ಗುಡ್ಡೆಹೊಸೂರು, ಡಿ. 22: ಇಲ್ಲಿನ ಬೊಳ್ಳೂರು ಗ್ರಾಮದ ಸರ್ವೆ ನಂ. 1\1 ಉರೋಡವೆ ಪೈಸಾರಿ ಜಾಗದಲ್ಲಿ ಒಟ್ಟು 250 ಕುಟುಂಬಗಳು ವಾಸವಾಗಿದ್ದು, ಅನೇಕ ವರ್ಷಗಳಿಂದ ಹಕ್ಕು ಪತ್ರಕ್ಕಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಅಲ್ಲದೆ ಹೋರಾಟ ಸಮಿತಿ ರಚನೆ ಮಾಡಲಾಗಿತ್ತು. ಕಳೆದ ವರ್ಷ ಶಾಸಕ ಅಪ್ಪಚ್ಚು ರಂಜನ್ ಅವರ ಸಮ್ಮುಖದಲ್ಲಿ ಅರಣ್ಯ ಹಕ್ಕು ಸಮಿತಿ ರಚನೆ ಮಾಡಿ ನಂತರ ಸರ್ವೆ ಕಾರ್ಯ ನಡೆಸಲಾಗಿತ್ತು. ತದನಂತರ ವಾಸವಿದ್ದ ಅಲ್ಲಿನ ನಿವಾಸಿಗಳ ನಿವೇಶನಗಳ ಸರ್ವೆ ಕಾರ್ಯ ನಡೆಸಿ ಸೂಕ್ತ ಅರ್ಜಿಗಳನ್ನು ಗ್ರಾಮ ಪಂಚಾಯಿತಿಗೆ ನೀಡಲು ಸೂಚಿಸಲಾಗಿತ್ತು.

ಈ ಸಂಬಂಧ ಗ್ರಾಮ ಪಂಚಾಯಿತಿಗೆ ಸಂದಾಯವಾದ ಅರ್ಜಿಗಳನ್ನು ಪರಿಶೀಲನೆ ನಡೆಸಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂದಿನಿ, ಅಭಿವೃದ್ಧಿ ಅಧಿಕಾರಿ ಶ್ಯಾಂ ತಮ್ಮಯ್ಯ, ಕಾರ್ಯದರ್ಶಿ ಕುಮಾರ ಸ್ವಾಮಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಹೋರಾಟ ಸಮಿತಿ ಸದಸ್ಯರು ಮತ್ತು ಅಲ್ಲಿನ ಅರಣ್ಯ ಹಕ್ಕು ಸಮಿತಿ ಸದಸ್ಯ ನಾರಾಯಣ ಹಾಗೂ 200ಕ್ಕೂ ಹೆಚ್ಚು ಗ್ರಾಮಸ್ಥರು ಹಾಜರಿದ್ದರು.