ಪೆರಾಜೆ, ಡಿ. ೨೩: ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಮಿತಿ ಆಶ್ರಯದಲ್ಲಿ ದೀಪೋತ್ಸವ ಮತ್ತು ಸನ್ಮಾನ ಸಮಾರಂಭ ಕಾರ್ಯಕ್ರಮವು ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ವಠಾರದಲ್ಲಿ ಪೆರಾಜೆ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಮಿತಿ ಅಧ್ಯಕ್ಷ ಸುರೇಶ್ ಪೆರುಮುಂಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ ಅವರು ಮಾತನಾಡಿ, ಹಿಂದೂ ಧರ್ಮದಲ್ಲಿ ಮನುಷ್ಯನಿಗೆ ಮುಕ್ತಿಯನ್ನು ಪಡೆಯುವ ನಂಬಿಕೆಯ ಹಲವು ಯಾತ್ರೆಗಳಿವೆ. ಅದರಲ್ಲಿ ಶ್ರೀ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಯಾತ್ರೆ ಪ್ರಮುಖವಾದದ್ದು. ೪೮ ದಿನಗಳ ಕಾಲ ದೇಹ ಮತ್ತು ಆತ್ಮ ಶುದ್ದಿಯೊಂದಿಗೆ ಮಿತವಾದ ಆಹಾರ, ಮೂರು ಹೊತ್ತಿನ ಸ್ನಾನ, ನಿತ್ಯ ದೇವರ ಸ್ಮರಣೆಯೊಂದಿಗೆ ಅಯ್ಯಪ್ಪ ದೇವರ ದರ್ಶನ ಪಡೆಯುವ ಕಾರ್ಯ ನಮ್ಮ ಹೆಮ್ಮೆ ಮತ್ತು ನಮ್ಮ ಧಾರ್ಮಿಕತೆಯ ಶ್ರೇಷ್ಠತೆಗೆ ಸಾಕ್ಷಿ.
ನಮ್ಮ ಇಡೀ ಬದುಕು ನಿಂತಿರುವುದು ದೇವರು ಮತ್ತು ಧರ್ಮದ ಮೇಲೆ. ನಾವು ಆ ಮೂಲಕ ಮನಃಶಾಂತಿಯನ್ನು ಪಡೆದುಕೊಳ್ಳುತ್ತೇವೆ. ಆದರೆ ಇಂದು ಧರ್ಮ ಎನ್ನುವುದು ಅಶಾಂತಿಗೆ ಕಾರಣವಾಗಿರುವ ಸಂಗತಿಗಳು ವಿಷಾದನಿಯ ಎಂದರು.
ಈ ಸಂದರ್ಭ ಪೆರಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಬಳ್ಳಡ್ಕ, ಪೆರಾಜೆ ಗ್ರಾಮ ಪಂಚಾಯಿತಿ ಸದಸ್ಯೆ ಭೂದೇವಿ ಪೆರಾಜೆ, ಗೌತಮ್ ಮೂಲೆಮಜಲು, ಪಿ.ಯಂ. ಬೋಜಪ್ಪ ಪೆರುಮುಂಡ, ತೇಜಪ್ರಸಾದ್ ಅಮಚೂರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಶ್ರೀ ಕೃಷ್ಣಪ್ಪ ಕೊಳಂಗಾಯ ಮತ್ತು ಕರ್ನಾಟಕ ರಾಜ್ಯ ಮೀಸಲು ಪೊಲೀಸ್, ನಿವೃತ್ತ ಸಬ್ ಇನ್ಸ್ಪೆಕ್ಟರ್ ಬಾಲಕೃಷ್ಣ ಕೆ.ವಿ. ಕುಂದಲ್ಪಾಡಿ ಅವರುಗಳನ್ನು ಸನ್ಮಾನಿಸ ಲಾಯಿತು. ತದನಂತರ ಯುವ ಸ್ಪೂರ್ತಿ ಸಂಘ ಕರಂಟಡ್ಕದಿAದ ಭಜನೆ, ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಕಲಾ ಸಂಘ, ಶ್ರೀ ಶಾಸ್ತಾವು ಯಕ್ಷಗಾನ ಕಲಾ ಸಂಘ ಮತ್ತು ಹಿರಿಯ ಅತಿಥಿ ಕಲಾವಿದ ಸಮ್ಮಿಲನದಿಂದ "ಶಿವ ಪಂಚಾಕ್ಷರಿ ಮಹಿಮೆ" ಎಂಬ ಯಕ್ಷಗಾನ ಬಯಲಾಟ, ಅಗ್ನಿಸೇವೆ, ಗುರುಪಾದ ವಂದನ, ಮತ್ತು ಪೂಜಾ ಕಾರ್ಯಕ್ರಮಗಳು, ಪ್ರಸಾದ ವಿತರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಗಿನಿತ್ ಪಾತಿಕಲ್ಲು ಪ್ರಾರ್ಥಿಸಿ, ದಯಾನಂದ ಬನ ಸ್ವಾಗತಿಸಿ, ಮೋಹನ್ ಪಡ್ಪು ವಂದಿಸಿದರು. ಮೋಹನ ಪೆರುಮುಂಡ ಕಾರ್ಯಕ್ರಮ ನಿರೂಪಿಸಿದರು.