ಸಿದ್ದಾಪುರ, ಡಿ. ೨೫: ಸಿದ್ದಾಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಉಪಟಳ ನೀಡುತ್ತಿರುವ ಒಂಟಿ ಸಲಗವೊಂದನ್ನು ಸೆರೆಹಿಡಿಯಲು ತಾ. ೨೬ ರ ಇಂದಿನಿAದ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಲು ಮುಂದಾಗಿದೆ. ಸಿದ್ದಾಪುರದ ಕರಡಿಗೋಡು ಇಂಜಿಲಗೆರೆ ಗುಹ್ಯ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿದ್ದ ಹಾಗೂ ಮಾನವನ ಮೇಲೆ ದಾಳಿ ನಡೆಸಿ ಪ್ರಾಣ ಹಾನಿ ಮಾಡುತ್ತಿರುವ ಸಲಗವೊಂದನ್ನು ಸೆರೆಹಿಡಿಯಲು ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಜ್ಜುಗೊಂಡಿದ್ದಾರೆ.

ಅಲ್ಲದೇ ಕಾರ್ಯಾಚರಣೆಯ ತಂಡದವರು ಸಾಕಾನೆಗಳೊಂದಿಗೆ ಕರಡಿಗೋಡು ಗ್ರಾಮದಲ್ಲಿ ಬೀಡುಬಿಟ್ಟಿದ್ದಾರೆ. ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಅಮ್ಮತ್ತಿ ಹಾಗೂ ಸಿದ್ದಾಪುರದ ಭಾಗದಲ್ಲಿ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟು ದಾಂಧಲೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಉಪಟಳ ನೀಡುತ್ತಿರುವ ಎರಡು ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲು ಸರ್ಕಾರವು ಆದೇಶ ನೀಡಿದೆ.

ಸರ್ಕಾರದ ಆದೇಶದ ಮೇರೆಗೆ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಎರಡು ಸಲಗಗಳನ್ನು ಸೆರೆಹಿಡಿಯುವ ನಿಟ್ಟಿನಲ್ಲಿ ಅದರ ಚಲನವಲನವನ್ನು ಕಂಡು ಹಿಡಿದಿದ್ದಾರೆ. ಅಲ್ಲದೇ ಸೆರೆಹಿಡಿಯುವ ಆನೆಗಳನ್ನು ಗುರುತಿಸಲಾಗಿದೆ. ಇದೀಗ ಇಂದಿನಿAದ ನಾಲ್ಕು ಸಾಕಾನೆಗಳಾದ ಅಭಿಮನ್ಯು, ಧನಂಜಯ, ಪ್ರಶಾಂತ್, ಭೀಷ್ಮ ಈ ನಾಲ್ಕು ಸಾಕಾನೆಗಳ ನೆರವಿನಿಂದ ೫೦ ಮಂದಿ ಸಿಬ್ಬಂದಿಗಳು ಸೇರಿ ಕಾರ್ಯಾಚರಣೆ ನಡೆಸಲಿದ್ದಾರೆ.

ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಸ್. ಮೂರ್ತಿರವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ತಾಲೂಕು ಡಿಸಿಎಫ್ ಚಕ್ರಪಾಣಿ, ಎಸಿಎಫ್ ನೆಹರು ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿ ಕಳ್ಳಿರ ದೇವಯ್ಯ, ಉಪವಲಯ ಅರಣ್ಯಾಧಿಕಾರಿ ಸಂಜೀತ್ ಸೋಮಯ್ಯ, ಶೂಟರ್ ಅಕ್ರಂ, ವನ್ಯಜೀವಿ ವೈದ್ಯಾಧಿಕಾರಿಗಳಾದ ಡಾ|| ಚೆಟ್ಟಿಯಪ್ಪ ಭಾಗವಹಿಸಲಿದ್ದಾರೆ.

-ವರದಿ:ವಾಸು