ಸೋಮವಾರಪೇಟೆ, ಡಿ. ೨೪: ಇಲ್ಲಿನ ಟೀಂ ಎ.ಬಿ.ಡಿ. ವತಿಯಿಂದ ಸೋಮವಾರಪೇಟೆ ಪ್ರೀಮಿಯರ್ ಲೀಗ್ (ಎಸ್.ಪಿ.ಎಲ್. ಸೀಸನ್-೨) ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ದೊರೆತಿದ್ದು, ತಾ. ೨೫ರಂದು (ಇಂದು) ಫೈನಲ್ ಪಂದ್ಯಾಟ ಸೇರಿದಂತೆ ಸಮಾರೋಪ ಸಮಾರಂಭ ನಡೆಯಲಿದೆ.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ಐಪಿಎಲ್ ಮಾದರಿ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದೆ. ಸ್ಥಳೀಯ ಕ್ರೀಡಾಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಟೀಂ. ಎಬಿಡಿ ತಂಡದಿAದ ಎರಡನೇ ವರ್ಷದ ಪಂದ್ಯಾಟ ಆಯೋಜನೆಗೊಂಡಿದೆ.

ಕ್ರಿಕೆಟ್ ಪಂದ್ಯಾವಳಿಯಲ್ಲಿ ೧೧ ತಂಡಗಳು ಭಾಗವಹಿಸಿದ್ದು, ೩೨ ಪಂದ್ಯಗಳು ನಡೆಯಲಿವೆ. ಮೊದಲ ಬಹುಮಾನ ರೂ. ೫೦ ಸಾವಿರ, ದ್ವಿತೀಯ ರೂ. ೩೦ ಸಾವಿರ, ತೃತೀಯ ರೂ. ೧೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ನೀಡಲಾಗುವುದು. ಇದರೊಂದಿಗೆ ಪಂದ್ಯಾಟದಲ್ಲಿ ಭಾಗಿಯಾಗುವ ಉತ್ತಮ ತಂಡ, ಉತ್ತಮ ನಾಯಕ, ಉತ್ತಮ ಕ್ಯಾಚ್, ಕೀಪರ್, ಬೌಲರ್, ಪಂದ್ಯ ಪುರುಷೋತ್ತಮ, ಉತ್ತಮ ಆಟಗಾರ ಬಹುಮಾನ ನೀಡಲಾಗುವುದು ಎಂದು ಟೀಂ ಎಬಿಡಿ ಅಧ್ಯಕ್ಷ ಎಸ್.ಐ. ಚೇತನ್ ತಿಳಿಸಿದ್ದಾರೆ.

ಸೋಮವಾರಪೇಟೆ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ತಾ. ೨೫ ರಂದು (ಇಂದು) ಬೆಳಿಗ್ಗೆ ೧೦ ಗಂಟೆಯಿAದ ಜಿಲ್ಲೆ ಹಾಗೂ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಆಗಮಿಸುವ ಆರ್‌ಎಕ್ಸ್ ಬೈಕ್‌ಗಳೊಂದಿಗೆ ಪಟ್ಟಣದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ನಡೆಯಲಿದೆ. ನಂತರ ಮೈದಾನದಲ್ಲಿ ಆರ್‌ಎಕ್ಸ್ ಬೈಕ್‌ಗಳ ಪ್ರದರ್ಶನ, ನಿಧಾನವಾಗಿ ಬೈಕ್ ಚಾಲಿಸುವ ಸ್ಪರ್ಧೆ, ಮಾರುತಿ ೮೦೦ ಕಾರನ್ನು ಹಿಂದಕ್ಕೆ ಚಾಲಿಸುವ ಸ್ಪರ್ಧೆ, ೧೪ ವರ್ಷದಿಂದ ಒಳಗಿನ ಹಾಗೂ ನಂತರದ ಮಕ್ಕಳಿಗೆ ಎರಡು ವಿಭಾಗದಲ್ಲಿ ನಿಧಾನವಾಗಿ ಸೈಕಲ್ ಚಾಲಿಸುವ ಸ್ಪರ್ಧೆ, ೧೨೦೦ ಮೀಟರ್ ಓಟದ ಸ್ಪರ್ಧೆ ನಡೆಯಲಿದೆ. ಇದರೊಂದಿಗೆ ಆರ್‌ಎಕ್ಸ್ ಬೈಕ್ ಮತ್ತು ಮಾರುತಿ ೮೦೦ ಕಾರುಗಳನ್ನು ಸೂಕ್ತ ನಿರ್ವಹಣೆ ಮಾಡಿದವರಿಗೆ (ವೆಲ್‌ಮೈಂಟನ್ಸ್) ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.

೧೦.೩೦ಕ್ಕೆ ಕೊಡಗು ನಾವು ಪ್ರತಿಷ್ಠಾನದ ವತಿಯಿಂದ ಚನ್ನಬಸಪ್ಪ ಸಭಾಂಗಣದಲ್ಲಿ ೫೦೦ ವೀರಪುತ್ರರ ಐತಿಹಾಸಿಕ ಅಂಚೆ ಲಕೋಟೆಗಳ ಹಾಗೂ ನಾಣ್ಯಗಳ ಪ್ರದರ್ಶನ ನಡೆಯಲಿದೆ. ಕರ್ನಾಟಕ ಬುಕ್ ಆಫ್ ರೆಕಾಡ್ಸ್ ಪ್ರಶಸ್ತಿ ಪುರಸ್ಕೃತ ಹಾಸನದ ಎಚ್.ಕೆ.ಸತೀಶ್ ಅವರು ನಾಣ್ಯಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.