ಕೊಡ್ಲಿಪೇಟೆ, ಡಿ. ೨೩: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಪ್ರಸ್ತುತದ ಕಾಲಘಟ್ಟದಲ್ಲಿ ಮಡಿಕೇರಿ ವಿಧಾನ ಸಭಾ ಕ್ಷೇತ್ರಕ್ಕೆ ಸಂಬAಧಿಸಿದAತೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಬಹುತೇಕ ಎಲ್ಲಾ ಮುಖಂಡರು ಟಿಕೆಟ್ ಯಾರಿಗೇ ಲಭಿಸಿದರೂ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಕೈ ಕೈ ಹಿಡಿದು ಪ್ರಮಾಣ ಮಾಡಿದ್ದರಿಂದ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಮುಖವಾಗಿರುವ ಐವರು ಆಕಾಂಕ್ಷಿಗಳು ಕಾರ್ಯಕರ್ತರೆದುರು ಕೈ ಜೋಡಿಸಿ ಪ್ರಮಾಣ ಮಾಡುವ ಮೂಲಕ ನಮ್ಮಲ್ಲಿ ಗುಂಪುಗಾರಿಕೆ ಇಲ್ಲ; ಒಗ್ಗಟ್ಟಾಗಿಯೇ ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ ಎನ್ನುವ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.

ಕೊಡ್ಲಿಪೇಟೆಯ ಅಂಬೇಡ್ಕರ್ ಭವನ ಹಾಗೂ ಬ್ಯಾಡಗೊಟ್ಟದ ನೂರ್‌ಮಹಲ್‌ನಲ್ಲಿ ಆಯೋಜಿಸಿದ್ದ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿರುವ ಪ್ರಮುಖ ಐವರು ಆಕಾಂಕ್ಷಿಗಳು ಒಂದೇ ವೇದಿಕೆ ಹಂಚಿಕೊAಡಿದ್ದರು.

ಟಿಕೆಟ್ ಆಕಾಂಕ್ಷಿಗಳಾದ ಕೆ.ಪಿ.ಸಿ.ಸಿ. ಕಾರ್ಯದರ್ಶಿ ಹೆಚ್.ಎಸ್. ಚಂದ್ರಮೌಳಿ, ಮಾಜಿ ಸಚಿವ ಬಿ.ಎ. ಜೀವಿಜಯ, ಡಾ. ಮಂಥರ್ ಗೌಡ, ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ಬ್ಲಾಕ್ ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್ ಅವರುಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಟಿಕೆಟ್ ಯಾರಿಗೆ ದೊರಕಿದರೂ ಸಹ ಪಕ್ಷಕ್ಕಾಗಿ ದುಡಿಯುತ್ತೇವೆ. ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆಂದು ಆಕಾಂಕ್ಷಿಗಳು ಮೊದಲು ಘೋಷಿಸಬೇಕೆಂದು ವಲಯಾಧ್ಯಕ್ಷ ಔರಂಗಜೇಬ್ ಸೇರಿದಂತೆ ಇತರ ಕಾರ್ಯಕರ್ತರು ಮನವಿ ಮಾಡಿದರು.

ಈ ಸಂದರ್ಭ ಆಕಾಂಕ್ಷಿಗಳು, ಚುನಾವಣೆಯಲ್ಲಿ ಸ್ಪರ್ಧಿಸಲು ನಮ್ಮಲ್ಲಿ ಯಾರಿಗೆ ಅವಕಾಶ ದೊರಕಿದರೂ ನಾವೆಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ದುಡಿಯುತ್ತೇವೆಂದು ಕೈ ಕೈ ಹಿಡಿದು ಪ್ರಮಾಣ ಮಾಡಿದರು.

ಕೊಡ್ಲಿಪೇಟೆಯಲ್ಲಿ ವಲಯಾಧ್ಯಕ್ಷ ಔರಂಗಜೇಬ್ ಮತ್ತು ಬ್ಯಾಡಗೊಟ್ಟದಲ್ಲಿ ವಲಯಾಧ್ಯಕ್ಷ ಡಿ.ಎ. ಸುಲೈಮಾನ್ ಅವರುಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಹಿರಿಯ ಮುಖಂಡ ಎಸ್.ಎಂ. ಚಂಗಪ್ಪ, ಡಾ. ಉದಯ್‌ಕುಮಾರ್, ಪೊನ್ನಪ್ಪ, ಕೆ.ಎ. ಯಾಕೂಬ್, ಹೆಚ್.ವಿ. ಮಿಥುನ್, ಜೆ.ಎಲ್. ಜನಾರ್ದನ್ ಶಾಹಿದ್ ಖಾನ್, ಕೊಡ್ಲಿಪೇಟೆ ಗ್ರಾ.ಪಂ.ಅಧ್ಯಕ್ಷ ಶೋಭಿತ್ ಗೌಡ, ಬ್ಲಾಕ್ ಕಾರ್ಯದರ್ಶಿ ಸುನಿಲ್ ಸೇರಿದಂತೆ ಇತರರು ಸಭೆಯಲ್ಲಿ ಭಾಗಿಯಾಗಿದ್ದರು.