ಕುಶಾಲನಗರ, ಡಿ. ೨೩ : ಕುಶಾಲನಗರದ ಬದ್ರುನ್ನಿಸ ಬಡಾವಣೆಯಲ್ಲಿ ಕುಶಾಲನಗರದ ಖಾಸಗಿ ವ್ಯಕ್ತಿಯೋರ್ವರು ಅಕ್ರಮವಾಗಿ ೨೦ ಸೆಂಟ್ ಪಾರ್ಕ್ ಜಾಗ ಖರೀದಿಸಿದ್ದಾರೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಆರೋಪಿಸಿದ್ದಾರೆ. ಕುಶಾಲನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಟವೊಂದು ಭೂಕಬಳಿಕೆ ದಂಧೆಯಲ್ಲಿ ತೊಡಗಿದೆ. ಅಕ್ರಮವನ್ನು ತಡೆಯಬೇಕಾದ ಆಡಳಿತ ಪಕ್ಷ ಬಿಜೆಪಿ ಜಾಣಮೌನ ವಹಿಸಿದೆ. ಭೂಕಬಳಿಕೆದಾರ ರಿಯಲ್ ಎಸ್ಟೇಟ್ ಮಾಫಿಯಗಳ ಕೈಗೆ ಬಿಜೆಪಿ ಅಧಿಕಾರ ನೀಡಿದೆ. ಮಾಜಿ ಕುಡ ಅಧ್ಯಕ್ಷ ನರಸಿಂಹಮೂರ್ತಿ, ಅಧಿಕಾರಿ ರಾಜಶೇಖರ್ ಮೃತರಾಗಿದ್ದು, ಅವರ ಹೆಸರು ಬಳಸಿಕೊಂಡು ಷಡ್ಯಂತ್ರ ರೂಪಿಸಲಾಗಿದೆ.

ಪಾರ್ಕ್ ಜಾಗ ಮತ್ತೊಂದು ಬಡಾವಣೆಗೆ ವರ್ಗಾಯಿಸಲಾಗಿದೆ ಎಂಬ ಹೇಳಿಕೆ ಬಾಲಿಶವಾದದ್ದು, ಅಕ್ರಮ ಪ್ರಶ್ನಿಸಬೇಕಾದ ಚುನಾಯಿತ ಜನಪ್ರತಿನಿಧಿ ಅಮೃತ್‌ರಾಜ್ ಜಾತಿ ಹೆಸರಿನಲ್ಲಿ ಅಕ್ರಮಕ್ಕೆ ಪರೋಕ್ಷವಾಗಿ ಶ್ರೀರಕ್ಷೆ ನೀಡುವ ಹುನ್ನಾರ ನಡೆಸಿದ್ದಾರೆ ಎಂದು ಶಶಿಧರ್ ಆರೋಪಿಸಿದರು. ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಅಮೃತ್‌ರಾಜ್ ತಮ್ಮ ಜವಾಬ್ದಾರಿಯುತ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು. ಖಾಸಗಿಯವರಿಗೆ ಪಾರ್ಕ್ ಜಾಗ ಖಾತೆ ಮಾಡಿಕೊಡಲು ಸಹಕರಿಸಿದ ಪಟ್ಟಣ ಪಂಚಾಯಿತಿ ಸಿಬ್ಬಂದಿ ರಾಘವ ಅವರನ್ನು ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು.

ಇಲ್ಲದಿದ್ದಲ್ಲಿ ಪಂಚಾಯಿತಿ ವೈಫಲ್ಯ ಖಂಡಿಸಿ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು. ಜಿಲ್ಲಾಧಿಕಾರಿಗಳು ಕೂಡ ಈ ಬಗ್ಗೆ ಗಮನಹರಿಸುವಂತೆ ಅವರು ಕೋರಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕುಡ ಮಾಜಿ ಅಧ್ಯಕ್ಷ ಬಿ.ಜಿ.ಮಂಜುನಾಥ್ ಮಾತನಾಡಿ, ಪಾರ್ಕ್ ಜಾಗ ಸಂರಕ್ಷಣೆಗೆ ಕ್ರಮವಹಿಸಲು ಒತ್ತಾಯಿಸಿದರು. ಪಟ್ಟಣ ಪಂಚಾಯಿತಿ ಸದಸ್ಯ ಖಲೀಮುಲ್ಲಾ, ಕಾಂಗ್ರೆಸ್ ಮುಖಂಡರಾದ ಶಿವಶಂಕರ್, ಅಜಿತ್, ಚಂದ್ರು ಇದ್ದರು.