ಕಣಿವೆ, ಡಿ. ೨೫: ಕೃಷಿಕರು ಕೈಗೊಳ್ಳುವ ತರಕಾರಿ ಕಾಯಿಪಲ್ಯೆಗಳ ಪೈಕಿ ಈ ಬಾರಿ "ಕೆಸ" ತರಕಾರಿ ಫಸಲಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಇದೆ. ಇದರಿಂದಾಗಿ ಕೃಷಿಕರಲ್ಲಿ ಸಂತಸ ಮನೆ ಮಾಡಿದೆ.

ಕಳೆದ ಮೂರು ವರ್ಷಗಳಿಂದ ಕಾಡಿದ ಕೊರೊನಾದಿಂದಾಗಿ ಕಾಯಿ ಪಲ್ಯೆಗಳ ದರ ಗಣನೀಯವಾಗಿ ಕುಸಿತ ಕಂಡಿದ್ದರಿAದ ಕಂಗಾಲಾಗಿದ್ದ ಬೆಳೆಗಾರರಿಗೆ ಈ ಬಾರಿ ಕೆಸಕ್ಕೆ ಉತ್ತಮ ಧಾರಣೆ ಇರುವುದರಿಂದ ಬೆಳೆಗಾರರು ಸಂತಸದಲ್ಲಿದ್ದಾರೆ.

ಕೆಜಿಯೊAದರ ಕೆಸಕ್ಕೆ ಇದೀಗ ಮಾರುಕಟ್ಟೆಯಲ್ಲಿ ೪೦ ರೂ. ಇದೆ. ಒಂದು ಟನ್‌ಗೆ ೪೦ ಸಾವಿರ ಇದೆ.

ಒಂದು ಎಕರೆ ಹೊಲದಲ್ಲಿ ೧೨ ರಿಂದ ೧೩ ಟನ್ ಕೆಸ ಬೆಳೆಯಲಾಗುತ್ತದೆ. ಒಂದು ಎಕರೆಗೆ ೮೦ ಸಾವಿರ ಖರ್ಚು ತಗಲುತ್ತದೆ. ಸಾಮಾನ್ಯವಾಗಿ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಬಿತ್ತನೆ ಮಾಡುವ ಕೆಸದ ಫಸಲು ಹತ್ತು ತಿಂಗಳ ಅವಧಿಯಲ್ಲಿ ಕಟಾವಿಗೆ ಬರುತ್ತದೆ.

ಕುಶಾಲನಗರ ತಾಲೂಕಿನ ಹೆಬ್ಬಾಲೆ, ಅಳುವಾರ, ತೊರೆನೂರು, ಸಿದ್ದಲಿಂಗಪುರ, ಗುಡ್ಡೆಹೊಸೂರು ಮೊದಲಾದ ಪ್ರದೇಶಗಳಲ್ಲಿ ಹೆಚ್ಚಾಗಿ ಈ ಕೆಸವನ್ನು ಬೆಳೆಯಲಾಗುತ್ತದೆ.

ದಕ್ಷಿಣ ಭಾರತದ ಬಹುತೇಕ ಪ್ರದೇಶಗಳ ಜನರು ಇದನ್ನು ಹೆಚ್ಚಾಗಿ ಬಳಸುತ್ತಾರೆ. ನೆರೆಯ ಕೇರಳ ಹಾಗೂ ತಮಿಳುನಾಡಿನಲ್ಲು ಇದನ್ನು ಹೆಚ್ಚಾಗಿ ಸವಿಯುತ್ತಾರೆ.

ಕೊಡಗು ಜಿಲ್ಲೆಯ ಬಹುತೇಕ ತರಕಾರಿ ಅಂಗಡಿಗಳಲ್ಲಿ ಕಾಣ ಸಿಗುವ ಈ ಕೆಸ ತರಕಾರಿ ಗೆಡ್ಡೆಯನ್ನು ಕೆಲವೊಂದು ಬಾರಿ ಕೆ.ಜಿ.ಗೆ ೧೦೦ ರೂ.ಗಳಿಗೂ ಮಾರಾಟ ಮಾಡುವುದುಂಟು. ಸ್ಥಳೀಯವಾಗಿ ಈ ಕೆಸದ ಸೊಪ್ಪಿನಿಂದ ಪಲ್ಯಗಳು ಹಾಗೂ ಗೆಡ್ಡೆಯಿಂದ ಹಲವು ಖಾದ್ಯಗಳನ್ನು ಮಾಡಲಾಗುತ್ತದೆ.

ಈ ಕೆಸದ ಗೆಡ್ಡೆಯಲ್ಲಿ ಹೇರಳವಾದ ಪೋಷಕಾಂಶಗಳಿವೆ. ದೇಹಕ್ಕೆ ಅವಶ್ಯವಿರುವ ೬.೭ ರಷ್ಟು ನಾರಿನಾಂಶ, ಶೇ. ೩೦ ರಷ್ಟು ಮ್ಯಾಂಗನೀಸ್, ವಿಟಮಿನ್ ಬಿ೬, ಪೊಟ್ಯಾಶಿಯಂ, ತಾಮ್ರ, ರಂಜಕ, ಮ್ಯಾಗ್ನಿಷಿಯಂ, ವಿಟಮಿನ್ ಸಿ, ವಿಟಮಿನ್ ಇ ಮೊದಲಾದ ಪೋಷಕಾಂಶಗಳನ್ನು ಇದು ನೀಡುತ್ತದೆ.

ಬಾಳೆ ಎಲೆಯ ಮಾದರಿಯಲ್ಲಿನ ಕೆಸದ ಎಲೆಯಿಂದ ವಿವಿಧ ತಿನಿಸುಗಳನ್ನು ಸಿದ್ಧಗೊಳಿಸಿ ಸವಿಯಲಾಗುತ್ತದೆ. ಕೆಸದ ಸೊಪ್ಪಿನ ಪತ್ರೊಡೆ ವಿಶೇಷ ಖಾದ್ಯವಾಗಿದೆ. ವರುಷಕ್ಕೊಮ್ಮೆ ಇದರ ಎಲೆಯನ್ನು ವಿವಿಧ ಮಾದರಿಯಲ್ಲಿ ಖಾದ್ಯಗಳನ್ನು ಮಾಡಿಕೊಂಡು ಸವಿದಲ್ಲಿ ಹೊಟ್ಟೆಯಲ್ಲಿನ ಕಲ್ಮಶಗಳು ಸ್ವಚ್ಛಗೊಳ್ಳುತ್ತವೆ ಎನ್ನಲಾಗುತ್ತಿದೆ.

ಅಲ್ಲದೇ ಚರ್ಮಕ್ಕೆ ಹಾನಿ ಯುಂಟು ಮಾಡುವ ವೈರಸ್‌ಗಳನ್ನು ಈ ವಿಟಮಿನ್‌ಗಳು ನಾಶ ಪಡಿಸುತ್ತವೆ. ಕೆಸವನ್ನು ಕುಶಾಲನಗರ ತಾಲೂಕಿನ ಹೆಬ್ಬಾಲೆ, ತೊರೆನೂರು, ಶಿರಂಗಾಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬೆಳೆಯಲಾಗುತ್ತದೆ. ಹಾಗೆಯೇ ನೆರೆಯ ಪಿರಿಯಾಪಟ್ಟಣ ತಾಲೂಕಿನ ಕೆಲವೆಡೆಗಳಲ್ಲಿ ಬೆಳೆಯಲಾಗುತ್ತದೆ ಎಂದು ಕೆಸ ಬೆಳೆಗಾರರಾದ ಅಳುವಾರದ ಎ.ಪಿ. ರಮೇಶ್, ಸಿದ್ದಲಿಂಗಪುರದ ಎಂ.ಟಿ. ಬೇಬಿ ಹೇಳುತ್ತಾರೆ.

- ಕೆ.ಎಸ್. ಮೂರ್ತಿ