ಗೋಣಿಕೊಪ್ಪಲು, ಡಿ. ೨೪: ಶಾಲಾ ಹಂತದಲ್ಲಿ ಯುವ ಪ್ರತಿಭೆಗಳಿಗೆ ವೇದಿಕೆಗಳು ಹೆಚ್ಚಾಗಿ ಸಿಗುವಂತಾಗಬೇಕು, ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರತಿಭೆಗಳು ಅಡಗಿರುತ್ತವೆ. ಆದರೆ ಸೂಕ್ತ ವೇದಿಕೆಗಳಿಲ್ಲದೆ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಅನಾವರಣಗೊಳಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪ್ರತಿಭೆಗಳಿಗೆ ವೇದಿಕೆಗಳು ಹೆಚ್ಚಾಗಿ ಸಿಗುವಂತಾಗಬೇಕು ಎಂದು ಕಾವೇರಿ ಕಾಲೇಜು ಎಜುಕೇಷನ್ ಸೊಸೈಟಿಯ ನಿರ್ದೇಶಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ ತಿಳಿಸಿದರು.
ಗೋಣಿಕೊಪ್ಪಲುವಿನ ಕಾವೇರಿ ಪದವಿಪೂರ್ವ ಕಾಲೇಜು ವತಿಯಿಂದ ತಾಲೂಕು ಮಟ್ಟದ ನೃತ್ಯ ಹಾಗೂ ಹಗ್ಗಜಗ್ಗಾಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು, ಪ್ರತಿಯೋರ್ವ ವಿದ್ಯಾರ್ಥಿಯಲ್ಲಿಯೂ ವಿಭಿನ್ನವಾದ ಪ್ರತಿಭೆಗಳು ಅಡಗಿರುತ್ತವೆ. ಇವುಗಳನ್ನು ಶಾಲಾ ಹಂತದಲ್ಲಿ ಹೊರ ತರಲು ಶಿಕ್ಷಕರು ಮುಂದಾಗಬೇಕು.
ಅಲ್ಲದೆ ಅಂತಹ ಪ್ರತಿಭೆಗಳಿಗೆ ವೇದಿಕೆಗಳು ನಿರ್ಮಾಣವಾಗಬೇಕು ಇದರಿಂದ ವಿದ್ಯಾರ್ಥಿಯೂ ತನ್ನ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಹಕಾರವಾಗಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಮಾಯಮುಡಿಯ ಕಾಫಿ ಬೆಳೆಗಾರ ಕಾಳಪಂಡ ಟಿಪ್ಪು ಬಿದ್ದಪ್ಪ ಕೊಡಗಿನಲ್ಲಿ ಕಾವೇರಿ ಕಾಲೇಜು ಉತ್ತಮ ಪರಿಸರದಲ್ಲಿ ನಿರ್ಮಾಣವಾಗಿದೆ. ಈ ಸಂಸ್ಥೆಯನ್ನು ಹಿರಿಯರು ಶ್ರಮಪಟ್ಟು ಕಟ್ಟಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ದೇಶ ಹಾಗೂ ವಿದೇಶದಲ್ಲಿ ಉತ್ತಮ ಹುದ್ದೆಯನ್ನು ಅಲಂಕರಿಸಿದ್ದಾರೆ.
ಉತ್ತಮ ಶಿಕ್ಷಕ ವೃಂದ ಮಕ್ಕಳ ಪಾಠ ಹಾಗೂ ಪಠ್ಯೇತರ ಚಟುವಟಿಕೆಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ತೇರ್ಗಡೆಯಾಗುತ್ತಿರುವುದು ಶ್ಲಾಘನೀಯ ಎಂದರು.
ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೆಪ್ಪುಡಿರ ಎಂ.ಅಪ್ಪಯ್ಯ, ಕಾವೇರಿ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಕುಲ್ಲಚಂಡ ಪಿ. ಬೋಪಣ್ಣ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಣ್ಣುವಂಡ ಎಸ್. ಮಾದಯ್ಯ ಮಾತನಾಡಿದರು.
ಕಾರ್ಯಕ್ರಮದಲ್ಲಿ ದಾನಿಗಳಾದ ಸೌಮ್ಯ ನಾಗೇಶ್, ಮಾಯಮುಡಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಸಿ. ವಾಣಿ ನಂಜಪ್ಪ, ಉದ್ಯಮಿ ಆದೇಂಗಡ ತನುಜ, ತೀರ್ಪುಗಾರರಾದ ಕೆ.ಎಸ್. ಜ್ಯೋತಿ, ಚೇಂದಿರ ನಿರ್ಮಲ ಬೋಪಣ್ಣ, ಕಾಲೇಜಿನ ಉಪನ್ಯಾಸಕರುಗಳಾದ ಎಂ.ಬಿ. ಪೂವಮ್ಮ, ಸಬ್ನ ಸೋಮಯ್ಯ, ಕಾರ್ಯಕ್ರಮದ ಸಂಚಾಲಕಿ ಎಂ.ಕೆ. ಪದ್ಮಾ, ಪಿ.ಸಿ. ಬ್ರೆöÊಟಕುಮಾರ್ ಸೇರಿದಂತೆ ಇನ್ನಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ರೀಡೆಯಲ್ಲಿ ವಿದ್ಯಾರ್ಥಿಗಳು ವಿಶೇಷ ಆಸಕ್ತಿ ವಹಿಸುವಂತೆ ಕಾವೇರಿ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಇಟ್ಟಿರ ಬಿದ್ದಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಗ್ರಾಮೀಣ ಕ್ರೀಡೆಯಾದ ಹಗ್ಗಜಗ್ಗಾಟ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಈ ವೇಳೆ ಕಾಲೇಜಿನ ದೈಹಿಕ ಶಿಕ್ಷಕ ಮಲ್ಲಮಾಡ ಟಿ. ಸಂತೋಷ್, ಮಿನ್ನಂಡ ಜೋಯಪ್ಪ, ಚೇತನ್ಚಿಣ್ಣಪ್ಪ, ಎಂ.ಆರ್. ಅಕ್ರಮ್, ಸಚಿನ್ ನಾಯಕ್, ಮೀನಾಕ್ಷಿ, ಪೂವಮ್ಮ, ಎಂ.ಎ. ಕುಶಾಲಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಮೊದಲ ಬಾರಿಗೆ ಫುಡ್ಫೆಸ್ಟ್ ಆಯೋಜಿಸಿದ್ದರು. ವಿವಿಧ ಬಗೆಯ ಆಹಾರಗಳು ನಾಗರಿಕರ ಗಮನ ಸೆಳೆದವು.
ತಾಲೂಕು ಮಟ್ಟದ ಕಾವೇರಿ ಕಲರವ ಸ್ಪರ್ಧೆಯಲ್ಲಿ ೧೦೦ಕ್ಕೂ ಹೆಚ್ಚು ಪ್ರೌಢಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮೂರು ವಿಭಾಗದಲ್ಲಿ ಮೂರು ಬಹುಮಾನ ಪಡೆದ ಕಳತ್ಮಾಡು ಲಯನ್ಸ್ ಪ್ರೌಢಶಾಲಾ ತಂಡ ಚಾಂಪಿಯನ್ ಪ್ರಶಸ್ತಿಗೆ ಭಾಜನವಾಯಿತು.
ಹಗ್ಗಜಗ್ಗಾಟ, ಗುಂಪು ನೃತ್ಯ ಮತ್ತು ವೇಷಭೂಷಣ ಸ್ಪರ್ಧೆಗಳು ಗಮನ ಸೆಳೆದವು. ರೋಮಾಂಚನಕಾರಿ ಹಗ್ಗಜಗ್ಗಾಟದಲ್ಲಿ ಗೋಣಿಕೊಪ್ಪ ಅನುದಾನಿತ ಪ್ರೌಢಶಾಲೆ ಪ್ರಥಮ, ಕಳತ್ಮಾಡು ಲಯನ್ಸ್ ದ್ವಿತೀಯ, ಅರುವತ್ತೋಕ್ಕಲು ಸರ್ವದೈವತಾ ತೃತಿಯ ಸ್ಥಾನ ಪಡೆದವು. ಜಾನಪದ ನೃತ್ಯ ಸ್ಪರ್ಧೆಯಲ್ಲಿ ಲಯನ್ಸ್ ಪ್ರಥಮ, ಪಾಲಿಬೆಟ್ಟ ಸರ್ಕಾರಿ ಪ್ರೌಢಶಾಲೆ ದ್ವಿತೀಯ ಸರ್ವದೈವತಾ ತೃತೀಯ, ತಮ್ಮದಾಗಿಸಿಕೊಂಡವು. ವೇಷಭೂಷಣದಲ್ಲಿ ಲಯನ್ಸ್ ಪ್ರಥಮ, ಪಾಲಿಬೆಟ್ಟ ಸರ್ಕಾರಿ ಪ್ರೌಢಶಾಲೆ ದ್ವಿತಿಯ, ಸರ್ವದೈವತಾ ತೃತಿಯ ಸ್ಥಾನ ತೃಪ್ತಿಪಟ್ಟುಕೊಂಡಿತ್ತು.