ಚೆಯ್ಯಂಡಾಣೆ, ಡಿ. ೨೩ : ನರಿಯಂದಡ ಗ್ರಾಮ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ವಿಶೇಷ ಪೊಲೀಸ್ ಘಟಕ ಕೊಡಗು ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಗ್ರಾಮ ಸಭೆ ನಡೆಯಿತು.

ನರಿಯಂದಡ ಪ್ರೌಢ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿ ಕೆ.ಯು. ಪೌಝಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾದರೆ ಕೂಡಲೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಬೇಕು. ಸರಕಾರ ನಡೆಸುವ ಇಂತಹ ಕಾರ್ಯಕ್ರಮ ಉತ್ತಮವಾಗಿದೆ ಎಂದರು.

ಮಕ್ಕಳಿಗೆ ಪೌಷ್ಟಿಕತೆಯ ಬಗ್ಗೆ ಚೆಯ್ಯಂಡಾಣೆ ಸರಕಾರಿ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಕನಕಾವತಿ ಮಾಹಿತಿ ನೀಡಿದರು.

ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಆರ್ಥಿಕ ಹಿಂದುಳಿದ ಮಕ್ಕಳಿಗೆ ದೊರೆಯುವ ಸಹಾಯ ಧನದ ಬಗ್ಗೆ ವಿದ್ಯಾರ್ಥಿಗಳಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸ್ವಾತಿ ಸವಿಸ್ತಾರವಾಗಿ ವಿವರಿಸಿದರು.

ನರಿಯಂದಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಸ್ತಿನ ಬಗ್ಗೆ ಹಾಗೂ ಮಕ್ಕಳಿಗೆ ಪ್ರಥಮ ಆದ್ಯತೆ ಇದೆ. ಏನೇ ಸಮಸ್ಯೆ ಬಂದರು ಕೂಡ ಗ್ರಾಮ ಪಂಚಾಯಿತಿ ಅಥವಾ ಮಕ್ಕಳ ರಕ್ಷಣಾ ಇಲಾಖೆಗೆ ಮಾಹಿತಿ ನೀಡಲು ಹಾಗೂ ಕಡ್ಡಾಯ ಶಿಕ್ಷಣದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಈ ಸಂದರ್ಭ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಯಶ್ರೀ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪುಷ್ಪ, ಕಾರ್ಯದರ್ಶಿ ಬಿದ್ದಪ್ಪ, ಗ್ರಾಮ ಪಂಚಾಯಿತಿ ಸದಸ್ಯರು, ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲಾ ಶಿಕ್ಷಕರು, ಸಂಜೀವಿನಿ ಒಕ್ಕೂಟದ ಸದಸ್ಯರು, ಸ್ವಸಹಾಯ ಸಂಘದ ಸದಸ್ಯರುಗಳು ಮತ್ತಿತರರು ಉಪಸ್ಥಿತರಿದ್ದರು.