ಸೋಮವಾರಪೇಟೆ, ಡಿ. ೨೫: ಮತ್ತೆ ಕೊರೊನಾ ಹೆಚ್ಚಾಗುವ ಮುನ್ಸೂಚನೆ ಇರುವುದರಿಂದ ಇತ್ತೀಚೆಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಆರಂಭಿಸಲಾಗಿರುವ ಆರೋಗ್ಯ ಉಪಕೇಂದ್ರಗಳನ್ನು ಗ್ರಾಮಸ್ಥರು ಸಂಪರ್ಕಿಸುವ ಮೂಲಕ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕೆಂದು ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಂ. ಪ್ರಶಾಂತ್ ಮನವಿ ಮಾಡಿದರು.
ಬೇಳೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ೨೦೨೨-೨೩ನೇ ಸಾಲಿನ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಎರಡು ತಿಂಗಳಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಳೂರು ಮತ್ತು ಬಳಗುಂದದಲ್ಲಿ ಆರೋಗ್ಯ ಉಪಕೇಂದ್ರವನ್ನು ತೆರೆಯಲಾಗಿದ್ದು, ಈಗಾಗಲೇ ಗ್ರಾಮಸ್ಥರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗುವುದಕ್ಕೂ ಮುಂಚೆ ಮಾಸ್ಕ್ ಮತ್ತು ಸ್ಯಾನಿಟೈಸರ್ಗಳನ್ನು ಬಳಸುವ ಮೂಲಕ ಮುಂಜಾಗೃತೆ ವಹಿಸಬೇಕು ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಮಹತ್ವಾ ಕಾಂಕ್ಷಿ ಯೋಜನೆಯಾದ ಜಲ ಜೀವನ್ ಮಿಷನ್ ಯೋಜನೆ ಯಡಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಮನೆಮನೆಗಳಿಗೂ ನೀರಿನ ವ್ಯವಸ್ಥೆ ಕಲ್ಪಿಸುವುದು ನಮ್ಮ ಗುರಿಯಾಗಿದೆ. ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಕೀರ್ತನ್ ಸಭೆಯಲ್ಲಿ ತಿಳಿಸಿದರು.
ಕಿಸಾನ್ ಯೋಜನೆಯಲ್ಲಿ ಹಕ್ಕುಪಡೆದ ೩೩೫ ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರವು ಧನಸಹಾಯ ನೀಡುತ್ತಿದ್ದು, ಈ ನಿಟ್ಟಿನಲ್ಲಿ ಬಜೆ ಗುಂಡಿಯ ಗ್ರಾಮಸ್ಥರು ಸಂಬAಧಿತ ದಾಖಲಾತಿಗಳನ್ನು ಗ್ರಾಮ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕೆಂದು ಸಮಾಜ ಕಲ್ಯಾಣ ಇಲಾಖಾಧಿ ಕಾರಿಗಳು ಮಾಹಿತಿ ನೀಡಿರುತ್ತಾರೆ ಎಂದು ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು. ಬಜೆಗುಂಡಿ, ಕೆಂಚಮ್ಮನಬಾಣೆ ಮತ್ತು ಕಾರೆಕೊಪ್ಪದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಕೂಡಲೇ ಪೊಲೀಸ್ ಇಲಾಖೆ ಮತ್ತು ಅಬಕಾರಿ ಇಲಾಖೆಗೆ ದೂರು ನೀಡಿ ಕಾನೂನು ಕ್ರಮ ಜರುಗಿಸಬೇಕೆಂದು ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ಪಕ್ಕದಲ್ಲೇ ಇರುವ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳಿಂದ ತೊಂದರೆಯಾಗಲಿದೆ. ಈ ನಿಟ್ಟಿನಲ್ಲಿ ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ ಶಾಲಾ ಮುಂಭಾಗ ಬ್ಯಾರಿಕೇಡ್ ಅಥವಾ ಹಂಪನ್ನು ಅಳವಡಿಸಿಕೊಡಬೇಕೆಂದು ಗ್ರಾಮಸ್ಥರು ಮನವಿ ಮಾಡಿಕೊಂಡರು.
ಕೃಷಿ ಇಲಾಖೆಗೆ ಸಂಬAಧಿಸಿದ ಮಾಹಿತಿಗಳನ್ನು ಇಲಾಖೆಯ ಸಿಬ್ಬಂದಿಗಳು ನೀಡಬೇಕೆಂದು ಗ್ರಾಮಸ್ಥರಾದ ಬಳಗುಂದದ ಸುರೇಶ್ ಸಭೆಯ ಗಮನಕ್ಕೆ ತಂದರು. ಮಳೆಹಾನಿ ಪರಿಹಾರದ ಕುರಿತು ಸಮಗ್ರ ಮಾಹಿತಿಯನ್ನು ನೀಡಬೇಕೆಂದು ತೋಟಗಾರಿಕಾ ಇಲಾಖಾಧಿಕಾರಿಗಳಿಗೆ ಗ್ರಾಮಸ್ಥರಾದ ಹೇಮಂತ್ ಮತ್ತಿತರರು ಮನವಿ ಮಾಡಿದರು. ಈ ಕುರಿತು ಈಗಾಗಲೇ ಮಳೆಹಾನಿಯಿಂದ ತೊಂದರೆ ಗೊಳಗಾದ ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ನೀಡಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿ ಆನಂದ್, ದೀಪಿಕಾ ಅವರು ಸಭೆಗೆ ಮಾಹಿತಿ ನೀಡಿದರು.
ಇದೇ ಸಂದರ್ಭ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಬೇಕು, ಎಲ್ಲೆಂದರಲ್ಲಿ ಕಸವನ್ನು ಎಸೆಯುವುದರ ಕುರಿತು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಗಮನಹರಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು.
ಸಭೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಉದ್ಯೋಗಖಾತ್ರಿ ಯೋಜನೆ, ಪರಿಶಿಷ್ಟಜಾತಿ ಮತ್ತು ಪಂಗಡಗಳಿಗೆ ದೊರಕುವ ಸೌಲಭ್ಯಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೌಲಭ್ಯಗಳನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕೆಂದು ಅಧ್ಯಕ್ಷ ಬಿ.ಎಂ. ಪ್ರಶಾಂತ್ ಮನವಿ ಮಾಡಿದರು. ಈ ಸಂದರ್ಭ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡು ಅಗತ್ಯ ಮಾಹಿತಿ ನೀಡಿದರು. ಗ್ರಾಮಸಭೆಯಲ್ಲಿ ಉಪಾಧ್ಯಕ್ಷೆ ಸುಜಾತ ಮಂಜುನಾಥ್, ನೋಡಲ್ ಅಧಿಕಾರಿ ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಾದಾಮಿ, ಪಿಡಿಓ ಸುರೇಶ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳು, ಸಿಬ್ಬಂದಿಗಳು ಹಾಜರಿದ್ದರು.