಲ್ಲಿ ಮಗುವಿನ ನಾಮಕರಣಕ್ಕೆ ತೆರಳಿದ್ದರು. ಚಂಗಪ್ಪ ಒಬ್ಬರೇ ಇರುವಾಗ ಈ ಘಟನೆ ನಡೆದಿದೆ. ಪ್ಲಾಸ್ಟಿಕ್ ಹಗ್ಗದಿಂದ ಕಟ್ಟಿದ ನಂತರ ಸುಲಿಗೆಕೋರರು ಬಟ್ಟೆಯೊಂದನ್ನು ಬಾಯಿಗೆ ತುರುಕುತ್ತಾರೆ. ಇವರುಗಳು ದರೋಡೆ ಮಾಡಿ ಪರಾರಿಯಾದ ಬಳಿಕ ಚಂಗಪ್ಪನವರು ಸ್ವಯಂ ಪ್ರಯತ್ನದಿಂದ ಕೈಯಲ್ಲಿದ್ದ ಹಗ್ಗವನ್ನು ಜಾರಿಸಿ ನಂತರ ಸಮೀಪದಲ್ಲಿರುವ ಅವರ ಸಹೋದರನಾದ ಮುತ್ತಣ್ಣರವರ ಮನೆಗೆ ತೆರಳಿ ನಡೆದ ವಿಚಾರವನ್ನು ತಿಳಿಸಿದರು. ಕೂಡಲೇ ಮುತ್ತಣ್ಣನವರು ಸ್ಥಳೀಯರಿಗೆ

(ಮೊದಲ ಪುಟದಿಂದ) ಕರೆ ಮಾಡಿ ಮಾಹಿತಿ ನೀಡಿದರು. ಸ್ಥಳೀಯರು ಹುಡುಕಾಟ ನಡೆಸಿದರು. ಸುಲಿಗೆ ಮಾಡಿದ ಅಪರಿಚಿತರು ಪತ್ತೆಯಾಗಲಿಲ್ಲ. ನಂತರ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಶ್ವಾನ ದಳ ಕರೆಸಿ ತನಿಖೆಯನ್ನು ಕೈಗೊಂಡರು. ಆದರೆ ಸುಳಿವು ಲಭಿಸಲಿಲ್ಲ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲಚೀರ ಅಯ್ಯಪ್ಪ, ಡಿವೈಎಸ್ಪಿ ಗಜೇಂದ್ರ ಪ್ರಸಾದ್, ಮಡಿಕೇರಿ ವಿಭಾಗದ ವೃತ್ತ ನಿರೀಕ್ಷಕರು, ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಭೇಟಿ ನೀಡಿ ಚಂಗಪ್ಪರವರಿAದ ಮಾಹಿತಿ ಕಲೆಹಾಕಿ ಪ್ರಕರಣವನ್ನು ದಾಖಲಿಸಿಕೊಂಡರು. ಸುಲಿಗೆಕೋರರ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದಾರೆ. ಹಾಡಹಗಲೇ ನಡೆದ ಈ ಘಟನೆಯಿಂದಾಗಿ ಅದೃಷ್ಟವಶಾತ್ ಚಂಗಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಮದಲ್ಲಿ ಆತಂಕ ಮನೆಮಾಡಿದೆ. -ವರದಿ: ವಾಸು