ಸುಂಟಿಕೊಪ್ಪ, ಡಿ. ೨೩: ಶಿಸ್ತು ಇಲ್ಲದೆ ಶಿಕ್ಷಣವಿಲ್ಲ, ಕ್ರೀಡೆ ಶಿಸ್ತು ಬದ್ಧವಾದ ವಿದ್ಯಾಭ್ಯಾಸವನ್ನು ಪಡೆಯುವಲ್ಲಿ ಸಹಕಾರಿಯಾಗಲಿದೆ. ಜೀವನದಲ್ಲಿ ಯಶಸ್ಸನ್ನು ಪಡೆಯಲು ರಹದಾರಿಯಾಗುತ್ತದೆ ಎಂದು ಮೈಸೂರು ಡಯಾಸಿನ್ ಶಿಕ್ಷಣ ಸಂಸ್ಥೆಗಳ ರೆ.ಫಾ. ವಿಜಯಕುಮಾರ್ ಹೇಳಿದರು.

ಸುಂಟಿಕೊಪ್ಪದ ಸಂತ ಮೇರಿ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಮಕ್ಕಳು ಕೇವಲ ಉತ್ತಮ ಅಂಕ ಗಳಿಸಿದರೆ ಸಾಕು ಎಂಬ ಭಾವನೆಯಲ್ಲಿ ಕ್ರೀಡೆಯಲ್ಲಿ ಹಿನ್ನಡೆ ಸಾಧಿಸುತ್ತಿದ್ದಾರೆ. ಜೊತೆಗೆ ಗುರು ಹಿರಿಯರೊಂದಿಗೆ ಹೇಗೆ ವರ್ತಿಸಬೇಕು, ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದರ ಬಗ್ಗೆ ಅವರಿಗೆ ಅರಿವಿಲ್ಲ ಎಂಬುದು ಕೂಡ ಗೋಚರವಾಗುತ್ತಿದೆ ಎಂದರು.

ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದ ಮೈಸೂರು ಡಯಾಸಿನ್ ಶಿಕ್ಷಣ ಸಂಸ್ಥೆಗಳ ಖಜಾಂಚಿ ರೆ.ಫಾ. ಮದಲೈಮುತ್ತು ಮಾತನಾಡಿ, ಮಕ್ಕಳು ೮ ಗಂಟೆ ತರಗತಿಗಳಲ್ಲಿ ಕಳೆದರೆ ಕನಿಷ್ಟ ೧ ಗಂಟೆ ಮೈದಾನದಲ್ಲಿ ಕಳೆಯಬೇಕು ಎಂದು ಕರೆ ನೀಡಿದರು.

ಮೈಸೂರು ವಲಯ ಶೇಷ್ಠ ಗುರುಗಳಾದ ರೆ.ಮೆ. ಅಲ್ಫೆರ್ಡ್ ಜಾನ್ ಮೆಂಡೋನ್ಸಾ ಅವರು ಧ್ವಜಾ ರೋಹಣ ನೆರವೇರಿಸಿ ಮಾತನಾಡಿ, ಇಂದಿನ ಮಕ್ಕಳು ಯಾವುದೇ ಕೆಲಸ ಅಥವಾ ಕ್ರೀಡೆಗಳಲ್ಲಿ ಪಾಲ್ಗೊಳ್ಳದೆ ಇರುವುದರಿಂದ ಅವರ ದೈಹಿಕ, ಮಾನಸಿಕ ಕ್ಷಮತೆ ಕುಂಠಿತಗೊAಡಿದೆ ಎಂದರು.

ಕ್ರೀಡೆಗಳಲ್ಲಿ ಪಾಲ್ಗೊಳ್ಳುವು ದರಿಂದ ಆತ್ಮವಿಶ್ವಾಸ ವೃದ್ಧಿ, ಜೀವನದಲ್ಲಿ ಎದುರಾಗುವ ಸೋಲು ಗೆಲುವುಗಳನ್ನು ಎದುರಿಸುವ ಶಕ್ತಿ, ಒಂದು ತಂಡವಾಗಿ ಕೆಲಸ ನಿರ್ವಹಿಸುವ ಕುಶಲತೆ, ಸಾಮಾಜಿಕ ಜವಬ್ದಾರಿ ಮಕ್ಕಳಲ್ಲಿ ಬರಲಿದೆ ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಟ್ಟರಾಜು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಂಗರಾದಮಯ್ಯ, ಗ್ರಾ.ಪಂ. ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಮಾತನಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಹಟ್ಟಿಹೊಳೆ ನಿರ್ಮಲ ವಿದ್ಯಾಭವನ ವ್ಯವಸ್ಥಾಪಕ ರೆ.ಫಾ. ಗಿಲ್ಬರ್ಟ್ ಡಿಸಿಲ್ವಾ, ಸಂತ ಮೈಕಲರ ಶಿಕ್ಷಣ ಸಂಸ್ಥೆ ಮೇಲ್ವಿಚಾರಕ ರೆ.ಫಾ. ನವೀನ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸದಾಶಿವಯ್ಯ, ಸೋಮವಾರಪೇಟೆ ಶಿಕ್ಷಣ ಸಂಯೋಜನಾಧಿಕಾರಿ ಬಿ.ಎಂ. ಹೇಮಂತ್, ವಲಯ ಸಂಪನ್ಮೂಲ ಅಧಿಕಾರಿ ಎಂ.ಸಿ. ಸೀಮ, ಶಾಲಾ ವ್ಯವಸ್ಥಾಪಕರಾದ ರೆ.ಫಾ. ಅರುಳ್ ಸೆಲ್ವಕುಮಾರ್, ಶಾಲಾ ಮುಖ್ಯೋಪಾಧ್ಯಾಯ ಸೆಲ್ವರಾಜ್ ಹಾಗೂ ಶಿಕ್ಷಕರು ಇದ್ದರು.

ಶಾಲೆಯಲ್ಲಿ ಶಿಕ್ಷಣ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿ ರಾಜ್ಯ ಹಾಗೂ ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ಶಾಲೆಯ ಹಿರಿಯ ವಿದ್ಯಾರ್ಥಿಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಶಾಲೆಯಲ್ಲಿ ಸೇವೆ ಸಲ್ಲಿಸಿ ತೆರಳಿದ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು.

ಮಕ್ಕಳಿಂದ ಕವಾಯತ್, ಪಿರಮಿಡ್ ರಚನೆ, ಕರಾಟೆ ಸೇರಿದಂತೆ ವಿವಿಧ ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.