ಭಾಗಮಂಡಲ, ಡಿ. 22: ಗೌಡ ಜನಾಂಗ ಬಾಂಧವರು ಮನೆ ಮನೆಯಲ್ಲಿ ಅರೆಭಾಷೆ ಮಾತನಾಡು ವುದರ ಮೂಲಕ ಮುಂದಿನ ಪೀಳಿಗೆಗೆ ಭಾಷೆಯ ಅರಿವು ಮೂಡಿಸುವುದರಿಂದ ಭಾಷೆ ಕೂಡ ಉಳಿಯಲಿದೆ ಎಂದು ಮಾಜಿ ಸೈನಿಕ ನಿಡ್ಯಮಲೆ ನವೀನ್ ಹೇಳಿದರು. ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ವತಿಯಿಂದ ಭಾಗಮಂಡಲದ ನಿಡ್ಯಮಲೆ ಐನ್ ಮನೆಯಲ್ಲಿ ಅರೆಭಾಷೆ ದಿನಾಚರಣೆ ಅಂಗವಾಗಿ ಗೌಡ ಪದ್ಧತಿಗಳ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅರೆಭಾಷೆ ದಿನಾಚರಣೆಗೆ ಮತ್ತು ಸಬೆ ಸಮಾರಂಭಗಳಿಗೆ ಮಾತ್ರ ಸೀಮಿತವಾಗದೆ ದಿನನಿತ್ಯದ ಬದುಕಿನಲ್ಲಿ ಭಾಷೆಯನ್ನು ಅನುಸರಿಸಬೇಕು ಎಂದರು.

ಇನ್ನೋರ್ವ ಮುಖ್ಯ ಅತಿಥಿ ಮತ್ತಾರಿ ರಾಜ ಮಾತನಾಡಿ, ಇಂಗ್ಲಿಷ್ ವ್ಯಾಮೋಹದಿಂದಾಗಿ ಇಂದು ಎಲ್ಲಾ ಜನಾಂಗದಲ್ಲಿ ಮಾತೃಭಾಷೆ ನಶಿಸಿ ಹೋಗುತ್ತಿದೆ. ಎಲ್ಲರೂ ತಮ್ಮ ಮಾತೃಭಾಷೆಯನ್ನು ಬಳಸಿದರೆ ಭಾಷೆ ಉಳಿಯಲಿದೆ ಎಂದರು. ಮುಖ್ಯ ಅತಿಥಿ ಆನೇರ ರಾಮಕೃಷ್ಣ (ಲಾಲು) ಮಾತನಾಡಿ ನಮ್ಮ ಜನಾಂಗದ ಸಂಸ್ಕøತಿ ಮನೆಗೊಂದು ಊರಿಗೊಂದು ಆಗದೆ ಎಲ್ಲರೂ ಒಂದೇ ರೀತಿ ಮಾಡಿದಲ್ಲಿ ಸಂಸ್ಕøತಿ ಮತ್ತು ಪದ್ಧತಿಯು ಮುಂದೆ ಶಕ್ತಿಶಾಲಿಯಾಗಿ ಬೆಳೆಯಲಿದೆ ಎಂದರು. ಕುದುಪಜೆ ಪ್ರಕಾಶ್ ಮತ್ತು ಕುಯ್ಯಮುಡಿ ಮನೋಜ್ ಮಾತನಾಡಿ, ನಮ್ಮ ಐನ್‍ಮನೆಗಳಲ್ಲಿ ಹಿಂದೆ ನಡೆಯುತ್ತಿದ್ದ ಪದ್ಧತಿಗಳನ್ನು ವಿವರಿಸಿ ಐನ್‍ಮನೆಯ ಮಹತ್ವ ವಿವರಿಸಿದರು. ಸುಮಾರು 2 ಗಂಟೆಗಳ ಕಾಲ ನಡೆದ ಅರೆಭಾಷೆ ಪದ್ಧತಿ ಸಂವಾದದ ಕಾರ್ಯಕ್ರಮದಲ್ಲಿ ಕೂಡಕಂಡಿ ಲಕ್ಷ್ಮಣ, ನಂಗಾರು ಶಿವಣ್ಣ ಪಾಂಡಿ, ಯೋಗೇಂದ್ರ, ಬಾರಿಕೆ ತೀರ್ಥ ಕುಮಾರ್, ಕೇಟೋಳಿ ದೀಪಕ್ ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಭಾಗಮಂಡಲ ನಾಡು ಯುವ ಒಕ್ಕೂಟದ ಅಧ್ಯಕ್ಷ ಕುದುಕುಳಿ ಕಿಶೋರ್ ಕುಮಾರ್ ವಹಿಸಿದ್ದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂವಾದ ಕಾರ್ಯಕ್ರಮದ ವೀಡಿಯೋ ರೆಕಾರ್ಡ್ ಮಾಡಲಾಗಿದ್ದು, ಸಂಗ್ರಹಿಸಿ ಇಡಲಾಗುವುದು. ಮುಂದಿನ ಪೀಳಿಗೆಗೆ ದಾಖಲೀಕರಣ ಮಾಡಿ ತಲುಪಿಸುವ ಕಾರ್ಯವನ್ನು ಮಾಡಲಾಗುವುದು ಎಂದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್, ಸದಸ್ಯ ಸಿರಿಕಜೆ ನಾಗೇಶ್, ಕಾರ್ಯದರ್ಶಿ ನಿಡ್ಯಮಲೆ ಚಲನ್, ಖಜಾಂಚಿ ನಿಡ್ಯಮಲೆ ರವೀಂದ್ರ, ಸಹ ಕಾರ್ಯದರ್ಶಿ ಕೂಡಕಂಡಿ ಚೇತನ್, ನಿರ್ದೇಶಕರಾದ ಸುನಿಲ್ ಕುಯ್ಯಮುಡಿ, ಸುರೇಂದ್ರ ಕೋಳಿಬೈಲು, ಅಶ್ವತ್ ಕುದುಕುಳಿ, ಪುನಿತ್ ನಂಗಾರು, ಕಾವೇರಿ ಮನೆ ಧರಣಿ ಉಪಸ್ಥಿತರಿದ್ದರು.