ವೀರಾಜಪೇಟೆ, ಡಿ. ೨೪: ಗ್ರಾಮಗಳಲ್ಲಿರುವ ಗ್ರಾಮಸ್ಥರನ್ನು ಒಂದೂಗೂಡಿಸುವAತೆ ಮಾಡುವುದು ಗ್ರಾಮೀಣ ಕ್ರೀಡಾಕೂಟಗಳು ದೈಹಿಕವಾಗಿ ಸಮರ್ಥರಾಗಲು ಕ್ರೀಡಾಕೂಟಗಳು ಸಹಕಾರಿ ಎಂದು ಸಾಹಿತಿ ಮತ್ತು ನಿವೃತ್ತ ಸಹ ಪ್ರಾಧ್ಯಾಪಕಿ ಡಾ. ಸುಲೋಚನ ನಾರಾಯಣ ಹೇಳಿದರು. ಜಿಲ್ಲಾ ಪಂಚಾಯಿತಿ ಕೊಡಗು, ತಾಲೂಕು ಪಂಚಾಯಿತಿ ವೀರಾಜಪೇಟೆ ಮತ್ತು ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪುತ್ತಮಕ್ಕಿ ಕೆದಮುಳ್ಳೂರು ಶಾಲಾ ಮೈದಾನದಲ್ಲಿ ನಡೆದ ಗ್ರಾಮೀಣ ಕ್ರೀಡಾಕೂಟಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಸುಲೋಚನ ಅವರು, ಗ್ರಾಮಸ್ಥರು ವಿವಿಧ ಜನಪದ, ಕಲೆ, ಕ್ರೀಡೆಗಳಲ್ಲಿ ಪರಿಣಿತಿ ಹೊಂದಿರುತ್ತಾರೆ. ಇವುಗಳನ್ನು ಬೆಳಕಿಗೆ ತರುವಲ್ಲಿ ಗ್ರಾಮ ಪಂಚಾಯಿತಿಗಳು ಮುಂದಾಗಬೇಕು. ಕ್ರೀಡೆಗಳು ಭಾಂದವ್ಯ, ಸಹಕಾರ, ಒಗ್ಗಟ್ಟುಗಳನ್ನು ಒಂದು ಮಾಡುವ ವಿಶೇಷ ಶಕ್ತಿ, ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಅಯೋಜಿಸಿರುವ ಕ್ರೀಡಾಕೂಟವು ಶ್ಲಾಘನೀಯ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ವತಿಯಿಂದ ವಿಶೇಷ ಸಾಧನೆಗೈದ ಗ್ರಾಮಸ್ಥರಾದ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೊಡಗಿನ ಕೃಷಿ ಸಂಸ್ಕೃತಿ ಎಂಬ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಪ್ರಾಂಶುಪಾಲ ಮಾಳೇಟಿರ ಡಾ. ಎಂ.ಬಿ. ಕಾವೇರಿಯಪ್ಪ, ಪುತ್ತಮಕ್ಕಿ ಶಾಲೆಯಲ್ಲಿ ಸುದೀರ್ಘ ಸೇವೆಗೈದು ನಿವೃತ್ತರಾದ ಶಿಕ್ಷಕಿ ಜಯಶ್ರೀ, ಕೊಟ್ಟೋಳಿ ಸ.ಕಿ.ಪ್ರಾ. ಶಾಲೆಯ ನಿವೃತ್ತ ಶಿಕ್ಷಕಿ ಆನಂದಿನಿ, ಕೆದಮುಳ್ಳೂರು ವಿ.ಎಸ್.ಎಸ್.ಎನ್ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ. ಮಣಿ ಮಾಚಯ್ಯ, ಮತ್ತು ಕ್ರೀಡೆಯಲ್ಲಿ ವಿಶೇಷ ಸಾಧನೆಗೈದ ಮಾಳೆಟಿರ ದಿಶಾ ಪೊನ್ನಮ್ಮ ಅವರುಗಳನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಡಾ. ಕಾವೇರಿಯಪ್ಪ, ಶಿಕ್ಷಕರಾದ ಜಯಶ್ರೀ, ಹಿರಿಯರಾದ ಮಣಿ ಮಾಚಯ್ಯ ಅವರು ಮಾತನಾಡಿದರು. ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಡಿಕೇರಿಯಂಡ ಶೀಲಾ ಮೇದಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕೆದಮುಳ್ಳೂರು, ಪಾಲಂಗಾಲ ಮತ್ತು ಕೊಟ್ಟೋಳಿ ಗ್ರಾಮಗಳ ಗ್ರಾಮಸ್ಥರಿಗಾಗಿ ನಡೆದ ಕ್ರೀಡಾಕೂಟದಲ್ಲಿ ವಾಲಿಬಾಲ್, ಹಗ್ಗಜಗ್ಗಾಟ, ಬಾರದ ಗುಂಡು ಎಸೆತ, ಕಬಡ್ಡಿ ಮಹಿಳೆಯರಿಗಾಗಿ ಲೆಮನ್ ಆ್ಯಂಡ್ ಸ್ಪೂನ್, ಶಾಲಾ ವಿದ್ಯಾಥಿಗಳಿಗಾಗಿ ೧೦೦ ಮಿ ಓಟದ ಸ್ಪರ್ಧೆ, ಕಾಳು ಹೆಕ್ಕುವುದು ನಡೆಯಿತು. ವಾಲಿಬಾಲ್ ಕ್ರೀಡೆಯಲ್ಲಿ ವಿವಿಧ ಗ್ರಾಮಗಳ ಒಟ್ಟು ೧೨ ತಂಡಗಳು, ಕಬಡ್ಡಿಯಲ್ಲಿ ಒಟ್ಟು ೧೦ ತಂಡಗಳು, ಹಗ್ಗಜಗ್ಗಾಟದಲ್ಲಿ ಪುರುಷರ ವಿಭಾಗದಲ್ಲಿ ೧೨ ತಂಡ, ಮಹಿಳೆಯರ ವಿಭಾಗದಲ್ಲಿ ಒಟ್ಟು ೧೦ ತಂಡಗಳು ಭಾಗವಹಿಸಿದ್ದವು.

ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಶೈನಿ ತಂಡ ಪ್ರಥಮ, ಪಾಲಂಗಾಲ ತಂಡ ದ್ವಿತೀಯ ಸ್ಥಾನ ಪಡೆದುಕೊಂಡರು, ಪುರುಷರ ವಿಭಾಗದಲ್ಲಿ ಪುತ್ತಮಕ್ಕಿ ತಂಡ ಪ್ರಥಮ, ಕೊಟ್ಟೋಳಿ ತಂಡ ದ್ವಿತೀಯ, ವಾಲಿಬಾಲ್ ಪಂದ್ಯಾಟದಲ್ಲಿ ಕೊಟ್ಟೋಳಿ ಬ್ರರ‍್ಸ್ ಪ್ರಥಮ, ಸ್ಟಾರ್ ಬಾಯ್ಸ್ ಕೊಟ್ಟೋಳಿ ದ್ವಿತೀಯ ಸ್ಥಾನ ಪಡೆದುಕೊಂಡರು, ಭಾರದ ಗುಂಡು ಎಸೆತ ಸ್ಪರ್ಧೆ ಮಹಿಳಾ ವಿಭಾಗದಲ್ಲಿ ಪುಷ್ಪ ಕೆ.ಸಿ ಪ್ರಥಮ, ವನಜಾ ದ್ವಿತೀಯ, ಪುರುಷರ ವಿಭಾಗದಲ್ಲಿ ಷಂಶುದ್ದೀನ್ ಪ್ರಥಮ ಮಾಳೇಟಿರ ಜೀವನ್ ದ್ವಿತೀಯ, ಕಬಡ್ಡಿ ಪಂದ್ಯಾಟದಲ್ಲಿ ಬ್ಲಾಕ್ ತಂರ‍್ಸ್ ಪ್ರಥಮ ತೋಮರ ಫ್ರೇಂಡ್ಸ್ ದ್ವೀತಿಯ ಸ್ಥಾನಗಳನ್ನು ಪಡೆದುಕೊಂಡಿತು. ವಿಜೇತರಿಗೆ ಗ್ರಾಮ ಪಂಚಾಯಿತಿ ವತಿಯಿಂದ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ಬೇಟೋಳಿ ಸ.ಹಿ.ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಎಂ.ಕೆ. ತಿಮ್ಮಯ್ಯ ಮತ್ತು ಶಾರದ ಪ್ರೌಢಶಾಲೆ ಬೆಕ್ಕೆಸೊಡ್ಲೂರು ದೈಹಿಕ ಶಿಕ್ಷಕ ಆರ್.ಎಸ್. ಚೌಹಾನ್ ಅವರಗಳು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಕೆದಮುಳ್ಳೂರು ಗ್ರಾಮ ಪಂಚಾಯಿತಿ ಪಿ.ಡಿ.ಓ ಪ್ರಮೋದ್, ಕಾರ್ಯದರ್ಶಿ, ಸಿಬ್ಬಂದಿಗಳು ಮತ್ತು ಕೆದಮುಳ್ಳೂರು ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರು, ಕೆದಮುಳ್ಳೂರು, ಪಾಲಂಗಾಲ, ಕೊಟ್ಟೋಳಿ ಗ್ರಾಮಗಳ ಗ್ರಾಮಸ್ಥರು ಕ್ರೀಡಾಕೂಟದ ಕಾರ್ಯಕ್ರಮದಲ್ಲಿ ಹಾಜರಿದ್ದರು.